ಬದಲಾದ ನಾಯಕತ್ವದಲ್ಲಿ ಅಭಿವೃದ್ಧಿಯ ಸಮೀಕರಣ

| Published : Mar 24 2024, 01:36 AM IST / Updated: Mar 24 2024, 04:51 PM IST

Book

ಸಾರಾಂಶ

ಮೋದಿ ಅವರ ಹತ್ತು ವರ್ಷದ ಸಾಧನೆಗಳ ಬಗೆಗೆ ಬೆಳಕು ಚೆಲ್ಲುವ ಬದಲಾದ ಭಾರತ ಕೃತಿ.

ಬದಲಾದ ಭಾರತ - ಮೋದಿ ಇದ್ದರೆ ಎಲ್ಲವೂ ಸಾಧ್ಯ

ಲೇ: ಪ್ರಕಾಶ್‌ ಶೇಷರಾಘವಾಚಾರ್‌

ಪುಟ: 206, 

ಬೆಲೆ: 350 ರು.

ಪ್ರಕಾಶನ: ಪ್ರಕಾಶ್‌ ಶೇಷರಾಘವಾಚಾರ್‌, ಬೆಂಗಳೂರು 

ಮೊ: 70228 39818

ಸ್ವಾತಂತ್ರ್ಯಾನಂತರ ರಾಷ್ಟ್ರದಲ್ಲಾದ ಹಲವು ಸ್ಥಿತ್ಯಂತರಗಳು, ಅಧಿಕಾರಶಾಹಿ ವ್ಯವಸ್ಥೆಗಳ ದುರಾಡಳಿತ, ಹೆಚ್ಚಾಗುತ್ತಲೇ ಹೋದ ಬಡತನ ಇವುಗಳ ಬಗ್ಗೆ ಬೆಳಕು ಚೆಲ್ಲುತ್ತಲೇ, ಕಳೆದ ಹತ್ತು ವರ್ಷಗಳಲ್ಲಿ ದೇಶದ ಸ್ಥಿತಿಗತಿಯಲ್ಲಾದ ಬದಲಾವಣೆಯನ್ನು ದಾಖಲಿಸುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. 

ಈ ಬದಲಾವಣೆಯ ಹಿಂದಿನ ಹರಿಕಾರ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗೆ, ಅವರ ರಾಷ್ಟ್ರ ಕಟ್ಟುವ ಕನಸಿನ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ. 

ಮೋದಿ ಕಂಡ ಕನಸು ಕೇವಲ ಕನಸಾಗಿಯೇ ಉಳಿಯದೇ ಕಾರ್ಯರೂಪಕ್ಕೆ ಬಂದು ದೇಶ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ಹೇಗೆ ಬಗೆಹರಿಸಿತು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಲೇಖಕರು ವಿವರಿಸಿದ್ದಾರೆ. 

ದೇಶದಲ್ಲಿ ಪ್ರತೀ ವರ್ಷ ಹೊರಬರುತ್ತಿರುವ ಸುಮಾರು 50 ಲಕ್ಷ ಪದವೀಧರರು ಹಾಗೂ 15 ಲಕ್ಷ ಇಂಜಿನಿಯರ್‌ಗಳಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ, ನೀತಿ ನಿರ್ಧಾರಗಳ ಮೂಲಕ ಹೇಗೆ ಉದ್ಯೋಗ ದೊರಕುವಂತೆ ಮಾಡಿದೆ ಎಂಬ ಮಾಹಿತಿ ಇದರಲ್ಲಿದೆ. 

ಒಂದಿಡೀ ಅಧ್ಯಾಯದಲ್ಲಿ ದೇಶದಲ್ಲಿ ವಿವಿಧ ರಂಗಗಳಲ್ಲಿ ಉದ್ಯೋಗ ಸೃಷ್ಟಿಸುತ್ತಾ ಬಂದ ಕೇಂದ್ರ ಸರ್ಕಾರ ವಿವಿಧ ಕಾರ್ಯತಂತ್ರಗಳನ್ನು ಇಲ್ಲಿ ಲೇಖಕರು ಸಾದ್ಯಂತವಾಗಿ ವಿವರಿಸಿದ್ದಾರೆ.

