ಬಸವ ತತ್ವದ ನಿಜಾಚರಣೆಯ ಬದುಕು ನಮ್ಮದಾಗಬೇಕು: ಅರವಿಂದ ಜತ್ತಿ

| Published : May 10 2024, 01:33 AM IST

ಬಸವ ತತ್ವದ ನಿಜಾಚರಣೆಯ ಬದುಕು ನಮ್ಮದಾಗಬೇಕು: ಅರವಿಂದ ಜತ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನಗರದ ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ನಡದ ಬಸವೇಶ್ವರ ಜಯಂತಿ ಅಂಗವಾಗಿ ಚಿಂತನ ಗೋಷ್ಠಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ನಾವೆಲ್ಲ ಬಸವಣ್ಣನವರ ಬಗ್ಗೆ ಮಾತನಾಡುತ್ತೇವೆ. ಆದರೆ ಅವರ ತತ್ತ್ವ ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬಸವಣ್ಣನವರು ಜ್ಞಾನ ದೇಗುಲ. ಜ್ಞಾನ ಮತ್ತು ಅಜ್ಞಾನದ ಚಿತ್ತವನ್ನು ಅವರು ಜಗತ್ತಿಗೆ ಸಾರಿದ್ದಾರೆ. ಬಸವ ತತ್ವದ ನಿಜಾಚರಣೆ ಬದುಕು ನಮ್ಮದಾಗಬೇಕೆಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರ ಜಯಂತಿ - 2024ರ ಅಂಗವಾಗಿ ನಡೆದ ಚಿಂತನ ಗೋಷ್ಠಿಯಲ್ಲಿ ಭಾಗವಹಿಸಿ, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮನ್ನು ನಾವು ಎಷ್ಟರಮಟ್ಟಿಗೆ ಶುದ್ಧತೆಯನ್ನು ಇಟ್ಟುಕೊಂಡಿದ್ದೇವೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕು ಎಂದರು.

ದೇಶದ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಮ್ಮ ಬಸವ ಸಮಿತಿಗೆ, ಬಸವಣ್ಣನವರ ಜಯಂತಿಗೆ ಬರುತ್ತಾರೆ. ನಮ್ಮೆಲ್ಲರ ಸಾಕ್ಷಿಯಾಗಿ ಬಸವಣ್ಣ ನಮ್ಮ ಮಠದಲ್ಲಿದ್ದಾರೆ. ಇಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮೊಳಗೆ ಇಲ್ಲಸಲ್ಲದ ವಿಷಯಗಳನ್ನು ತುಂಬಿಕೊಂಡು ನಮ್ಮನ್ನು ನಾವು ಮರೆಯಬಾರದು. ಬಸವಣ್ಣನವರ ಜಗದಗಲ, ಮುಗಿಲಗಲ, ಮಿಗೆಯಗಲ ಎಂಬ ಮಾತುಗಳನ್ನು ನಾವು ಅರ್ಥೈಸಿಕೊಳ್ಳಬೇಕು. ಅಗಮ್ಯ, ಅಪ್ರತಿಮ, ಅಗೋಚರ ಲಿಂಗವೆ, ಕರಸ್ಥಲಕ್ಕೆ ಬಂದು ಚುಳುಕಾದಿರಿ ಎಂಬ ಕನ್ನಡದ ಮಾತುಗಳು ಪ್ರಪಂಚದ ಯಾವ ಭಾಷೆಯಲ್ಲಿಯೂ ಸಿಗುವುದಿಲ್ಲ. ನಮ್ಮಲ್ಲಿರುವ ಲಿಂಗತತ್ತ್ವವನ್ನು ಅರಿತು ಬದುಕಬೇಕು ಎಂದರು.

