ಒಂದು ವಾಹನ-ಒಂದು ಫಾಸ್ಟ್ಯಾಗ್‌ ಜಾರಿ

| Published : Apr 02 2024, 01:06 AM IST / Updated: Apr 02 2024, 06:39 AM IST

ಸಾರಾಂಶ

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ.

 ನವದೆಹಲಿ :  ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. 

ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ.ಮಾ.1ರಿಂದಲೇ ಇದು ಜಾರಿಗೆ ಬರಬೇಕಿತ್ತು. ಆದರೆ ನಿರ್ಬಂಧಿತ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಫಾಸ್ಟ್ಯಾಗ್ ಬಳಕೆದಾರರು ಸಮಸ್ಯೆಗೀಡಾದ ಕಾರಣ ಗಡುವನ್ನು 1 ತಿಂಗಳು ವಿಸ್ತರಿಸಲಾಗಿತ್ತು. 

ಹೀಗಾಗಿ ಏ.1ರಿಂದ ಇದು ಜಾರಿಗೆ ಬಂದಿದೆ.ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರ, ‘ಇನ್ನು ಬಹು ಫಾಸ್ಟ್ಯಾಗ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಒಂದು ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ಹೊಂದಿರುವ ಜನರಿಗೆ ಇಂದಿನಿಂದ (ಏಪ್ರಿಲ್ 1) ಆ ಎಲ್ಲ ಫಾಸ್ಟ್ಯಾಗ್‌ಗಳನ್ನೂ ಬಳಸಲು ಸಾಧ್ಯವಾಗುವುದಿಲ್ಲ’ ಎಂದರು.

ಈ ವರೆಗೆ ಜನರು ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಲಿಂಕ್‌ ಮಾಡುತ್ತಿದ್ದರು ಅಥವಾ ಅನೇಕ ವಾಹನಗಳಿಗೆ ಒಂದೇ ಫಾಸ್ಟ್ಯಾಗ್‌ ಬಳಸುವುದನ್ನು ರೂಢಿಸಿಕೊಂಡಿದ್ದರು. ಇದನ್ನು ತಡೆಗಟ್ಟಿ ಟೋಲ್‌ಗಳಲ್ಲಿ ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ‘ಒಂದು ವಾಹನ-ಒಂದು ಫಾಸ್ಟ್ಯಾಗ್‌’ ನಿಯಮ ಜಾರಿಗೆ ತಂದಿತ್ತು. ಇದಕ್ಕಾಗಿ ಕೆವೈಸಿ ಅಪೂರ್ಣ ಇರುವ ಫಾಸ್ಟ್ಯಾಗ್‌ ಗ್ರಾಹಕರು ತಾವು ಅದನ್ನು ಪಡೆದ ಬ್ಯಾಂಕ್‌ಗಳಿಗೆ ಹೋಗಿ ಕೆವೈಸಿ ನವೀಕರಣ ಮಾಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿತ್ತು.