ಈ ಕೃತಿಯಲ್ಲಿ ಒಟ್ಟು 34 ಲೇಖನಗಳಿವೆ. ಅವುಗಳಲ್ಲಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ಹಲವು ಸಾಧನೆಗಳು ದೇಶವನ್ನು ಹೇಗೆ ಬದಲಿಸುತ್ತಿವೆ ಎಂಬ ಬಗ್ಗೆ ವಿವರಗಳಿವೆ. 

‘ದೇಶಕ್ಕೆ ಮೋದಿ ಸರ್ಕಾರದ ಅನಿವಾರ್ಯತೆಯ ಬಗ್ಗೆ ತಿಳಿಸುವುದು ಬದಲಾದ ಭಾರತ ಕೃತಿಯ ಉದ್ದೇಶವಾಗಿದೆ’ ಎಂದು ಲೇಖಕರು ತಮ್ಮ ಆರಂಭಿಕ ಮಾತಿನಲ್ಲಿ ಹೇಳಿದ್ದಾರೆ. 

ಈ ಕೃತಿಯಲ್ಲಿ ಮೋದಿ ಸರ್ಕಾರ ಮಾಡಿರುವ ಕೆಲಸ ಕಾರ್ಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ಈ ಸರ್ಕಾರ ಮೇಲಿರುವ ಆರೋಪಗಳಿಗೂ ಉತ್ತರ ನೀಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 

‘ರಾಜ್ಯದ ಬ್ಯಾಂಕ್‌ಗಳು ಗುಜರಾತ್‌ ಪಾಲಾಗಿವೆಯಾ?’, ‘ಬಂಡವಾಳಶಾಹಿಗಳ ಸಾಲಮನ್ನಾ ಮಾಡಲಾಗಿದೆಯಾ?’ ಮೊದಲಾದ ಲೇಖನಗಳು ಇಂಥ ವಿಷಯದ ಕುರಿತಾಗಿ ಚರ್ಚಿಸುತ್ತವೆ. 

ಇದರಲ್ಲಿರುವ ಹಚ್ಚಿನ ಲೇಖನಗಳು ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳ ಕುರಿತಾಗಿವೆ. ‘ರೈಲು ಮಾರ್ಗಗಳ ಸಂಪೂರ್ಣ ವಿದ್ಯುದ್ದೀಕರಣ’, ‘ಜಿಎಸ್‌ಟಿ ಸ್ವಚ್ಛ ಆರ್ಥಿಕತೆಯ ಬೂಸ್ಟರ್‌ ಡೋಸ್‌’, ‘ನನಸಾಗುತ್ತಿರುವ ಬುಲೆಟ್‌ ಟ್ರೈನ್‌ ಕನಸು’ ಹೀಗೆ ಒಂದಿಷ್ಟು ಬರಹಗಳು ಕೇಂದ್ರದ ಸಾಧನೆಗೆ ಕನ್ನಡಿ ಹಿಡಿದಿವೆ. 

ಕೊನೆಯಲ್ಲಿ ಮುಂದಿನ ವರ್ಷಗಳಿಗೂ ಮೋದಿ ಅವರ ಆಡಳಿತ ಯಾಕೆ ಬೇಕು ಎನ್ನುವ ಬಗ್ಗೆ ಲೇಖಕರು ವಿವರಿಸುತ್ತಾರೆ. ‘ಮೋದಿಯವರು ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. 

ಈ ನಿಟ್ಟಿನಲ್ಲಿ ಸಾಧಿಸಬೇಕಾದದ್ದು ಇನ್ನೂ ಸಾಕಷ್ಟಿದೆ. ಅವು ನನಸಾಗಲು ಮತ್ತೊಮ್ಮೆ ಮೋದಿಯವರ ನೇತೃತ್ವ 2024ರಲ್ಲಿ ದೇಶಕ್ಕೆ ಅತ್ಯಾವಶ್ಯಕವಾಗಿದೆ’ ಎನ್ನುವುದು ಲೇಖಕರ ಅಭಿಮತ.