ಕನ್ನಡಕದಲ್ಲೇ 3 ಡಿ ಸಿನಿಮಾ ತೋರಿಸೋ ಸ್ಪೇಷಿಯಲ್‌ ಕಂಪ್ಯೂಟಿಂಗ್‌!

| Published : Mar 24 2024, 01:35 AM IST / Updated: Mar 24 2024, 01:25 PM IST

BhanuPrabha

ಸಾರಾಂಶ

ಕನ್ನಡಕವೇ ಸ್ಮಾರ್ಟ್‌ಫೋನ್‌ ಆಗಿ ಬದಲಾಗುವ, ಕಣ್ಣಲ್ಲೇ ಎಲ್ಲವನ್ನೂ ನಿಯಂತ್ರಿಸುವ, ಕಣ್ಣೆದುರಿನ ಬಯಲಲ್ಲೇ 3 ಡಿಯಲ್ಲಿ ಸಿನಿಮಾ ನೋಡುವ ಟೆಕ್ನಾಲಜಿ ಕ್ರಾಂತಿಯೊಂದು ಸದ್ಯ ಭ್ರೂಣಾವಸ್ಥೆಯಲ್ಲಿದ್ದು, ಹೊರ ಜಗತ್ತಿನ ಬೆಳಕಿಗಾಗಿ ಎದುರು ನೋಡುತ್ತಿದೆ.

- ಕೊಟ್ರೇಶ್‌ ಜಿ ಎಂ

ಕಲ್ಪಿಸಿಕೊಳ್ಳಿ, ನೀವು ದಾರಿಯಲ್ಲಿ ನಡೆದುಹೋಗುತ್ತಿದ್ದೀರಿ ಆಗ ಯಾರಿಗೋ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಬೇಕು ಅನಿಸುತ್ತದೆ. ತಲೆ ತಗ್ಗಿಸಿ ಫೋನ್ ನೋಡುತ್ತಾ ನಡೆಯಲು ಮನಸ್ಸಿಲ್ಲ. 

ಆಗ ವಾಟ್ಸಾಪ್‌ನ ಪುಟ ಗಾಳಿಯಲ್ಲಿ ಹಾರಿಬಂದು ನಿಮ್ಮ ಮುಂದಿನ ಖಾಲಿ ಜಾಗದಲ್ಲಿ ತೇಲಿ ನಿಲ್ಲುತ್ತದೆ! ಹಾಗೆಯೇ ಗಾಳಿಯಲ್ಲಿ ಕೈಯಾಡಿಸುತ್ತಾ ಸಂದೇಶ ರವಾನಿಸುತ್ತೀರಿ. 

ಈಗ ಫೇಸ್‌ಬುಕ್‌ ನೋಡಬೇಕು ಅನಿಸುತ್ತದೆ. ಆಗ ಫೇಸ್‌ಬುಕ್‌ ಪುಟವೂ ನಿಮ್ಮ ಮುಂದೆ ತೇಲುತ್ತಾ ಬರುತ್ತದೆ. ನೀವು ಮತ್ತೆ ಕೈಸನ್ನೆಯಿಂದಲೇ ಆ ಪುಟವನ್ನು ಮೇಲೆ ಸರಿಸುತ್ತಾ ಸಾಗುತ್ತೀರಿ. 

ಈ ಮಧ್ಯೆ ಯೂಟ್ಯೂಬ್ ನೋಡಬೇಕಿನಿಸಿದರೆ ಅದೂ ಕಣ್ಮುಂದೆ ಪ್ರತ್ಯಕ್ಷ! ಆಗ ವಾಟ್ಸಾಪ್, ಫೇಸ್‌ಬುಕ್‌ಗಳನ್ನು ಒಂದು ಪಕ್ಕಕ್ಕೆ ‘ಕೈಸನ್ನೆಯಿಂದ’ ಸರಿಸಿ ಯೂಟ್ಯೂಬ್ ನೋಡುತ್ತೀರಿ. 

