ಆಕಸ್ಮಿಕ ಬೆಂಕಿ;10 ಹೆಚ್ಚು ಗುಡಿಸಲುಗಳು ಭಸ್ಮ

| Published : Apr 27 2024, 01:23 AM IST

ಸಾರಾಂಶ

ಆಕಸ್ಮಿಕ ಬೆಂಕಿ ತಗಲಿ ೧೦ ಗುಡಿಸಲುಗಳು ಭಸ್ಮವಾಗಿದ್ದು, ದವಸ, ಧಾನ್ಯ ಸೇರಿ ಹಲವು ವಸ್ತುಗಳು ಸಂಪೂರ್ಣ ಕರಕಲಾಗಿರುವ ಘಟನೆ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ

ಆಕಸ್ಮಿಕ ಬೆಂಕಿ ತಗಲಿ ೧೦ ಗುಡಿಸಲುಗಳು ಭಸ್ಮವಾಗಿದ್ದು, ದವಸ, ಧಾನ್ಯ ಸೇರಿ ಹಲವು ವಸ್ತುಗಳು ಸಂಪೂರ್ಣ ಕರಕಲಾಗಿರುವ ಘಟನೆ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿದ್ದ ೧೦ ಗುಡಿಸಲುಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ. ಗುಡಿಸಲಿನಲ್ಲಿದ್ದ ಹಣ, ಒಡವೆ, ದವಸ- ಧಾನ್ಯ, ಬಟ್ಟೆ, ಪುಸ್ತಕ, ಅಗತ್ಯ ವಸ್ತುಗಳು ಸೇರಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.

ಲೋಕಾಸಭಾ ಚುನಾವಣೆ ಹಿನ್ನೆಲೆ ಮನೆಯ ಎಲ್ಲರೂ ಮತದಾನ ಮಾಡಲು ಚಿಂಪುಗಾನಹಳ್ಳಿ ಗ್ರಾಮಕ್ಕೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ನಂದಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ನಿವಾಸಿ ರಂಗಮ್ಮ ಮಾತನಾಡಿ, ಸುಮಾರು ೨೦ ವರ್ಷಗಳಿಂದ ನಾವು ಇಲ್ಲಿಯೇ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಗುಡಿಸಲಲ್ಲಿದ್ದ ೪೦ ಮೇಕೆಗಳು ಸುಟ್ಟು ಹೋಗಿವೆ, ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.

ದಿನಸಿ ಕಿಟ್ ವಿತರಣೆ: ಚಿಂಪುಗಾನಹಳ್ಳಿ ಗ್ರಾಮದಲ್ಲಿ ೧೦ಕ್ಕೂ ಹೆಚ್ಚಿನ ಕುಟುಂಬಗಳಿರುವ ಗುಡಿಸಿಲಿನ ಮನೆಗಳಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಅನಿಲ್‌ಕುಮಾರ್, ಬಡಕುಟುಂಬಗಳಿಗೆ ಸಾಂತ್ವನ ಹೇಳಿ ದಿನಸಿ ಕಿಟ್‌ಗಳನ್ನು ವಿತರಿಸಿದರು, ಗ್ರಾಪಂ ಅಧಿಕಾರಿಗಳಿಗೆ ಶೀಘ್ರವೇ ನಿವೇಶನದ ವ್ಯವಸ್ಥೆ ನೀಡುವಂತೆ ತಿಳಿಸಿದರು.

ಸ್ಥಳಕ್ಕೆ ಸಿಪಿಐ ಅನಿಲ್, ಇಒ ಅಪೂರ್ವ ಅನಂತರಾಮು, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಮಂಡಲ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಸ್ವಾಮಿ, ಗ್ರಾಪಂ ಅಧ್ಯಕ್ಷ ನಾಗರಾಜು, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಯೋಗೀಶ್ ಸೇರಿ ಇತರರಿದ್ದರು.

ಜನಪ್ರತಿನಿಧಿಗಳು, ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತರು: ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಹಣ, ಒಡವೆ, ದವಸ ಧಾನ್ಯ, ಬಟ್ಟೆ, ಪುಸ್ತಕ, ಕುರಿಗಳು ಸೇರಿ ದಿನ ಬಳಕೆಯ ಅಗತ್ಯ ವಸ್ತುಗಳು ಸಂಪೂರ್ಣ ಕರಕಲಾಗಿವೆ. ಸದ್ಯ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿ ಬಡ ಕುಟುಂಬಗಳು ಬೀದಿಗೆ ಬಂದಿವೆ. ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ದಾನಿಗಳು ಇವರ ಕಷ್ಟಗಳಿಗೆ ಸ್ಪಂದಿಸಬೇಕಿದೆ.

ನಮ್ಮ ಗುಡಿಸಲುಗಳಿಗೆ ಟ್ರಾನ್ಸ್‌ಫಾರ್ಮರ್ ನಿಂದ ಬೆಂಕಿ ತಗುಲಿ ನಮ್ಮ ೧೦ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ನಮ್ಮ ಮನೆಯಲ್ಲಿದ್ದ ೫ ಮೇಕೆಗಳು ಸುಟ್ಟು ಹೋಗಿವೆ. ಈ ಹಿಂದೆ ಮೂರು ಬಾರಿ ಗುಡಿಸಲುಗಳಿಗೆ ಬೆಂಕಿ ಬಿದ್ದರೂ ಯಾವುದೇ ಅಧಿಕಾರಿಗಳು ನಮಗೆ ಸ್ಪಂದಿಸಿಲ್ಲ, ಮನೆಯಲ್ಲಿದ್ದ ದವಸ ಧಾನ್ಯಗಳ ಸುಟ್ಟು ಹೋಗಿವೆ, ಅಡಿಗೆ ಮಾಡವುದಕ್ಕೂ ಏನೂ ಇಲ್ಲ.

-ಹನುಮಂತರಾಜು ಸ್ಥಳೀಯ ನಿವಾಸಿ ಚಿಂಪುಗಾನಹಳ್ಳಿ.

ಸರ್ವೇ ನಂ. ೨೧೮ರಲ್ಲಿ ಸುಮಾರು ೩೦ಕ್ಕೂ ಹೆಚ್ಚು ಕುಟುಂಬಗಳು ಕಳೆದ ೨೦ ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ನಮ್ಮ ಗ್ರಾಪಂಯಿಂದ ಈಗಾಗಲೇ ಇವರಿಗೆ ನಿವೇಶನ ನೀಡಲು ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಚುನಾವಣೆ ಮುಗಿದ ನಂತರ ಇವರಿಗೆ ಇದೇ ಜಾಗದಲ್ಲಿ ನಿವೇಶನ ನೀಡುವ ವ್ಯವಸ್ಥೆ ಮಾಡುತ್ತೇವೆ.

-ಜಗದೀಶ್ ಗ್ರಾಪಂ ಸದಸ್ಯ ಚಿಂಪುಗಾನಹಳ್ಳಿ