ದೇಶಕ್ಕಾಗಿ ಪ್ರಾಣ ಬಿಟ್ಟ ನನ್ನ ತಂದೆಗೆ ಮೋದಿ ಅಪಮಾನ: ಪ್ರಿಯಾಂಕಾ ಕಿಡಿ

| Published : Apr 28 2024, 01:23 AM IST / Updated: Apr 28 2024, 04:37 AM IST

Priyanka gandhi

ಸಾರಾಂಶ

‘ನನ್ನ ಅಜ್ಜಿ ಇಂದಿರಾ ಗಾಂಧಿ ಹಾಗೂ ನನ್ನ ತಂದೆ ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು.   ಅಂಥವರು ಹಾಗೂ ಅವರ ಕುಟುಂಬದವರ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’  ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಧರಂಪುರ (ಗುಜರಾತ್‌): ‘ನನ್ನ ಅಜ್ಜಿ ಇಂದಿರಾ ಗಾಂಧಿ ಹಾಗೂ ನನ್ನ ತಂದೆ ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು. ನನ್ನ ತಂದೆಯ ದೇಹ ತುಂಡು ತುಂಡಾಗಿ ಮನೆಗೆ ಬಂತು. ಅಂಥವರು ಹಾಗೂ ಅವರ ಕುಟುಂಬದವರ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಮೋದಿ ತವರು ರಾಜ್ಯ ಗುಜರಾತ್‌ನ ವಲ್ಸದ್ ಕ್ಷೇತ್ರದ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಪಿತ್ರಾರ್ಜಿತ ಕಾಯ್ದೆ ಕುರಿತು ಮೋದಿ ಮಾಡಿದ ಟೀಕೆಯನ್ನು ಪ್ರಸ್ತಾಪಿಸಿ, ‘ಪ್ರಧಾನಿ ಮೋದಿ ಪಿತ್ರಾರ್ಜಿತ ಕಾಯ್ದೆಯನ್ನು ಟೀಕಿಸುವ ಭರದಲ್ಲಿ ನಮ್ಮ ಸಮಸ್ತ ಕುಟುಂಬವನ್ನು ಅವಹೇಳನ ಮಾಡಿದ್ದಾರೆ. ಆದರೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಈ ರೀತಿ ವೈಯಕ್ತಿಕ ತೇಜೋವಧೆ ಮಾಡುತ್ತಿರಲಿಲ್ಲ. ಅವರೊಬ್ಬ ಸಭ್ಯಸ್ಥರಾಗಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಮೋದಿ ಅವರು ರಾಜೀವ್‌ ಗಾಂಧಿ ತಮ್ಮ ತಾಯಿ ಕೂಡಿಟ್ಟ ಆಸ್ತಿ ಉಳಿಸಿಕೊಳ್ಳಲು ಪಿತ್ರಾರ್ಜಿತ ಕಾಯ್ದೆ ರದ್ದು ಮಾಡಿದ್ದರು ಎಂದು ಟೀಕಿಸಿದ್ದರು.

ಮೋದಿ ದುಬಾರಿ ಮನುಷ್ಯ:

ಚುನಾವಣಾ ಪ್ರಚಾರ ಮಾಡುವಾಗ ಸೂಪರ್‌ಮ್ಯಾನ್‌ನಂತೆ ಬಂದು ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಬಳಿಕ ದರವನ್ನು ಹೆಚ್ಚಿಸುವ ದುಬಾರಿ ಮನುಷ್ಯ ಎಂದೂ ಪ್ರಿಯಾಂಕಾ ಟೀಕಿಸಿದರು‘ಮೋದಿ ಭಾಷಣ ಮಾಡುವಾಗ ಜನರ ಕನಸಿನಲ್ಲಿ ತಮ್ಮ ಹೊಸ ಹೊಸ ಯೋಜನೆಗಳ ಕುರಿತು ಜನರಲ್ಲಿ ಕನಸನ್ನು ಬಿತ್ತುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಬಡಜನರಿಗೆ ಸಹಾಯ ಮಾಡುವ ಬದಲಾಗಿ ಎಲ್ಲ ಸರಕು ಸೇವೆಗಳ ದರವನ್ನು ಹೆಚ್ಚಿಸಿ ದುಬಾರಿಯಾಗುತ್ತಾರೆ. ಈ ಕುರಿತು ಜನತೆ ಎಚ್ಚರದಿಂದಿರಬೇಕು’ ಎಂದು ಮನವಿ ಮಾಡಿದರು.

ಸಂವಿಧಾನ ಬದಲಾವಣೆ: ಇದೇ ವೇಳೆ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಾ, ‘ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಪದೇ ಪದೇ ಹೇಳುತ್ತಿದ್ದರೂ ಮೋದಿ ಅದನ್ನು ನಿರಾಕರಿಸುತ್ತಿದ್ದಾರೆ. ಆದರೆ ಪ್ರಧಾನಿ ಇಲ್ಲಿಯವರೆಗೆ ತಾವು ಮಾಡುವುದಿಲ್ಲ ಎನ್ನುವುದನ್ನೇ ಮಾಡುತ್ತಿದ್ದಾರೆ. ಈ ಮೂಲಕ ಬಡಜನರನ್ನು ಮತ್ತಷ್ಟು ಬಡತನಕ್ಕೆ ದೂಡಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಉಕ್ರೇನ್‌, ರಷ್ಯಾ ಸೇರಿದಂತೆ ಜಾಗತಿಕ ಸಮಸ್ಯೆಗಳನ್ನು ಚಿಟಿಕೆ ಹೊಡೆದು ಶಮನಗೊಳಿಸುವ ಶಮನ ಮಾಡುವ ಶಕ್ತಿಯಿರುವ ‘ವಿಶ್ವಗುರು’ವಿಗೆ ಬಡತನ ನಿರ್ಮೂಲನೆ ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.