ಎಲ್ಲಾ ಆ್ಯಪ್‌ಗಳು ಹಾಗೆಯೇ ನಿಮ್ಮ ಅಕ್ಕಪಕ್ಕದಲ್ಲೇ ತೇಲುತ್ತಿರುತ್ತವೆ, ನೀವು ಹೋದಲ್ಲೆಲ್ಲಾ ನಿಮ್ಮ ಜೊತೆಗೇ ಬರುತ್ತವೆ! ಆ್ಯಪಲ್ ಕಂಪನಿ ಸಿದ್ಧಪಡಿಸುತ್ತಿರುವ ಉಪಕರಣವೊಂದು ಇಂಥ ಕಲ್ಪನೆಯನ್ನು ನಿಜ ಮಾಡಿ ಈಗಾಗಲೇ

ಸ್ಮಾರ್ಟ್‌ಫೋನ್‌ಗಳಿಂದ ಮಾಯಾಲೋಕದಂತಾಗಿರುವ ಜಗತ್ತಿಗೆ ಮತ್ತಷ್ಟು ಬದಲಾವಣೆಯನ್ನು ತರಲು ತುದಿಗಾಲಲ್ಲಿ ನಿಂತಿದೆ! ಆದರೆ ಆ ಬದಲಾವಣೆ ಧನಾತ್ಮಕವಾಗಿರದೇ ಋಣಾತ್ಮಕವಾಗಿರುವ ಸಾಧ್ಯತೆಯೇ ಹೆಚ್ಚು ಎಂಬುದು ತಿಳಿವಳಿಕಸ್ಥರ ಎಚ್ಚರಿಕೆ ರೂಪದ ಅಭಿಪ್ರಾಯ.

ಕಣ್ಣಿಗೆ ಧರಿಸಿ ಉಪಯೋಗಿಸುವ ಈ ಉಪಕರಣ ನೋಡಲು ಸದ್ಯ ಈಗ ಕಂಪ್ಯೂಟರ್ ಗೇಮ್‌ಗೆ ಬಳಸುವ ‘ಪೊಳ್ಳು ನೈಜತೆಯ ಕನ್ನಡಕ’ (Virtual reality VR) ಕಾಣುತ್ತಿದೆ. 

ಮುಂದೊಂದು ದಿನ ಸ್ಮಾರ್ಟ್‌ಫೋನ್‌ಗಳ ಸಂತತಿಯ ಸಾವಿಗೂ ಇದು ಕಾರಣವಾಗಬಹುದು ಎಂಬ ಅನುಮಾನದೊಂದಿಗೆ ಭಾರೀ ಕುತೂಹಲ ಹುಟ್ಟಿಸಿರುವ ಈ ತಂತ್ರಜ್ಞಾನ ಮುಂದೆ ಮಾನವ ಸಮಾಜಕ್ಕೆ ಅಷ್ಟೇ ಅಪಾಯಕಾರಿ ಆಗಲಿದೆ ಎಂಬ ಭಯವನ್ನೂ ಹುಟ್ಟಿಹಾಕಿದೆ! 

‘ಸ್ಪೇಷಿಯಲ್ ಕಂಪ್ಯೂಟಿಂಗ್’ ಎಂದು ಕರೆಯುವ ಈ ತಂತ್ರಜ್ಞಾನದಿಂದ ಸ್ಮಾರ್ಟ್‌ಫೋನ್‌ ಬಳಸದೇ ಎಲ್ಲಾ ಆ್ಯಪ್‌ಗಳನ್ನು ಕಣ್ಣ ಮುಂದೆಯೇ ನೋಡಬಹುದು. ಬರೀ ಕೈಸನ್ನೆ, ಕಣ್ಸನ್ನೆಯಿಂದಲೇ ಆ್ಯಪ್‌ಗಳನ್ನು ನಿರ್ವಹಿಸಬಹುದು. 

ಈ ಎಲ್ಲಾ ಆ್ಯಪ್‌ಗಳೂ ಮೂರು ಆಯಾಮದಲ್ಲಿ (ತ್ರೀಡಿ) ಮೂಡುವುದರಿಂದ ಹೆಚ್ಚು ಆಕರ್ಷಕವಾಗಿ ಮತ್ತು ಅವು ಕೈಗೇ ಎಟುಕಲಿವೆ ಎಂಬಷ್ಟು ಸ್ಪಷ್ಟವಾಗಿ ಗೋಚರಿಸಲಿವೆ.

ಕಣ್ಮುಂದೆ ಮೂಡುವ ಎಲ್ಲಾ ಚಿತ್ರಗಳನ್ನು ನೀವು ಇಷ್ಟಪಟ್ಟಷ್ಟು ದೊಡ್ಡದಾಗಿ ಹಿಗ್ಗಿಸಿ ನೋಡಬಹುದು ಅಥವಾ ಚಿಕ್ಕದಾಗಿ ಕುಗ್ಗಿಸಲೂಬಹುದು. 

ತ್ರೀಡಿ ತಂತ್ರಜ್ಞಾನವಾದ್ದರಿಂದ ನಿಮ್ಮಿಂದ ಇಷ್ಟುಪಟ್ಟಷ್ಟು ದೂರಕ್ಕೆ ಸರಿಸಿ ಅಥವಾ ಹತ್ತಿರಕ್ಕೆಳೆದುಕೊಂಡೂ ನೋಡಬಹುದು.

