ಬೇಲೂರಿನಲ್ಲಿ ಫೇಸ್‌ಬುಕ್‌ನಲ್ಲಿ ದಲಿತ ಸಮುದಾಯಕ್ಕೆ ನಿಂದನೆ ಆರೋಪ: ಬಂಧನ

| Published : Apr 28 2024, 01:20 AM IST

ಸಾರಾಂಶ

ಡಾ.ಬಿ.ಆರ್ ಅಂಬೇಡ್ಕರ್ ರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದ ಆರೋಪಿ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಬೇಲೂರಲ್ಲಿ ನಡೆದಿದೆ. ಆರೋಪಿ ಈಗ ಜೈಲು ಸೇರಿದ್ದಾನೆ.

ಅವಹೇಳನ । ಬೇಲೂರು ಠಾಣೆಯಲ್ಲಿ ದಾಖಲು । ಅಂಬೇಡ್ಕರ್‌ಗೆ ಛೋಟಾ ಭೀಮ್‌ ಎಂದು ಜರಿದಿದ್ದ ಆರೋಪಿ

ಕನ್ನಡಪ್ರಭ ವಾರ್ತೆ ಬೇಲೂರು

ಸಂವಿಧಾನ ಪಿತಾಮಹ ಡಾ.ಬಿ.ಆರ್ ಅಂಬೇಡ್ಕರ್ ರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದ ಆರೋಪಿ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಆರೋಪಿ ಈಗ ಜೈಲು ಸೇರಿದ್ದಾನೆ.

ಏ.24 ರಂದು ಸಂಜೆ 5 ಗಂಟೆಯಲ್ಲಿ ಪಟ್ಟಣದ ಲಕ್ಷ್ಮಿಪುರ ಬಡಾವಣೆಯ ವಿಷ್ಣುಪ್ರಸಾದ್ ಬಿ.ಕೆ ಎಂಬುವವರು ‘ನಮ್ಮ ಬೇಲೂರು’ ಎಂಬ ಫೇಸ್‌ಬುಕ್ ಪೇಜ್‌ನ ಮೂಲಕ ಯಾದಗಿರಿಯಲ್ಲಿ ನಡೆದ ದಲಿತ ಯುವಕನ ಹತ್ಯೆ ಸುದ್ದಿ ಕುರಿತು ಪೋಸ್ಟ್‌ ಮಾಡಿದ್ದ. ‘ದಲಿತರೇ ಎಲ್ಲಿದ್ದೀರಾ, ಛೋಟಾ ಭೀಮ್ ಅಭಿಮಾನಿಗಳು, ಸಂಘರ್ಷ ಹೋರಾಟಗಾರರು, ಯಾರೂ ಮಾತಾಡುತ್ತಲೇ ಇಲ್ಲವಲ್ಲ ಕಲಬೆರಕೆಗಳು, ಲದ್ದಿ ಜೀವಿಗಳು, ಮೊನ್ನೆ ಅಶಾಂತಿ ದೂತರ ಹಬ್ಬದ ದಿನ ಎಸೆದಿರೋ ಮೂಳೆಗಳನ್ನು ಇನ್ನೂ ಕಡೀತಾ ಇದ್ದೀರಾ, ನ್ಯಾಯವಾದಿಗಳೇ..’ ಎಂದು ಪೋಸ್ಟ್ ಮಾಡಿದ್ದ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಛೋಟಾ ಭೀಮ್ ಎಂದು ಅಪಮಾನಿಸಿದ್ದು ಹಾಗೂ ಶಾಂತಿದೂತರ ಹಬ್ಬದ ದಿನ ಎಸೆದಿರೋ ಮೂಳೆಗಳನ್ನು ಇನ್ನೂ ಕಡೀತಾ ಇದ್ದೀರಾ ಎಂದು ದಲಿತ ಸಮುದಾಯವನ್ನು ಅಪಮಾನಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಗೋವಿನಹಳ್ಳಿಯ ಚಂದ್ರಶೇಖರ್ ಎಂಬುವರು ನೀಡಿದ ದೂರು ಆಧರಿಸಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮಾತನಾಡಿ. ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ ಜ್ಞಾನದ ಸಂಕೇತ ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾ ಸಾಹೇಬರದ್ದು ಮತ್ತು ಮಾನವ ಕುಲಕ್ಕೆ ಅವರು ನೀಡಿದ ಜ್ಞಾನವನ್ನು ಅರಿತು ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನ ಎಂದು ಘೋಷಿಸಿದೆ. ಈ ಕ್ಷಣಕ್ಕೂ ಬಾಬಾ ಸಾಹೇಬರ ವಿದ್ಯಾರ್ಹತೆಗೆ ಸರಿಸಾಟಿಯಾದ ಒಬ್ಬನೇ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ. ಬೇಲೂರಿನ ವಿಷ್ಣುಪ್ರಸಾದ್ ರವರು ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದಿರುವುದು ಎಷ್ಟರಮಟ್ಟಿಗೆ ಸರಿ? ಈ ಕೂಡಲೇ ಈ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಸಂಘಟನ ಸಂಚಾಲಕ ಪ್ರದೀಪ್ ಕುಮಾರ್ ಪಿ.ಸಿ., ದಲಿತ ಮುಖಂಡರಾದ ಎಂ.ಜಿ.ನಿಂಗರಾಜು, ಗೋವಿನಹಳ್ಳಿ ಚಂದ್ರಶೇಖರ್, ಶೇಟ್ಟಿಗೆರೆ ರಘು, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಕೀರ್ತಿ, ಸೇರಿ ಮತ್ತಿತರ ಮುಖಂಡರು ಹಾಜರಿದ್ದರು.

ಫೇಸ್‌ಬುಕ್‌ನಲ್ಲಿ ಅಂಬೇಡ್ಕರ್‌ ಅವರ ಬಗ್ಗೆ ಅವಹೇಳಕಾರಿ ಪೋಸ್ಟ್‌ ಮಾಡಿ ಜೈಲು ಪಾಲಾಗಿರುವ ಆರೋಪಿ ವಿಷ್ಣುಪ್ರಸಾದ್.