ಸೌಮೇಂದು, ಸುಧೀರ್‌ಗೆ ಹೆಗಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

| Published : Jan 26 2024, 02:00 AM IST

ಸೌಮೇಂದು, ಸುಧೀರ್‌ಗೆ ಹೆಗಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಸೌಮೇಂದು, ಸುಧೀರ್‌ಗೆ ಹೆಗಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಎಸ್‌ಐಟಿ ಸ್ಪೆಷಲಿಸ್ಟ್‌ ಎಂದೇ ಖ್ಯಾತರಾಗಿರುವ ಸೌಮೇಂದು. ಉಗ್ರರು, ನಕ್ಸಲ್‌, ಡ್ರಗ್ಸ್‌ ದಂಧೆಕೋರರ ಬೇಟೆಗಾರ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಹಾಗೂ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಮಹದೇವ ಹೆಗಡೆ ಭಾಜನರಾಗಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣ, ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣ ಹೀಗೆ ಭಾರಿ ಸದ್ದು ಮಾಡಿದ ಕೆಲ ಪ್ರಮುಖ ಪ್ರಕರಣಗಳ ತನಿಖೆಗೆ ರಚನೆಯಾದ ವಿಶೇಷ ತನಿಖಾ ದಳ (ಎಸ್‌ಐಟಿ)ಗಳಲ್ಲಿ ಎಡಿಜಿಪಿ ಸೌಮೇಂದು ಮುಖರ್ಜಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿಯೇ ಇಲಾಖೆಯಲ್ಲಿ ‘ಎಸ್‌ಐಟಿ ಸ್ಪೆಷಲಿಸ್ಟ್’ ಎಂದೇ ಸೌಮೇಂದು ಖ್ಯಾತಿ ಪಡೆದಿದ್ದಾರೆ.

ರಾಷ್ಟ್ರಪತಿ ಪದಕ ಸೇರಿದಂತೆ ಸೇವಾವಧಿಯಲ್ಲಿ ಪೊಲೀಸ್ ಅಧಿಕಾರಿಗೆ ಸಲ್ಲುವ ಎಲ್ಲ ಪುರಸ್ಕಾರಗಳಿಗೆ ಭಾಜನರಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಮಹದೇವ ಹೆಗಡೆ ವಿಶೇಷ ಸಾಧನೆ ಮೆರೆದಿದ್ದಾರೆ. ಭೀಮಾ ತೀರದ ಕುಖ್ಯಾತ ಪಾತಕಿ ಚಂದಪ್ಪ ಹರಿಜನ್‌ ಎನ್‌ಕೌಂಟರ್‌, ನಿಷೇಧಿತ ಉಗ್ರ ಸಂಘಟನೆಗಳ ಶಂಕಿತ ಉಗ್ರರ ಬಂಧನ ಕಾರ್ಯಾಚರಣೆಯಲ್ಲಿ ಸುಧೀರ್ ಹೆಗಡೆ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ 2006ರಲ್ಲಿ ನಕಲಿ ಅಂಕಪಟ್ಟಿ ಜಾಲವನ್ನು ಭೇದಿಸಿದ್ದ ಅವರು, ನಕ್ಸಲರ ಬೇಟೆಯಲ್ಲೂ ಸಹ ಹೆಜ್ಜೆ ಗುರುತು ಮೂಡಿಸಿದ್ದರು.

ಇನ್ನು ಲೋಕಾಯುಕ್ತ ಹಾಗೂ ಎಸಿಬಿಯಲ್ಲಿ ಕಾರ್ಯನಿರ್ವಹಿಸುವಾಗ 63 ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಹಾಕಿದ್ದರು. 2019-22ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿ 8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಹೆಗಡೆ ಅವರ ಅತ್ಯುತ್ತಮ ಸೇವೆಗೆ 2017 ಹಾಗೂ 2023ರಲ್ಲಿ ಎರಡು ಬಾರಿ ರಾಷ್ಟ್ರಪತಿ ಪ್ರಶಸ್ತಿ ಒಲಿದಿದೆ.