ಸ್ಮಾರ್ಟ್ ಫೋನ್‌ನಲ್ಲಾದರೆ ಸಿನಿಮಾವನ್ನು ಒಂದೇ ಗಾತ್ರದಲ್ಲಿ ನೋಡಬಹುದು. ಆದರೆ ಅದೇ ಸಿನಿಮಾವನ್ನು ಸ್ಪೇಷಿಯಲ್ ಕಂಪ್ಯೂಟಿಂಗ್ ಮೂಲಕ ನೈಜ ಸಿನಿಮಾ ಟಾಕೀಸಿನ ಪರದೆಯಷ್ಟೇ ದೊಡ್ಡದಾಗಿ ಹಿಗ್ಗಿಸಿ, ಕಣ್ಣಿಗೆ ಹಿತವೆನಿಸುವಷ್ಟು ಅಂತರಕ್ಕೆ ಅದನ್ನು ಸರಿಸಿ ನೀವಿದ್ದ ಜಾಗದಲ್ಲೇ ನೋಡಬಹುದು! 

ಇದರ ಧ್ವನಿಯೂ ಕೂಡ ಅತ್ಯುತ್ತಮ ಗುಣಮಟ್ಟದ್ದಾಗಿರುವುದರಿಂದ ನೀವಿರುವ ಕೋಣೆಯೇ ಯಾವ ಆಧುನಿಕ ಸಿನಿಮಾ ಥಿಯೇಟರಿಗೂ ಕಡಿಮೆಯಿಲ್ಲದಂತೆ ಬದಲಾಗಿಬಿಡುತ್ತದೆ. 

ಬಯಲೂ ಕೂಡ ಚಿತ್ರಾಲಯವಾಗಿಬಿಡುತ್ತದೆ! ಈ ಎಲ್ಲಾ ಚಿತ್ರಗಳು ಒಂದು ಇಂಚಿಗೂ ಕಡಿಮೆ ಜಾಗದಲ್ಲಿ 23 ದಶಲಕ್ಷ (23 ಮಿಲಿಯನ್) ಪಿಕ್ಸೆಲ್ಸ್ ಹೊಂದಿರುತ್ತವೆ. 

ಅಂದರೆ 4ಕೆ ಟೀವಿಗಿಂತಲೂ ಹೆಚ್ಚು ಸ್ಪಷ್ಟ ದೃಶ್ಯ! ಹಾಗಾಗಿ ಇದು ಜನಪ್ರಿಯವಾಯಿತೆಂದರೆ ಸಿನಿಮಾ ಥಿಯೇಟರ್‌ಗಳ ಅಸ್ತಿತ್ವಕ್ಕೂ ಪೆಟ್ಟು ಬೀಳಲಿದೆ. 

ಸಿನಿಮಾ ಮಂದಿಗೆ ಕೇವಲ ಓಟಿಟಿಗಳಿಗಷ್ಟೇ ಚಿತ್ರ ತಯಾರಿಸಬೇಕಾಗುವ ಪರಿಸ್ಥಿತಿಯನ್ನು ಇದು ತರಲಿದೆ. ಈ ಪರಿಣಾಮವಾಗಿ ತ್ರೀಡಿ ಸಿನಿಮಾ ನಿರ್ಮಾಣವೇ ಹೆಚ್ಚಲಿದೆ.

ಮೂರು ಆಯಾಮದ ವೀಕ್ಷಣೆ ಆದ ಕಾರಣ ‘ಸ್ಪೇಷಿಯಲ್ ಕಂಪ್ಯೂಟಿಂಗ್’ನ ವೀಡಿಯೋ ಕರೆಗಳು ಎಷ್ಟು ಸ್ಪಷ್ಟವಾಗಿರುತ್ತದೆ ಎಂದರೆ ನಿಮ್ಮೊಡನೆ ಮಾತನಾಡುತ್ತಿರುವವರು ನಿಮ್ಮ ಕೋಣೆಯಲ್ಲಿ ನಿಮ್ಮ ಜೊತೆ ಕುಳಿತೇ ಮಾತನಾಡುತ್ತಿದ್ದಾರೇನೋ ಎಂಬಷ್ಟು ನೈಜವಾಗಿರುತ್ತವೆ. 

