ಭಾರೀ ವಾಹನಗಳ ಸಂಚಾರಕ್ಕೆ ಬೆರಳೆಣಿಕೆಯಷ್ಟು ದಿನ ಬಾಕಿ; 3 ಪರೀಕ್ಷೆಯಲ್ಲೂ ಪೀಣ್ಯ ಫ್ಲೈ ಓವರ್‌ ಪಾಸ್‌

| Published : Jan 31 2024, 02:18 AM IST / Updated: Jan 31 2024, 11:37 AM IST

Peenya flyover
ಭಾರೀ ವಾಹನಗಳ ಸಂಚಾರಕ್ಕೆ ಬೆರಳೆಣಿಕೆಯಷ್ಟು ದಿನ ಬಾಕಿ; 3 ಪರೀಕ್ಷೆಯಲ್ಲೂ ಪೀಣ್ಯ ಫ್ಲೈ ಓವರ್‌ ಪಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೋ-ಬೇಡವೋ ಎಂದು ನಡೆಸಿದ್ದ ‘ಮೂರೂ ಪರೀಕ್ಷೆ’ಯಲ್ಲೂ ಪೀಣ್ಯ ಫ್ಲೈ ಓವರ್‌ ಉತ್ತಮ ಅಂಕಗಳಿಂದ ‘ಪಾಸ್‌’ ಆಗಿದೆ. ಇದರಿಂದಾಗಿ ಮೇಲ್ಸೇತುವೆಗೆ ಹಿಡಿದಿದ್ದ ಎರಡು ವರ್ಷದ ‘ಗ್ರಹಣ’ಕ್ಕೆ ಕೊನೆಗೂ ‘ಮುಕ್ತಿ’ ದೊರಕುವ ಸಮಯ ಸನಿಹವಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೋ-ಬೇಡವೋ ಎಂದು ನಡೆಸಿದ್ದ ‘ಮೂರೂ ಪರೀಕ್ಷೆ’ಯಲ್ಲೂ ಪೀಣ್ಯ ಫ್ಲೈ ಓವರ್‌ ಉತ್ತಮ ಅಂಕಗಳಿಂದ ‘ಪಾಸ್‌’ ಆಗಿದೆ. ಇದರಿಂದಾಗಿ ಮೇಲ್ಸೇತುವೆಗೆ ಹಿಡಿದಿದ್ದ ಎರಡು ವರ್ಷದ ‘ಗ್ರಹಣ’ಕ್ಕೆ ಕೊನೆಗೂ ‘ಮುಕ್ತಿ’ ದೊರಕುವ ಸಮಯ ಸನಿಹವಾಗಿದೆ.

ಏಷ್ಯಾದ ಅತಿದೊಡ್ಡ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬರುವ, ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೇ ಜಿ ಫ್ಯಾಕ್ಟರಿವರೆಗಿನ 5 ಕಿ.ಮೀ. ಉದ್ದದ ಮೇಲ್ಸೇತುವೆಯ ಸಾಮರ್ಥ್ಯವನ್ನು ಮೂರು ವಿಧದಲ್ಲಿ ಪರೀಕ್ಷಿಸಿದ ತಜ್ಞರು, ಮೇಲ್ಸೇತುವೆ ಸಮರ್ಥವಾಗಿದೆ ಎಂದು ವರದಿ ನೀಡಿದ್ದಾರೆ.

ಇದರಿಂದಾಗಿ ಬೆರಳೆಣಿಕೆಯಷ್ಟು ದಿನದಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮುಕ್ತವಾಗಲಿದೆ. ಇದರಿಂದಾಗಿ ಕಳೆದ ಎರಡು ವರ್ಷದಿಂದ ಈ ಭಾಗದ ಸರ್ವೀಸ್‌ ರಸ್ತೆಯಲ್ಲಿ ಉಂಟಾಗಿದ್ದ ವಾಹನ ದಟ್ಟಣೆಯೂ ಅಂತ್ಯವಾಗಲಿದೆ. 

ಭಾರೀ ವಾಹನಗಳ ಓಡಾಟದಿಂದಾಗಿ 8ನೇ ಮೈಲಿ ಜಂಕ್ಷನ್‌ ಸಮೀಪದ 102 ಮತ್ತು 103ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದವು. 

ಹಾಗಾಗಿ 2021 ಡಿಸೆಂಬರ್‌ ಕೊನೆಯ ವಾರದಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಮೇಲ್ಸೇತುವೆ ಮೇಲೆ ನಿಷೇಧಿಸಲಾಗಿತ್ತು. ಬಳಿಕ 16 ಫೆಬ್ರವರಿ 2022ರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಸದ್ಯ ಹಗಲಿನಲ್ಲಿ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅವಕಾಶವಿದೆ.

8 ಮಿಮೀ ಕೆಳಗೆ ಸ್ಪ್ರಿಂಗ್‌: 120 ಪಿಲ್ಲರ್‌ (ಸ್ಪ್ಯಾನ್‌) ನಡುವೆ ಖಾಲಿ ಇದ್ದ ಜಾಗದಲ್ಲಿ ಹೊಸದಾಗಿ ತಲಾ ಎರಡರಂತೆ 240 ಹೊಸ ಕೇಬಲ್‌ ಅಳವಡಿಸಿದ್ದು, ಇವುಗಳು ಭಾರವನ್ನು ತಡೆದುಕೊಳ್ಳಲಿವೆಯೇ ಎಂದು ಜ.16ರಿಂದ 19ರವರೆಗೂ ಲೋಡ್‌ ಟೆಸ್ಟಿಂಗ್‌ ಪರೀಕ್ಷೆ ನಡೆಸಲಾಗಿತ್ತು. 

ತಲಾ 30 ಟನ್‌ ಭಾರದ 16 ಟ್ರಕ್‌ಗಳನ್ನು ಗಂಟೆಗೆ ಎರಡರಂತೆ ಮೇಲ್ಸೇತುವೆ ಮೇಲೆ ನಿಲ್ಲಿಸಿ ನಂತರ ಒಂದು ದಿನದ ಬಳಿಕ ಇದೇ ರೀತಿ ಗಂಟೆಗೆ ಎರಡರಂತೆ ಟ್ರಕ್‌ಗಳನ್ನು ಮೇಲ್ಸೇತುವೆ ಮೇಲಿನಿಂದ ತೆರವುಗೊಳಿಸಲಾಗಿತ್ತು.

ಆಗ ಪಿಲ್ಲರ್‌ಗಳ ಮೇಲಿನ ಸ್ಪ್ರಿಂಗ್‌ಗಳ ಚಲನೆಯ ಮಾಹಿತಿಯನ್ನು ತಜ್ಞರು ಸಂಗ್ರಹಿಸಿದ್ದರು. ಸ್ಪ್ರಿಂಗ್‌ಗಳು ಟ್ರಕ್‌ಗಳ ಭಾರಕ್ಕೆ 9ರಿಂದ 10 ಮಿಲಿ ಮೀಟರ್‌ ಆಳಕ್ಕೆ ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು. 

ಆದರೆ 8 ಮಿಲಿ ಮೀಟರ್‌ ಆಳಕ್ಕೆ ಮಾತ್ರ ಹೋಗಿದ್ದು, ಮೇಲ್ಸೇತುವೆ ಸದೃಢವಾಗಿದೆ ಎಂಬುದು ತಿಳಿಯಿತು. ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ ಬಳಿಕ 120 ಪಿಲ್ಲರ್‌ ನಡುವೆ ಇರುವ 1200 ಕೇಬಲ್‌ಗಳನ್ನೂ ಹಂತಹಂತವಾಗಿ ಬದಲಾಯಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಲೋಡ್‌ ಟೆಸ್ಟಿಂಗ್‌ ಸಮಯದಲ್ಲಿ ಪಿಲ್ಲರ್‌ಗಳ ಸ್ಪ್ರಿಂಗ್‌ಗಳು 9ರಿಂದ 10 ಮಿಲಿ ಮೀಟರ್‌ ಆಳಕ್ಕೆ ಹೋಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 8 ಮಿಮೀ ಮಾತ್ರ ಹೋಗಿದ್ದು ಮೇಲ್ಸೇತುವೆ ಸದೃಢವಾಗಿದೆ ಎಂದು ಐಐಎಸ್‌ಸಿ ತಜ್ಞ ಡಾ। ಚಂದ್ರ ಕಿಶನ್ ತಿಳಿಸಿದರು.

ಯಾವ್ಯಾವ ಪರೀಕ್ಷೆ?
ಹಗಲು ಮತ್ತು ರಾತ್ರಿ ಸಮಯದ ಉಷ್ಣಾಂಶಕ್ಕೆ ಸೇತುವೆ ಯಾವ ರೀತಿ ಪ್ರತಿಕ್ರಿಯಿಸಲಿದೆ, ಭಾರವಾದ ಟ್ರಕ್‌ಗಳನ್ನು ಪಿಲ್ಲರ್‌ಗಳ ಮೇಲೆ ನಿಲ್ಲಿಸಿದ್ದಾಗ ಮತ್ತು ಮೇಲ್ಸೇತುವೆ ಪೂರ್ತಿ ಖಾಲಿ ಇದ್ದಾಗಿನ ಬದಲಾವಣೆ ಏನು ಎಂಬುದನ್ನು ತಜ್ಞರು ಪರೀಕ್ಷಿಸಿ, ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಮೇಲ್ಸೇತುವೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಯೋಗ್ಯವಾಗಿದೆ ಎಂದು ದೃಢಪಟ್ಟಿದೆ.

ಮುಂದಿನ ಪ್ರಕ್ರಿಯೆಗಳೇನು?
ಸೇತುವೆ ಸದೃಢವಾಗಿದೆ ಎಂಬ ಸವಿವರವಾದ ವರದಿಯನ್ನು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರವಾನಿಸಿದೆ.

ಪ್ರಾಧಿಕಾರವು ತಜ್ಞರ ಸಮಯ ನೋಡಿಕೊಂಡು ಮೂರ್ನಾಲ್ಕು ದಿನದಲ್ಲಿ ಆನ್‌ಲೈನ್‌ ಮೀಟಿಂಗ್‌ ನಡೆಸಲಿದೆ. ಪ್ರಾಧಿಕಾರದ ತಜ್ಞರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತರು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ ವಾಸ್ತವ ಪರಿಸ್ಥಿತಿ ತಿಳಿದುಕೊಳ್ಳಲಿದ್ದಾರೆ. 

ಬಳಿಕ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮುಕ್ತ ಮಾಡುವ ಇರಾದೆ ವ್ಯಕ್ತಪಡಿಸಲಿದೆ. ಆಗ ಸಂಚಾರ ಪೊಲೀಸ್‌ ವಿಭಾಗದೊಂದಿಗೆ ಚರ್ಚಿಸಿ ದಿನಾಂಕ ಅಂತಿಮಗೊಳಿಸಲಾಗುತ್ತದೆ.