ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಶಾಕ್‌!

| Published : Apr 02 2024, 01:02 AM IST / Updated: Apr 02 2024, 04:18 AM IST

ಸಾರಾಂಶ

ಮಾಜಿ ಚಾಂಪಿಯನ್‌ ರಾಜಸ್ಥಾನಕ್ಕೆ 3ನೇ ಗೆಲುವು. ಮುಬೈ 20 ಓವರಲ್ಲಿ 9 ವಿಕೆಟ್‌ಗೆ 125 ರನ್‌. ಸುಲಭ ಗುರಿ ಬೆನ್ನತ್ತಿದ ರಾಜಸ್ಥಾನ 15.3 ಓವರ್‌ಗಳಲ್ಲಿ 4 ವಿಕೆಟ್‌ಗೆ 127.

ಮುಂಬೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸೋಲಿನ ಮುಖಭಂಗಕ್ಕೊಳಗಾಗಿದೆ. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈಗೆ ಮಂಗಳವಾರ ರಾಜಸ್ಥಾನ ವಿರುದ್ಧ 6 ವಿಕೆಟ್‌ ಸೋಲು ಎದುರಾಯಿತು. 

ಹ್ಯಾಟ್ರಿಕ್‌ ಗೆಲುವು ಕಂಡ ರಾಜಸ್ಥಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ಮೊದಲು ಬ್ಯಾಟ್‌ ಮಾಡಿದ ಮುಂಬೈ 9 ವಿಕೆಟ್‌ ಕಳೆದುಕೊಂಡು ಕೇವಲ 125 ರನ್‌ ಕಲೆಹಾಕಿತು. ಸುಲಭ ಗುರಿಯನ್ನು ರಾಜಸ್ಥಾನ 15.3 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು.

ಯಶಸ್ವಿ ಜೈಸ್ವಾಲ್‌ 10, ಜೋಸ್‌ ಬಟ್ಲರ್‌ 13, ನಾಯಕ ಸಂಜು ಸ್ಯಾಮ್ಸನ್‌ 12 ರನ್‌ ಗಳಿಸಿ ಔಟಾದಾಗ ತಂಡ ಸಂಕಷ್ಟಕ್ಕೀಡಾಯಿತು. ಆದರೆ ರಿಯಾನ್‌ ಪರಾಗ್ ಮತ್ತೆ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೂ ಅಬ್ಬರಿಸಿದ್ದ ರಿಯಾನ್‌ ಈ ಬಾರಿ 39 ಎಸೆತಗಳಲ್ಲಿ 54 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುವ ವೇಗಿ ಆಕಾಶ್‌ ಮಧ್ವಾಲ್‌ 3 ವಿಕೆಟ್‌ ಪಡೆದರು.

ಬ್ಯಾಟಿಂಗ್‌ ವೈಫಲ್ಯ: ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಮೊದಲ ಓವರ್‌ನಲ್ಲೇ ಆಘಾತಕ್ಕೊಳಗಾಯಿತು. ರೋಹಿತ್‌ ಶರ್ಮಾ ಹಾಗೂ ನಮನ್‌ ಧೀರ್‌ ಇಬ್ಬರನ್ನೂ ತಮ್ಮ ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಅಟ್ಟಿದ ಟ್ರೆಂಟ್‌ ಬೌಲ್ಟ್‌, ತಮ್ಮ 2ನೇ ಓವರಲ್ಲಿ ಡೆವಾಲ್ಡ್‌ ಬ್ರೆವಿಸ್‌ರನ್ನು ಔಟ್‌ ಮಾಡಿದರು. ಈ ಮೂವರೂ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ತಿಲಕ್‌ ವರ್ಮಾ(32) ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ(34) ಅಲ್ಪ ಹೋರಾಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ಚಹಲ್‌ 4 ಓವರಲ್ಲಿ 11 ರನ್‌ಗೆ 3, ಬೌಲ್ಟ್‌ 22 ರನ್‌ಗೆ 3 ವಿಕೆಟ್‌ ಕಿತ್ತರು.ಸ್ಕೋರ್‌: ಮುಂಬೈ 20 ಓವರಲ್ಲಿ 125/9 (ಹಾರ್ದಿಕ್‌ 34, ತಿಲಕ್‌ 32, ಚಹಲ್‌ 3-11, ಬೌಲ್ಟ್‌ 3-22), ರಾಜಸ್ಥಾನ 15.3 ಓವರಲ್ಲಿ 127/4 (ರಿಯಾನ್‌ 54*, ಆಕಾಶ್‌ 3-20) ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್‌

250: ಐಪಿಎಲ್‌ನಲ್ಲಿ 250 ಪಂದ್ಯಗಳನ್ನಾಡಿದ ಮೊದಲ ತಂಡ ಮುಂಬೈ ಇಂಡಿಯನ್ಸ್‌.