ಇದರಲ್ಲಿ ತ್ರೀಡಿ ಕ್ಯಾಮೆರಾ ಇದ್ದು ಅದರಲ್ಲಿ ಒಮ್ಮೆ ನಿಮ್ಮ ಮುಖ ಸ್ಕ್ಯಾನ್ ಮಾಡಿಕೊಂಡರೆ ನಿಮಗಿಂತಲೂ ಸುಂದರವಾದ ನಿಮ್ಮದೇ ಮೂರು ಆಯಾಮದ ಚಿತ್ರವೊಂದು ಸಿದ್ಧವಾಗುತ್ತದೆ. 

ನೀವು ಮಾಡುವ ವೀಡಿಯೋ ಕರೆಗಳಲ್ಲಿ ನಿಮ್ಮ ಪ್ರತಿನಿಧಿಯಾಗಿ ಆ ಮುಖವೇ ಮಾತನಾಡುತ್ತದೆ!‘ಸ್ಪೇಷಿಯಲ್ ಕಂಪ್ಯೂಟಿಂಗ್’ ಯುಗದಲ್ಲಿ ನೀವು ಮಾಡುವ ರೀಲ್‌ಗಳು ಅಂದುಕೊಂಡಷ್ಟು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ವೀಕ್ಷಕರ ಕೈಗೆಟುಕುವಂತೆಯೇ ಕುಣಿಯುತ್ತವೆ.

ಸದ್ಯಕ್ಕೆ ಇದು ಕೆಲಸ ಮಾಡುವ ನಿಖರತೆಯಲ್ಲಿ ಇನ್ನೂ ಸುಧಾರಣೆ ಕಾಣಬೇಕಿರುವುದರಿಂದ ಮತ್ತು ಬೆಲೆ ಸಾಮಾನ್ಯರ ಕೈಗೆ ಎಟುಕದಷ್ಟು ಎತ್ತರದಲ್ಲಿರುವುದರಿಂದ ಸಾಮಾನ್ಯ ಜನರ ಬಳಕೆಯಲ್ಲಿ ಕಾಣುವುದು ಸ್ವಲ್ಪ ಕಾಲವಾಗಬಹುದು. 

ಜೊತೆಗೆ ಈಗ ಇದರ ಗಾತ್ರ ಮತ್ತು ಬ್ಯಾಟರಿ ಜೋಡಿಸಿರುವ ವೈರ್‌ನಿಂದಾಗಿ ಕಣ್ಣಿಗೆ ಹಾಕಿಕೊಂಡು ತಿರುಗಾಡುವುದು ಕಷ್ಟವೆನಿಸಬಹುದು. ಆದರೆ ಕೆಲವೇ ವರ್ಷಗಳಲ್ಲಿ ಇದರ ತಂತ್ರಜ್ಞಾನದಲ್ಲಿ ಸುಧಾರಣೆ ಕಂಡು ಇದು ಸಾಮಾನ್ಯ ಕನ್ನಡದಂತೆ ಆಗುವುದರಲ್ಲಿ ಅನುಮಾನವಿಲ್ಲ. 

ಆಗ ಈಗಿನ ಸ್ಮಾರ್ಟ್‌ಫೋನ್‌ನ ಜಾಗವನ್ನು ಇದು ಆಕ್ರಮಿಸಿಕೊಳ್ಳುತ್ತದೆ. ಸಹಜವಾಗಿ ಎಲ್ಲರ ಮೂಗಿನ ಮೇಲೂ ಇದು ಬಂದು ಕೂಡುತ್ತದೆ!

ಉಪಯೋಗವನ್ನು ಒತ್ತಟ್ಟಿಗಿಟ್ಟು ಹೇಳುವುದಾದರೆ ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಕ್ಕಿಂತಲೂ ಹೆಚ್ಚು ಗೀಳು ಹುಟ್ಟಿಸುವ ತಂತ್ರಜ್ಞಾನ ಇದಾಗಿರುವುದರಿಂದ ಈಗಿನ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಸಮರ್ಥವಾಗಿ ಮಾನವೀಯ ಸಂಬಂಧಗಳ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಬಹುದಟ್ಟವಾಗಿದೆ. 

ಮುಂದಿನ ಪೀಳಿಗೆಯ ಮಕ್ಕಳು ಇದರ ದಾಸರಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ಮಾನವ ಸಮಾಜವನ್ನು ಮತ್ತಷ್ಟು ಅಡ್ಡದಾರಿಗೆಳೆಯಲು ಸಿದ್ಧವಾಗಿಯೇ ಈ ಉಪಕರಣ ಪ್ರವೇಶ ಪಡೆಯಲಿದೆ.

