ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ, ಅಸಮಾನತೆಯ ಉದಾರೀಕರಣ...!

| Published : Mar 22 2024, 01:03 AM IST / Updated: Mar 22 2024, 12:26 PM IST

ncert books
ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ, ಅಸಮಾನತೆಯ ಉದಾರೀಕರಣ...!
Share this Article
  • FB
  • TW
  • Linkdin
  • Email

ಸಾರಾಂಶ

ಅಂಚೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿರುವ ಡಾ.ಅಮ್ಮಸಂದ್ರ ಸುರೇಶ್ ಅವರು ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ ಹಾಗೂ ಅಸಮಾನತೆಯ ಉದಾರೀಕರಣ- ಈ ಮೂರು ಹೊಸ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂಚೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿರುವ ಡಾ.ಅಮ್ಮಸಂದ್ರ ಸುರೇಶ್ ಅವರು ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ ಹಾಗೂ ಅಸಮಾನತೆಯ ಉದಾರೀಕರಣ- ಈ ಮೂರು ಹೊಸ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪತ್ರಕರ್ತ ಗಾಂಧಿ ಕೃತಿಯ ಮೊದಲ ಅಧ್ಯಾಯದಲ್ಲಿ ಮೋಹನನಿಂದ ಮಹಾತ್ಮರಾಗುವವರೆಗೂ..ಎಂದು ಅವರ ನಡೆದು ಬಂದ ದಾರಿಯನ್ನು ವಿವರಿಸಲಾಗಿದೆ. ನಂತರ ಪತ್ರಕರ್ತ ಗಾಂಧಿ ಅಧ್ಯಾಯವಿದೆ. ಗಾಂಧೀಜಿಯವರು ಪ್ರಕಟಿಸುತ್ತಿದ್ದ ಇಂಡಿಯನ್ ಒಪೀನಿಯನ್, ಸತ್ಯಾಗ್ರಹ, ಯಂಗ್ ಇಂಡಿಯಾ, ನವಜೀವನ, ಹರಿಜನ ಪತ್ರಿಕೆಗಳ ವಿವರ ಇದೆ.

ಗಾಂಧೀಜಿಯವರ ಬರವಣಿಗೆ, ಅಭಿವೃದ್ಧಿ, ಶಾಂತಿ ಅಥವಾ ಅಹಿಂಸಾ, ಸಾರ್ವಜನಿಕ, ನೈತಿಕ ಪತ್ರಿಕೋದ್ಯಮದ ವಿಧಗಳ ಬಗ್ಗೆ ಮಾಹಿತಿ ಇದೆ. ಗಾಂಧಿಯವರು ಹೇಗೆ ಶ್ರೇಷ್ಠ ಸಂಪಾದಕಾಗಿದ್ದರು ಎಂಬುದನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಅವರ ಪತ್ರಿಕೋದ್ಯಮದ ವೈಚಾರಿಕತೆಯ ಜೊತೆ ಜೊತೆಗೆ ಅವರ ನೈತಿಕ ಪತ್ರಿಕೋದ್ಯಮದ ಪ್ರಸ್ತುತತೆಯನ್ನು ಒತ್ತಿ ಹೇಳಿದ್ದಾರೆ.

ಪತ್ರಿಕೋದ್ಯಮ ವಾಣಿಜ್ಯೀಕರಣಗೊಳ್ಳುತ್ತಿದೆ ಎಂಬ ಪರಿಸ್ಥಿತಿಯ ನಡುವೆ ಗಾಂಧಿಯವರು ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆಗಳನ್ನು ದಾಖಲಿಸಿರುವುದು ಗಮನಾರ್ಹ. ಈ ಕೃತಿಯು ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸಂಶೋಧಕರು, ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಮಾಲೀಕರು, ಗಾಂಧೀಜಿಯವರ ಅನುಯಾಯಿಗಳಿಗೆ ಉತ್ತಮ ಪರಾಮರ್ಶನ ಗ್ರಂಥವಾಗಬಲ್ಲದು.

ಡಾ.ಸುರೇಶ್ ಅಮ್ಮಸಂದ್ರ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೂ ಕೂಡ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮ ಕಲಿತವರು, ಪಿಎಚ್.ಡಿ ಕೂಡ ಪಡೆದವರು. ಹೀಗಾಗಿ ಸದಾ ಅವರಲ್ಲಿ ಪತ್ರಕರ್ತನ ಮನಸ್ಸು ಜಾಗೃತ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅವರ ಲೇಖನ, ಅಂಕಣಗಳು ಪ್ರಕಟವಾಗುತ್ತಲೇ ಇರುತ್ತವೆ. ಶೋಷಣೆಗಳ ಅನ್ವೇಷಣೆ ಕೃತಿಯು ಅವರ ಅಂಕಣ ಬರಹಗಳ ಸಂಕಲನ.

ಅನ್ನದಾತರು, ಲೈಂಗಿಕ ಕಾರ್ಯಕರ್ತೆಯರು, ಮಲ ಹೊರುವ ಪದ್ಧತಿ, ದಲಿತರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗೆ ಕಾರಣವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ಅಲೆಮಾರಿ ಸಮುದಾಯಗಳು, ಬಡವರ ಕೈಗೆಟುಕದ ಆರೋಗ್ಯ ಸೇವೆಗಳು, ಬಡತನ ಮತ್ತು ಅಪೌಷ್ಟಿಕತೆ, ಆದಿವಾಸಿ ಮಕ್ಕಳ ಭವಿಷ್ಯ, ಬಾಲಕಾರ್ಮಿಕ ಪದ್ಧತಿ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಅಸಮಾನತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಜಲಮೂಲಗಳ ಗಣತಿ, ಲಿಂಗ ಸಮಾನತೆ, ಸರ್ಕಾರಿ ಶಾಲೆಗಳ ಉಳಿವು, ಮತದಾನ ಮತ್ತು ಹೊಣೆಗಾರಿಕೆ, ರಸ್ತೆ ಸಂಚಾರದ ಸಮಸ್ಯೆಗಳು, ದತ್ತು ಪದ್ಧತಿ, ವಾತಾವರಣ ಬದಲಾವಣೆ, ರೈತರ ಪ್ರತಿಭಟನೆಗಳು ಮತ್ತು ಮಾಧ್ಯಮಗಳು, ಕಾಡು ಪ್ರಾಣಿ ಮತ್ತು ಮನುಷ್ಯರ ಸಂಘರ್ಷ- ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಅವರು ಅಂಕಣಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಸಮಸಮಾಜದ ಕಲ್ಪನೆ, ಶೋಷಿತರ, ಬಡವರ ಬೇಗೆ, ನೊಂದವರ ಕಣ್ಣೀರು ಈ ಅಂಕಣಗಳ ಹೂರಣ. ಈ ಸಾಮಾಜಿಕ ಸಮಸ್ಯೆಗಳ ಮತ್ತು ಅವುಗಳನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಇಲ್ಲಿರುವ ಲೇಖನಗಳು ತೋರುದೀಪವಾಗಿವೆ.

ಅಸಮಾನತೆಯ ಉದಾರೀಕರಣ ಕೃತಿಯು ಆಯ್ದ ಲೇಖನಗಳ ಸಂಗ್ರಹ. ಅಸಮಾನತೆ ನಡುವೆ ಖಾಸಗೀಕರಣ ಎಂಬ ಭ್ರಾಂತಿ, ಅನ್ನದಾತರ ಆತ್ಮಹತ್ಯೆ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಉದಾರೀಕರಣದಿಂದ ವಿವಿಧ ಕ್ಷೇತ್ರಗಳ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಲೇಖಕರು ಕ್ಷ-ಕಿರಣ ಬೀರಿದ್ದಾರೆ.

ಪತ್ರಕರ್ತ ಗಾಂಧಿ ಹಾಗೂ ಶೋಷಣೆಗಳ ಅನ್ವೇಷಣೆ ಕೃತಿಗಳನ್ನು ಮೈಸೂರಿನ ಮಹಿಮಾ ಪ್ರಕಾಶನ, ಅಸಮಾನತೆಯ ಉದಾರೀಕರಣ ಕೃತಿಯನ್ನು ಬೆಂಗಳೂರಿನ ವಂಶಿ ಪ್ರಕಾಶನ ಪ್ರಕಟಿಸಿವೆ. ಆಸಕ್ತರು ಡಾ.ಅಮ್ಮಸಂದ್ರ ಸುರೇಶ್, ಮೊ. 94484 02346, ಮಹಿಮಾ ಪ್ರಕಾಶನದ ಶ್ರೀನಿವಾಸ್, ಮೊ. 94487 59815, ವಂಶಿ ಪ್ರಕಾಶನ, ಮೊ. 99165 95916 ಸಂಪರ್ಕಿಸಬಹುದು.