ಪುತ್ತೂರು ಕ್ಷೇತ್ರದಲ್ಲಿ ಶೇ.81.10 ಮತದಾನ

| Published : Apr 28 2024, 01:21 AM IST

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಪುತ್ತೂರು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಶೇ. ೮೧.೧೦ ಮತದಾನವಾಗಿದೆ. ಮತದಾನ ಹೆಚ್ಚಳವಾಗಿಸುವಲ್ಲಿ ತಾಲೂಕು ಸ್ವೀಪ್ ಸಮಿತಿಯ ಶ್ರಮ ಬಹಳಷ್ಟಿದೆ. ಈ ಬಾರಿ ಪುತ್ತೂರು ತಾಲೂಕು ಸ್ವೀಪ್ ಸಮಿತಿಯು ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಮತದಾನ ಶೇಖಡಾವಾರು ಹೆಚ್ಚಳ ಮಾಡುವಲ್ಲಿ ತನ್ನ ಕೊಡುಗೆ ನೀಡಿದೆ.

ಯುವ ಜನರನ್ನು ಮತಗಟ್ಟೆಯತ್ತ ಸೆಳೆಯಲು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ಮಕ್ಕಳಿಂದ ನಗರದ ಸಂತೆ ಇನ್ನಿತರ ಕಡೆಗಳಲ್ಲಿ ಬೀದಿ ನಾಟಕ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳಲ್ಲಿ ಅರಿವು, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್‌ ಅಳವಡಿಕೆ, ಮನೆ ಮನೆಗಳಿಗೆ ಚುನಾವಣಾ ಆಯೋಗದ ಮತದಾರರ ಮಾರ್ಗಸೂಚಿ ಹಂಚಿಕೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳಲ್ಲಿ ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳು ವಿವಿಧ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಪುತ್ತೂರು ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡಿತ್ತು.

ಮತದಾರರ ಸಾಕ್ಷರ ಸಂಘ: ಚುನಾವಣೆಯ ಬಗ್ಗೆ ಅರಿವು ಅತೀ ಹೆಚ್ಚು ಅಗತ್ಯವಿರುವುದು ಯುವ ಮತದಾರರಿಗೆ. ಅಲ್ಲದೆ ಹೆಚ್ಚಿನ ಮತದಾರರು ಯುವ ಮತದಾರರು. ಇದನ್ನು ಮನಗಂಡು ಪ್ರತಿಯೊಂದು ಕಾಲೇಜಿನಲ್ಲಿಯೂ ಮತದಾರರ ಸಾಕ್ಷರತಾ ಸಂಘವನ್ನು ಸ್ಥಾಪಿಸಲಾಗಿತ್ತು. ಈ ಸಂಘಗಳಿಗೆ ಕಾಲೇಜುಗಳ ನುರಿತ ಉಪನ್ಯಾಸಕರು ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಅಲ್ಲದೆ ಚುನಾವಣಾ ಪಟ್ಟಿಯಲ್ಲಿ ಹೆಸರ ನೋಂದಣಿ ಮಾಡುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ಇಲ್ಲಿ ಮಾಹಿತಿ ನೀಡಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಲಾಗುತ್ತಿತ್ತು. ಪುತ್ತೂರಿನ ವಿವಿಧ ಕಾಲೇಜುಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ, ಮತದಾನದ ಮಹತ್ವಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿತ್ತು. ವಿದ್ಯಾರ್ಥಿ ನಿಲಯಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗಿತ್ತು. ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ವಿವಿಧ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಬೀದಿ ನಾಟಕಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.

ಕಡಿಮೆ ಮತದಾನವಾದಲ್ಲಿ ಮಾಹಿತಿ: ತಾಲೂಕಿನಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಾದ ಕೇರಳ ಕರ್ನಾಟಕ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮತ್ತು ಗೋಳಿತ್ತಡಿ, ಪುತ್ತೂರು ನಗರ ಕಸ್ಬಾ ಗ್ರಾಮದ ರಾಗಿಕುಮೇರು ಪ್ರದೇಶಗಳಿಗೆ ತೆರಳಿ ಅಲ್ಲಿ ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸಿ ಅವರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ. ಜೊತೆಗೆ ೮೫ ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರಿಗೆ ಮನೆಗೆ ತೆರಳಿ ಮತದಾನ ಮಾಡಿಸುವ ಮೂಲಕ ಈ ಬಾರಿ ಮತ ಚಲಾವಣೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇವೆಲ್ಲದರ ಹಿಂದೆ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಅಧಿಕಾರಿಗಳ ಒಂದೂವರೆ ತಿಂಗಳ ಪ್ರಯತ್ನ, ಶ್ರಮ ಕಾರಣವಾಗಿದೆ.