ಈಗಾಗಲೇ ಅನೇಕ ತಂತ್ರಜ್ಞರು ಇದನ್ನು ವಿಶ್ಲೇಷಣೆ ಮಾಡುತ್ತಾ ‘ಈ ಉಪಕರಣ ಎಷ್ಟು ಸುಧಾರಣೆಯನ್ನು ಕಾಣುತ್ತದೋ ಸಮಾಜಕ್ಕೆ ಅಷ್ಟೇ ಅಪಾಯಕಾರಿಯಾಗಬಲ್ಲದು’ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈಗ ಕೊನೆ ಪಕ್ಷ ಮೊಬೈಲ್ ಸ್ಕ್ರೀನ್ ಅನ್ನು ಪರರು ಇಣುಕಿನೋಡುತ್ತಾರೆಂದೋ, ಅಥವಾ ಬಸ್ಸು ಇಳಿವಾಗ, ಹತ್ತುವಾಗಲಾದರೂ ಮೊಬೈಲ್ ಅನ್ನು ಜೇಬಲ್ಲಿಟ್ಟುಕೊಳ್ಳುತ್ತೀರಿ. ಆದರೆ ಈ ಉಪಕರಣದಲ್ಲಿ ಆ ಆತಂಕವಿಲ್ಲ. 

ನೀವು ನೋಡುವುದು ನಿಮಗಷ್ಟೇ ಕಾಣುತ್ತದೆ. ಹೊರಗೆ ಪ್ರಯಾಣಿಸುವಾಗ ವೀಕ್ಷಿಸುತ್ತಿದ್ದ ಜಾಲತಾಣಗಳ ಪುಟಗಳು ನಿಮ್ಮನ್ನು ಮನೆಯ ಕೊಠಡಿಯವರೆಗೂ ಹಿಂಬಾಲಿಕೊಂಡೇ ಬರುತ್ತವೆ. 

ಊಟ ಮಾಡುವಾಗಲೂ ನಿಮ್ಮ ಕೈ ಬಳಸದೇ ಇದನ್ನು ನಿಯಂತ್ರಿಸಬಹುದು. ಏಕೆಂದರೆ ಇದರ ‘ಮೋಷನ್ ಟ್ರ್ಯಾಕಿಂಗ್’ ತಂತ್ರಜ್ಞಾನವು ನಿಮ್ಮ ಕಣ್ಸನ್ನೆಯನ್ನು ಅರ್ಥಮಾಡಿಕೊಂಡೇ ಕೆಲಸ ಮಾಡಬಲ್ಲದು!ಅಂದರೆ ವ್ಯಕ್ತಿಗೆ ಸತತವಾಗಿ ಅಂಟಿಕೊಂಡೇ ಇರಲು ಏನೇನು ಬೇಕೋ ಅದೆಲ್ಲಾ ತಂತ್ರಜ್ಞಾನವನ್ನು ಅರೆದು ನೀರುಮಾಡಿ ಇದರಲ್ಲಿ ಸುರಿದುಬಿಟ್ಟಿದ್ದಾರೆ. 

ಹಾಗಾಗಿ ಮುಂದಿನ ಮಕ್ಕಳಿಗೆ ಇದು ಗೀಳಾಗಿ ಅಂಟಿಕೊಳ್ಳುವುದಿಲ್ಲ ಎಂದು ಹೇಳಿದರೆ ಅದು ದೊಡ್ಡ ಸುಳ್ಳಾಗುತ್ತದೆ. ಇಂಥ ಅಪಾಯಕಾರಿ ತಂತ್ರಜ್ಞಾನವನ್ನು ಜನ ಒಟ್ಟಾಗಿ ತಿರಸ್ಕರಿಸುವರು ಎಂಬುದೂ ದೂರದ ಮಾತು. 

ಅಸಾಧ್ಯ ಕಲ್ಪನೆಗಳೆಲ್ಲಾ ಸಾಧ್ಯವಾಗುವ ಕಾಲ ಮನುಕುಲಕ್ಕೆ ಹೇಗೂ ಶ್ರೇಯವಲ್ಲ. ಆದರೇನು ಮಾಡುವುದು ತಂತ್ರಜ್ಞಾನದ ವೇಗವನ್ನು ತಡೆಯುವ ಕೆಲಸವು ಈಗಿನ ವಾಯು ಮಾಲಿನ್ಯ, ಪರಿಸರ ಮಾಲಿನ್ಯದ ವಿರುದ್ಧದ ಜಾಗೃತಿ ಕಾರ್ಯಕ್ರಮಗಳಷ್ಟೇ ನಿರರ್ಥಕ.ಸಮಾಜದ ಸುಸ್ಥಿತಿಯನ್ನು ಬಯಸುತ್ತಲೇ ಇರುವವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ!