ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ: ಡಾ.ಪ್ರಭಾ

| Published : Apr 27 2024, 01:23 AM IST

ಸಾರಾಂಶ

ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ, ಮೂಲ ಸೌಕರ್ಯ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿಯಾಗಿದೆ. ಎಸ್‌.ಎಸ್‌. ಕೇರ್ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ ಸೇವೆ, ಕಾರ್ಯಕ್ರಮಗಳನ್ನು ಕ್ಷೇತ್ರಾದ್ಯಂತ ವಿಸ್ತರಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ದಾವಣಗೆರೆ ಕ್ಷೇತ್ರ ಸಮಗ್ರ ಅಭಿವೃದ್ಧಿ ಗುರಿ ಎಂದ ಕಾಂಗ್ರೆಸ್ ಅಭ್ಯರ್ಥಿ । ಮಾಯಕೊಂಡ ತಾಲೂಕು ವಿವಿಧೆಡೆ ಮತಯಾಚನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ, ಮೂಲ ಸೌಕರ್ಯ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿಯಾಗಿದೆ. ಎಸ್‌.ಎಸ್‌. ಕೇರ್ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ ಸೇವೆ, ಕಾರ್ಯಕ್ರಮಗಳನ್ನು ಕ್ಷೇತ್ರಾದ್ಯಂತ ವಿಸ್ತರಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಲೋಕಿಕೆರೆ, ಶ್ಯಾಗಲೆ, ಹೂವಿನಮಡು, ಗೋಣಿವಾಡ, ಮತ್ತಿ, ಕದರನಹಳ್ಳಿ ಇತರೆ ಗ್ರಾಮಗಳಲ್ಲಿ ಶುಕ್ರವಾರ ಶಾಸಕ ಕೆ.ಎಸ್. ಬಸವಂತಪ್ಪ ಇತರರ ಜೊತೆಗೆ ಮತಯಾಚಿಸಿ ಮಾತನಾಡಿದ ಅವರು, ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಮೂಲ ಸೌಕರ್ಯಕ್ಕೆ ಒತ್ತು ನೀಡುತ್ತೇನೆ ಎಂದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 8 ತಿಂಗಳಲ್ಲಿ ಸುಮಾರು ₹98 ಕೋಟಿಯಷ್ಟು ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಸೌಲಭ್ಯ, ಸೇವೆ ನೀಡಿದ್ದೇವೆ. ಕಳೆದ 4 ಅವಧಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾಯಕೊಂಡ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾದರೂ ಏನು? ತಮಗೆ ಮತದಾರರು ಹೆಚ್ಚು ಮತ ನೀಡಿ, ಸಂಸದರಾಗಿ ಮಾಡಿದರೆ ಮಾಯಕೊಂಡ ಕ್ಷೇತ್ರದಲ್ಲಿ ನೀರಾವರಿ ಯೋಜನೆ ತಂದು, ಮಳೆಯಾಶ್ರಿತ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಚಿವರ ಜೊತೆಗೂಡಿ ಅಭಿವೃದ್ಧಿ ಕಾರ್ಯ:

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ 22 ಕೆರೆಗಳಿಗೆ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆಯಿಂದ ನೀರು ತುಂಬಿಸುವ ಕೆಲಸ ಮಾಡಿದ್ದಾರೆ. ಇನ್ನೂ ಹೆಚ್ಚಿನದಾಗಿ ಕೆಲಸ ಮಾಡಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಸಂಸದೆಯಾದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ ಜೊತೆಗಿದ್ದು, ಮಾಯಕೊಂಡ ಕ್ಷೇತ್ರಕ್ಕೆ ಕಾಯಕಲ್ಪ ನೀಡುವೆ ಎಂದು ತಿಳಿಸಿದರು.

ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಮುಖ್ಯ ಗುರಿಯಾಗಿದೆ. ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು, ಈ ಭಾಗದ ಶಾಸಕ ಕೆ.ಎಸ್. ಬಸವಂತಪ್ಪ ಅವರ ಸಹಕಾರದಲ್ಲಿ ಪ್ರತಿ ಮನೆ ಮನೆಗೂ ನೀರು ಪೂರೈಸಲಾಗುವುದು. ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ 5 ಗ್ಯಾರಂಟಿ ಭರವಸೆ ಜಾರಿಗೊಳಿಸಿದ್ದೇವೆ. ಈಗ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್‌ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದಲ್ಲಿ ಜಾರಿಗೊಳಿಸುವುದಕ್ಕೆ ಒತ್ತು ನೀಡುತ್ತೇನೆ ಎಂದು ಡಾ.ಪ್ರಭಾ ಹೇಳಿದರು.

ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 25 ಗ್ಯಾರಂಟಿ ಜಾರಿಗೊಳಿಸುವುದಾಗಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಹಿ ಮಾಡಿ, ಪ್ರಣಾಳಿಕೆ ನೀಡಿದ್ದಾರೆ. ಕೊಟ್ಟ ಮಾತನ್ನು ಕಾಂಗ್ರೆಸ್ ಸದಾ ಉಳಿಸಿಕೊಳ್ಳುವಂತಹ ಪಕ್ಷ. ದಾವಣಗೆರೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸೋಣ. ಮಾಯಕೊಂಡ ಮತದಾರರು ಅತಿ ಹೆಚ್ಚು ಮುನ್ನಡೆ ದೊರಕಿಸಿಕೊಡಿ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ, ಬಿ.ಜಿ.ನಾಗರಾಜ, ಲೋಕಿಕೆರೆ ಪ್ರದೀಪ, ಬಿ.ಎಚ್.ಹಾಲಪ್ಪ, ಪಿ.ಸಿ. ಗೋವಿಂದಸ್ವಾಮಿ, ಲೋಹಿತ್, ಸುರೇಶ ಪೈಲ್ವಾನ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಆಯಾ ಗ್ರಾಮಸ್ಥರು ಇದ್ದರು.

ಅಭ್ಯರ್ಥಿ ಪ್ರಭಾ ಅವರು ಶ್ಯಾಗಲೆ, ಹೂವಿನಮಡು, ಗೋಣಿವಾಡ, ಮತ್ತಿ, ಕದರನಹಳ್ಳಿ, ಅರೇಹಳ್ಳಿ, ತ್ಯಾವಣಿಗಿ, ಮಿಯ್ಯಾಪುರ, ಗೋಮಾಳ, ನಲ್ಕುದುರೆ ಗೋಮಾಳ, ಅಶೋಕ ಎನ್ ಕ್ಯಾಂಪ್, ನಲ್ಕುದುರೆ, ನವಿಲೇಹಾಳ್, ದೊಡ್ಡಘಟ್ಟ, ಕಬ್ಬಳ, ಸೇವಾನಗರ, ಮಧುರನಾಯಕನಹಳ್ಳಿ, ಮಧುರನಾಯ್ಕನಹಳ್ಳಿ ತಾಂಡ, ಗುಡ್ಡದ ಕೊಮಾರನಹಳ್ಳಿ, ಹಾಲೇಶಪುರ, ಜಿ.ಬಿ.ಹಳ್ಳಿ, ನೀಲೋಗಲ್, ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ, ಮತಯಾಚಿಸಿದರು.

- - - -26ಕೆಡಿವಿಜಿ1:

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಶುಕ್ರವಾರ ಮಾಯಕೊಂಡ ಕ್ಷೇತ್ರದಲ್ಲಿ ಮಹಿಳೆಯರು, ಹಿರಿಯರು, ಯುವತಿಯರ ಬಳಿ ಮತಯಾಚಿಸಿದರು. ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.

-26ಕೆಡಿವಿಜಿ2-ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಶುಕ್ರವಾರ ಮಾಯಕೊಂಡ ಕ್ಷೇತ್ರದಲ್ಲಿ ಮತಯಾಚಿಸಿ, ಮಾತನಾಡಿದರು. ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.