ಬಸವಣ್ಣನವರದು ಅರಿವೇ ಗುರು. ನನ್ನ ತಂದೆ ಬಿ.ಡಿ ಜತ್ತಿಯವರು ನೀನು ಬಸವಣ್ಣನಾಗು ಎಂದು ನನಗೆ ಆಶೀರ್ವದಿಸಿದರು. ಕಳೆದ 25ವರ್ಷಗಳಿಂದ ಬಸವಣ್ಣನವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಬಸವಣ್ಣನೆಂದರೆ ಎಚ್ಚರಿಕೆ. ಆಗ ನಮ್ಮಲ್ಲಿ ಬಸವಭಾವ ಜಾಗೃತವಾಗುತ್ತದೆ. ಬಸವಣ್ಣನವರನ್ನು ವ್ಯಕ್ತಿಯಾಗಿ ನೋಡದೆ, ಅವರೊಂದು ಶಕ್ತಿ, ಸಿದ್ಧಾಂತವಾಗಿ ಕಾಣಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ.ಬಸವಕುಮಾರ ಸ್ವಾಮೀಜಿ, ತನ್ನ ಪರಿಚಯಕ್ಕಿಂತ ಇತರರನ್ನು ಪರಿಚಯಿಸಿದ್ದು ಬಸವಣ್ಣನವರ ವ್ಯಕ್ತಿತ್ವ. ಜತೆಗಿದ್ದ ಶರಣರ ಕಾಯಕ, ವ್ಯಕ್ತಿತ್ವವನ್ನು ಎತ್ತಿ ತೋರಿಸಿದರು. ಇಂತಹವರನ್ನು ನಾವು ಗುರುತಿಸುವ ಕೆಲಸ ಮಾಡುತ್ತಿಲ್ಲ. ಅರವಿಂದ ಜತ್ತಿಯವರ ವ್ಯಕ್ತಿತ್ವ ದೊಡ್ಡದು. ಅವರು ಬಸವ ಸಮಿತಿ ಅಧ್ಯಕ್ಷರಾಗಿ ಕಾಯಕ ಮಾಡುತ್ತ ಎಲೆಮರೆ ಕಾಯಾಗಿ ಬಸವ ಸಿದ್ಧಾಂತಕ್ಕೆ ಹೊಸ ರೂಪುರೇಷೆ ತಂದುಕೊಟ್ಟವರು. 34 ಭಾಷೆಗಳಲ್ಲಿ ಬಸವಾದಿ ಪ್ರಥಮರ ವಚನಗಳನ್ನು ಮುದ್ರಿಸಿ ಜಗತ್ತಿಗೆ ಪರಿಚಯಿಸಿದ್ದಾರೆ. ಬಸವ ಸಮಿತಿ ಅಂದರೆ ಬಸವತತ್ತ್ವವನ್ನು ತನ್ನೊಳಗೆ ಆವಿರ್ಭಸಿಕೊಂಡಿದೆ ಎಂದು ಹೇಳಿದರು.ರಾವಂದೂರು ಖಾಸಾ ಮುರುಘಾಮಠದ ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿದರು. ಡಾ.ಬಸವಪ್ರಭು ಸ್ವಾಮಿಗಳು, ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಗುರುಮಠಕಲ್ ಖಾಸಾ ಮುರುಘಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ರಾಣೇಬೆನ್ನೂರು ವಿರಕ್ತಮಠದ ಗುರುಬಸವ ಸ್ವಾಮಿಗಳು, ಕಲ್ಕೆರೆ ಮಠದ ತಿಪ್ಪೇರುದ್ರ ಸ್ವಾಮಿಗಳು, ಬಸವಕಲ್ಯಾಣದ ಶರಣೆ ಸತ್ಯಕ್ಕನವರು, ಬಸವನಾಗೀದೇವ ಸ್ವಾಮಿಗಳು, ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಕೆ.ಆರ್.ನಗರದ ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ ಮೈಸೂರು, ಶ್ರೀ ಪೂರ್ಣಾನಂದ ಸ್ವಾಮಿಗಳು ವೇದಿಕೆಯಲ್ಲಿದ್ದರು.

ಗಾನಯೋಗಿ ಕಲಾ ತಂಡದವರು ವಚನ ಗಾಯನ ಮಾಡಿದರು. ತೋಟಪ್ಪ ಉತ್ತಂಗಿ, ಉಮೇಶ್ ಪತ್ತಾರ್ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಡಾ. ಸ್ನೇಹಲತ ಸ್ವಾಗತಿಸಿದರು. ಗೀತಾ ರುದ್ರೇಶ್ ನಿರೂಪಿಸಿದರು.