ಮಿಯಾಮಿ ಓಪನ್‌ನಲ್ಲಿ ಕನ್ನಡಿಗ ಬೋಪಣ್ಣ ಚಾಂಪಿಯನ್‌

| Published : Apr 01 2024, 12:55 AM IST / Updated: Apr 01 2024, 07:05 AM IST

ಸಾರಾಂಶ

ಆಸ್ಟ್ರೇಲಿಯಾದ ಎಬ್ಡೆನ್‌ ಜೊತೆಗೂಡಿ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು. ಈ ಮೂಲಕ ಎಟಿಪಿ ವಿಶ್ವ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಏರಿದರು.

ಮಿಯಾಮಿ (ಅಮೆರಿಕ): ಭಾರತದ 44 ವರ್ಷದ ದಿಗ್ಗಜ ಟೆನಿಸಿಗ ರೋಹನ್‌ ಬೋಪಣ್ಣ, ಮಿಯಾಮಿ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿದ್ದಾರೆ. ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಎಟಿಪಿ ಮಾಸ್ಟರ್ಸ್‌ 1000 ಹಂತದ ಟೂರ್ನಿಯನ್ನು ಗೆದ್ದ ವಿಶ್ವದ ಅತಿಹಿರಿಯ ಆಟಗಾರ ಎನ್ನುವ ದಾಖಲೆ ಬರೆದರು. 

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌ ಹಾಗೂ ಅಮೆರಿಕದ ಆಸ್ಟಿನ್‌ ಕ್ರಜಿಸೆಕ್‌ ವಿರುದ್ಧ 6-7(3), 6-3, 10-6 ಸೆಟ್‌ಗಳಲ್ಲಿ ಬೋಪಣ್ಣ ಜೋಡಿ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಬೋಪಣ್ಣ ಹಾಗೂ ಎಬ್ಡೆನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮರಳಿ ನಂ.1 ಸ್ಥಾನಕ್ಕೇರಿದ್ದಾರೆ. 

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಗೆದ್ದ ಬಳಿಕ ಅಗ್ರಸ್ಥಾನಕ್ಕೇರಿದ್ದ ಈ ಜೋಡಿ, ದುಬೈ ಚಾಂಪಿಯನ್‌ಶಿಪ್‌ನ ಅಂತಿಮ-32ರ ಸುತ್ತಿನಲ್ಲಿ ಸೋತ ಬಳಿಕ 2ನೇ ಸ್ಥಾನಕ್ಕೆ ಕುಸಿದಿತ್ತು.