ಬೆಂಗಳೂರು ಕೊತ ಕೊತ : ಬೆಂಕಿ ಬಿಸಿಯಲ್ಲಿ ಉದ್ಯಾನ ನಗರಿ

| Published : Apr 28 2024, 01:20 AM IST / Updated: Apr 28 2024, 06:10 AM IST

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ಮಾಸ ಏಪ್ರಿಲ್‌ನಲ್ಲಿ ಎರಡನೇ ಬಾರಿ 38 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ಶನಿವಾರ ದಾಖಲಾಗಿದೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ಮಾಸ ಏಪ್ರಿಲ್‌ನಲ್ಲಿ ಎರಡನೇ ಬಾರಿ 38 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ಶನಿವಾರ ದಾಖಲಾಗಿದೆ.

ಈ ಮೂಲಕ ಕಳೆದ 13 ವರ್ಷದ ಏಪ್ರಿಲ್‌ನಲ್ಲಿ ದಾಖಲಾದ ಎರಡನೇ ಗರಿಷ್ಠ ಉಷ್ಣಾಂಶವಾಗಿದೆ.

ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ದಾಖಲಾಗುತ್ತಿದೆ. ಶನಿವಾರ 38 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ಕಳೆದ ಏ.19ರಂದು 38 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು.

ಬೆಂಗಳೂರಿನ ಏಪ್ರಿಲ್‌ ವಾಡಿಕೆ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಶಿಯಸ್‌ ಆಗಿದ್ದು, ವಾಡಿಕೆ ಪ್ರಮಾಣಕ್ಕಿಂತ 4 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.

2016 ಹೊರತು ಪಡಿಸಿದರೆ, 2012ರಿಂದ ಈ ವರೆಗೆ ಇಷ್ಟೊಂದು ಪ್ರಮಾಣದ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗಿಲ್ಲ.

2016ರಲ್ಲಿ 39.2 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗುವ ಮೂಲಕ ಸಾರ್ವಕಾಲಿಕ ದಾಖಲೆಯಾಗಿತ್ತು. ಆ ಬಳಿಕ 2017ರಲ್ಲಿ 37, 2018ರಲ್ಲಿ 34.9, 2019ರಲ್ಲಿ 37, 2020ರಲ್ಲಿ 36.4, ಹಾಗೂ 2021ರಲ್ಲಿ 37.2 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ಶನಿವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.1 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 37.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ.