ಒನ್‌ಪ್ಲಸ್‌ ದಶಮಾನೋತ್ಸವಕ್ಕೆ 2 ಪವರ್‌ಫುಲ್‌ ಮೊಬೈಲ್‌

| Published : Jan 27 2024, 01:17 AM IST / Updated: Jan 27 2024, 08:27 AM IST

oneplus
ಒನ್‌ಪ್ಲಸ್‌ ದಶಮಾನೋತ್ಸವಕ್ಕೆ 2 ಪವರ್‌ಫುಲ್‌ ಮೊಬೈಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಮಾರುಕಟ್ಟೆಯಲ್ಲಿ 10 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಒನ್‌ಪ್ಲಸ್‌, ಬಹುನಿರೀಕ್ಷೆಯ ‘ಒನ್‌ಪ್ಲಸ್‌ 12’ ಹಾಗೂ ‘ಒನ್‌ಪ್ಲಸ್‌ 12 ಆರ್‌’ ಮೊಬೈಲ್‌ ಫೋನ್‌ ಮತ್ತು ‘ಬಡ್ಸ್‌ 3’ ಇಯರ್‌ಬಡ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ.

ಲಕ್ಷ್ಮೀಕಾಂತ್ ಎಂ.ಎಲ್

ಕನ್ನಡಪ್ರಭ ವಾರ್ತೆ ನವದೆಹಲಿ

ಭಾರತೀಯ ಮಾರುಕಟ್ಟೆಯಲ್ಲಿ 10 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಒನ್‌ಪ್ಲಸ್‌, ಬಹುನಿರೀಕ್ಷೆಯ ‘ಒನ್‌ಪ್ಲಸ್‌ 12’ ಹಾಗೂ ‘ಒನ್‌ಪ್ಲಸ್‌ 12 ಆರ್‌’ ಮೊಬೈಲ್‌ ಫೋನ್‌ ಮತ್ತು ‘ಬಡ್ಸ್‌ 3’ ಇಯರ್‌ಬಡ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. 

‘ಒನ್‌ಪ್ಲಸ್‌ 12’ ಗೇಮಿಂಗ್‌ ಹಾಗೂ ಫೋಟೋ ಪ್ರಿಯರಿಗೆ ಹೇಳಿ ಮಾಡಿಸಿದ ಫೋನ್‌. ಅತ್ಯಂತ ಶಕ್ತಿಶಾಲಿ, ಅತ್ಯಾಧುನಿಕ ‘ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3’ ಪ್ರೊಸೆಸರ್‌ ಇದರಲ್ಲಿದೆ.

ಹೆಚ್ಚು ಹೊತ್ತು ಗೇಮ್‌ ಆಡಿದರೂ ಬೇರೆ ಮೊಬೈಲ್‌ಗಳಷ್ಟು ಇದು ಬಿಸಿ ಆಗುವುದಿಲ್ಲ. 5400 ಎಂಎಎಚ್‌ನ ಬ್ಯಾಟರಿ ದೆಸೆಯಿಂದ ಚಾರ್ಜ್‌ ಕೂಡ ಬೇಗನೆ ಖಾಲಿ ಆಗುವುದಿಲ್ಲ. 

100 ವ್ಯಾಟ್ಸ್‌ನ ‘ಸೂಪರ್‌ವೂಕ್‌’ ಚಾರ್ಜರ್‌ ಇರುವ ಕಾರಣ, ಬೆಳಗ್ಗೆ ಎದ್ದು ಚಾರ್ಜ್‌ಗೆ ಹಾಕಿ ನಿತ್ಯ ಕರ್ಮ ಮುಗಿಸಿ ಕಾಫಿ ಕುಡಿದು ಮೊಬೈಲ್‌ ಕೈಗೆತ್ತಿಕೊಳ್ಳುವಷ್ಟರಲ್ಲಿ 100% ಚಾರ್ಜ್‌ ಆಗಿರುತ್ತದೆ. 

ಶೂನ್ಯದಿಂದ 100% ಚಾರ್ಜ್‌ ಆಗಲು 26 ನಿಮಿಷ ಸಾಕು. 50 ವ್ಯಾಟ್ಸ್‌ನ ವೈರ್‌ಲೆಸ್‌ ಚಾರ್ಜಿಂಗ್‌ಗೂ ಅವಕಾಶ ಇದೆ. 

ಮಳೆಯಲಿ, ಜತೆಯಲಿ: ಮೊಬೈಲ್‌ಗಳು ವಾಟರ್‌ಪ್ರೂಫ್‌ ಆಗಿದ್ದರೂ ಮಳೆ ಬಂದಾಗ ಸ್ಕ್ರೀನ್‌ ಒದ್ದೆಯಾದರೆ ಟಚ್‌ಸ್ಕ್ರೀನ್‌ ಸ್ಪಂದಿಸುವುದಿಲ್ಲ. ಆದರೆ ಒನ್‌ಪ್ಲಸ್‌ 12ನಲ್ಲಿ ಮಳೆಯಲ್ಲೇ ನಿಂತು ಮೆಸೇಜ್‌ ಮಾಡಬಹುದು. 

ಸ್ಕ್ರೀನ್‌ ಅಷ್ಟು ಚೆನ್ನಾಗಿ ಸ್ಪಂದಿಸುತ್ತದೆ. ಈ ಫೋನ್‌ನಲ್ಲೂ ಹಿಂಬದಿ ಕ್ಯಾಮೆರಾಗಳು ವೃತ್ತಾಕಾರದೊಳಗೆ ಬಂಧಿಯಾಗಿವೆ. ಸೋನಿಯದ್ದು ಸೇರಿ 3 ಕ್ಯಾಮೆರಾಗಳಿವೆ. 

ಫೋಟೋಗಳು ಮಾತ್ರ ಬಹಳ ಸುಂದರ. ಒಂದಕ್ಕಿಂತ ಒಂದು ಚೆನ್ನಾಗಿ ಮೂಡುತ್ತವೆ. ಬಣ್ಣ, ಡೀಟೆಲಿಂಗ್‌ ಸಖತ್ತಾಗಿದೆ. ಸ್ವೀಡನ್‌ ಮೂಲದ ಪ್ರಸಿದ್ಧ ಕ್ಯಾಮೆರಾ ಕಂಪನಿ ಹ್ಯಾಸೆಲ್‌ಬ್ಲಾಡ್‌ನ ಸಹಯೋಗ ಕಮಾಲ್‌ ಮಾಡಿದೆ. 

ತೆಗೆದ ಫೋಟೋವನ್ನು ಝೂಮ್‌ ಮಾಡಿದಷ್ಟೂ ಸುಂದರವಾಗಿಯೇ ಕಾಣುತ್ತೀರಿ! ಸ್ಕ್ರೀನ್‌ ಡಿಸ್‌ಪ್ಲೇ ಸೊಗಸಾಗಿದೆ. 120Hz ರಿಫ್ರೆಷ್‌ ರೇಟ್‌ ಇರುವುದರಿಂದ ಬಳಸುವ ಮಜಾವೇ ಬೇರೆ. 

6.8 ಇಂಚಿನ ಪರದೆ ಇದ್ದು, 2ಕೆ ವಿಡಿಯೋಗಳನ್ನು ನೋಡಲು ಖುಷಿಯಾಗುತ್ತದೆ. ಆಡಿಯೋ ಸುಮಧುರವಾಗಿದೆ. ನಿಮ್ಮ ಫೋಟೋದಲ್ಲಿ ಅನಾವಶ್ಯಕವಾಗಿ ಹಿಂದೆ ನಿಂತವರನ್ನು, ಬೇಡದ ವಸ್ತುಗಳನ್ನು ಕತ್ತರಿಸಿ ಬಿಸಾಕಲು ಬ್ಯಾಕ್‌ಗ್ರೌಂಡ್‌ ರಿಮೂವರ್‌ ಈ ಫೋನ್‌ನಲ್ಲೂ ಇದೆ.ಎರಡೂ ಬದಿ ಗೊರಿಲ್ಲಾ ಗ್ಲಾಸ್‌ ಇದೆ.

ಅಪ್ಪಿತಪ್ಪಿ ಕೈಜಾರಿ ಬಿದ್ದಾಗ ಮೊಬೈಲ್‌ಗೆ ಏನೋ ಆಗಿಹೋಗಿರಬಹುದು ಎಂಬ ಒತ್ತಡ ಕಡಿಮೆ ಮಾಡಿ, ಬೀಪಿ ಹೆಚ್ಚುವುದನ್ನು ಇದು ತಡೆಯುತ್ತದೆ. ಆ್ಯಂಡ್ರಾಯ್ಡ್‌ 14 ಆಧರಿತ ಆಕ್ಸಿಜೆನ್‌ಒಎಸ್‌14 ಇದರ ಜೀವಾಳ.

 2 ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್‌ ಬೆಲೆ 64999 ರು.ನಿಂದ ಆರಂಭ. ‘ಜಾಸ್ತಿ ಆಯ್ತು, ಕಡಿಮೆ ಇಲ್ವಾ’ ಎಂದು ಚೌಕಾಸಿ ಮಾಡುವವರಿಗೆ ಒನ್‌ಪ್ಲಸ್‌ 12ಆರ್‌ ಸಿಗುತ್ತದೆ. ಅದರಲ್ಲಿ ಬ್ಯಾಟರಿ ಸಾಮರ್ಥ್ಯ ಹೆಚ್ಚಿದೆ. ಬೇರೆ ಫೀಚರ್‌ ಕೊಂಚ ಕಡಿಮೆ ಇವೆ. ಅದರ ಬೆಲೆ 39,999 ರು.ನಿಂದ ಆರಂಭ.

ಇಯರ್‌ ಬಡ್‌: ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌-3 ಇದೀಗ ಒನ್‌ಪ್ಲಸ್‌ನ ಆಡಿಯೋ ಶ್ರೇಣಿಗೆ ಹೊಸ ಸೇರ್ಪಡೆ. ಒಮ್ಮೆ ಚಾರ್ಜ್‌ ಮಾಡಿದರೆ 44 ಗಂಟೆ ಬರುತ್ತದೆ, ಸೌಂಡ್‌ ಅತ್ಯಂತ ಸುಮಧುರವಾಗಿದೆ ಎಂದು ಕಂಪನಿ ಹೇಳಿದೆ. 

ಈ ಇಯರ್‌ಬಡ್‌ನ ದೊಡ್ಡ ವಿಶೇಷತೆ ಎಂದರೆ, ಧ್ವನಿ ಹೆಚ್ಚು-ಕಡಿಮೆ ಮಾಡಲು ಬಡ್‌ನಲ್ಲಿ ಮೇಲೆ- ಕೆಳಗೆ ಕೈಯಾಡಿಸಿದರೆ ಸಾಕು. ಫೋನ್‌ಗೇ ಹೋಗಿ ವಾಲ್ಯೂಮ್‌ ಅಡ್ಜಸ್ಟ್‌ ಮಾಡಬೇಕಿಲ್ಲ. ಇದರ ಬೆಲೆ ₹5,499. ಇವುಗಳ ವಿವರ ಇನ್ನಷ್ಟು ಬೇಕಾದಲ್ಲಿ ಒನ್‌ಪ್ಲಸ್‌ ವೆಬ್‌ಸೈಟ್‌ನಲ್ಲಿ ಹುಡುಕಿಕೊಳ್ಳಬಹುದು.