ಸರ್ಕಾರಿ ಶಾಲೆಗೆ ಮೊದಲ ರ್‍ಯಾಂಕ್‌!

| Published : May 10 2024, 01:33 AM IST / Updated: May 10 2024, 08:44 AM IST

ಸಾರಾಂಶ

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.  

 ಮುಧೋಳ :  2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದಿದ್ದಾರೆ. 625 ಅಂಕ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿ/ವಿದ್ಯಾರ್ಥಿನಿ ಎನಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ನಿವಾಸಿ ಅಂಕಿತಾ ಆರಂಭದಿಂದಲೂ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದವರು. ಬಡ, ಕೃಷಿಕ ಕುಟುಂಬದಲ್ಲಿ ಜನಿಸಿದ ಅಂಕಿತಾ ಪ್ರಾಥಮಿಕ ಹಂತದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ‘ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ, ಜತೆಗೆ ತಾಯಿ, ತಂದೆ ಹಾಗೂ ಗುರು-ಹಿರಿಯರ ಆಶೀರ್ವಾದ ನನ್ನ ಸಾಧನೆಗೆ ಸ್ಫೂರ್ತಿ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂಕಿತಾ 1ರಿಂದ 5ನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಬಳಿಕ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಪ್ರೌಢಶಿಕ್ಷಣ ಪಡೆದಿದ್ದಾರೆ. ಸಿಎಂ ಅಭಿನಂದನೆ

ವಿದ್ಯಾರ್ಥಿನಿ ಅಂಕಿತಾ ಸಾಧನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾನಾ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಲ್ಲದೆ, ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ. ಅಂಕಿತಾ ಸಾಧನೆ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಡಿಗೆ ಪ್ರಥಮ ಸ್ಥಾನ ಗಳಿಸಿರುವ ಬಾಗಲಕೋಟೆಯ ಅಂಕಿತಾಗೆ ತುಂಬುಹೃದಯದ ಅಭಿನಂದನೆಗಳು. 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿರುವ ಅಂಕಿತಾಳ ಸಾಧನೆ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗಲಿದೆ. ಅಂಕಿತಾಳ ಶೈಕ್ಷಣಿಕ ಬದುಕು ಮುಂದೆಯೂ ಸಾಧನೆಗಳಿಂದ ಕೂಡಿರಲಿ, ಈಕೆ ಸಮಾಜಕ್ಕೆ ಬಹುದೊಡ್ಡ ಆಸ್ತಿಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

ಐಎಎಸ್‌ ಆಗುವ ಗುರಿ:  ಹಿಂದಿನ ಪ್ರಶ್ನೇ ಪತ್ರಿಕೆಗಳನ್ನು ಬಿಡಿಸುವುದು, ಅರ್ಥವಾಗದ ಪ್ರಶ್ನೆಗಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೆ. ಹಾಸ್ಟೆಲ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದರಿಂದ ಓದಲು ಮತ್ತಷ್ಟು ಸಮಯ ಸಿಕ್ಕಿತು. ಓದಿರುವ ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಪರೀಕ್ಷೆ ಬರೆಯಲು ನನಗೆ ಬಹಳ ಸರಳವಾಯಿತು. ಪರೀಕ್ಷೆ ಎದುರಿಸುವುದಕ್ಕೆ ಅಷ್ಟೇನೂ ಭಯ ಅನಿಸಲಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊಂದಿದ್ದೇನೆ ಎಂದು ತನ್ನ ಮುಂದಿನ ಗುರಿಯನ್ನು ಬಿಚ್ಚಿಟ್ಟರು ಅಂಕಿತಾ.

8 ಜನ 2ನೇ ರ್‍ಯಾಂಕ್‌, 14 ಜನ 3ನೇ ರ್‍ಯಾಂಕ್‌

ರಾಜ್ಯದ ವಿವಿಧ ಶಾಲೆಗಳ 8 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದು ಜಂಟಿ 2ನೇ ರ್‍ಯಾಂಕ್‌ ಪಡೆದಿದ್ದು, 14 ಮಂದಿ 623 ಅಂಕಗಳನ್ನು ಪಡೆದು ಮೂರನೇ ಟಾಪರ್‌ಗಳಾಗಿ ಸಾಧನೆ ಮಾಡಿದ್ದಾರೆ. 21 ಮಂದಿ 622 ಅಂಕ, 44 ಮಂದಿ 621 ಅಂಕ, 64 ಮಂದಿ 620 ಅಂಕ ಪಡೆದಿದ್ದಾರೆ.ಇತ್ತೀಚೆಗೆ ಕೊಲೆಯಾಗಿದ್ದ ಆಕಾಂಕ್ಷಾಗೆ 359 ಅಂಕ!

ಕೊಪ್ಪಳ: ಕೊಲೆಯಾಗಿರುವ ಆಕಾಂಕ್ಷಾ ಪರಶುರಾಮ ಹಾದಿಮನಿ ಎಸ್‌ಎಸ್ಎಲ್‌ಸಿಯಲ್ಲಿ 359 ಅಂಕ ಪಡೆಯುವ ಮೂಲಕ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾಳೆ. ದುರಂತ ಎಂದರೆ ಆಕೆಯ ಫಲಿತಾಂಶ ಕೇಳುವುದಕ್ಕೂ, ನೋಡುವುದಕ್ಕೂ ಆಕೆಯೂ ಇಲ್ಲ, ಆಕೆಯ ಅಪ್ಪ-ಅಮ್ಮನೂ ಇಲ್ಲ. ಇತ್ತೀಚೆಗೆ ಗದಗನಲ್ಲಿ ನಡೆದ ಭೀಕರ ಕೊಲೆಯಲ್ಲಿ ಪರಶುರಾಮ ಹಾದಿಮನಿ, ಪತ್ನಿ ಹಾಗೂ ಮಗಳು ಸಹ ಕೊಲೆಯಾಗಿದ್ದರು. ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಇರುವಾಗ ಇವರಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಆಗುಂತಕರು ಅವರ ಕುಟುಂಬದವರು ಎಂದು ಇವರನ್ನು ಕೊಲೆ ಮಾಡಿ ಹೋಗಿದ್ದರು. ಅದಕ್ಕೂ ಮುನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಆಕಾಂಕ್ಷಾ ಸಹ ಕೊಲೆಯಾಗಿದ್ದಳು. ಈಗ ಫಲಿತಾಂಶ ಪ್ರಕಟವಾಗಿದ್ದು, ಅದನ್ನು ನೋಡಲು ಯಾರೂ ಇಲ್ಲ.ಕೊಡಗು: ಶಾಲೆಗೆ 100% ರಿಸಲ್ಟ್‌ ಕೊಡಿಸಿದ್ದ ವಿದ್ಯಾರ್ಥಿನಿ ಭೀಕರ ಹತ್ಯೆ

  ಮಡಿಕೇರಿ :  ಎಸ್ಎಸ್ಎಲ್ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಇದೀಗ ಬರ್ಬರವಾಗಿ ಹತ್ಯೆ ಆಗಿದ್ದಾಳೆ. ಆಕೆಯ ರುಂಡ ಕತ್ತರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸೂರ್ಲಬ್ಬಿ ಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿಯಾಗಿದ್ದ ಯು.ಎಸ್.ಮೀನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಇದರಿಂದ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಂತಾಗಿತ್ತು. ಪರೀಕ್ಷೆಯಲ್ಲಿ ಪಾಸ್‌ ಆಗಿದ್ದರಿಂದ ಮೀನ ಮಾತ್ರವಲ್ಲದೆ ಇಡೀ ಗ್ರಾಮವೇ ಖುಷಿಯಲ್ಲಿತ್ತು. ಅಷ್ಟರಲ್ಲೇ ರಾತ್ರಿ ಅವಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಆಕೆಯ ತಲೆ ಕತ್ತರಿಸಿ ದೇಹವನ್ನು ಮನೆ ಬಳಿ ಎಸೆದು ಹೋಗಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಎಸ್ಸೆಸ್ಸೆಲ್ಸಿ: ಒಂದೇ ಬಾರಿ ತಾಯಿ, ಮಗ ಪಾಸ್ಸಕಲೇಶಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ತಾಯಿ ಮಗ ಏಕಕಾಲದಲ್ಲಿ ಉತ್ತೀರ್ಣರಾಗಿದ್ದಾರೆ. ಆಲೂರು ತಾಲೂಕಿನ ಚಿನ್ನಹಳ್ಳಿ ಗ್ರಾಮದ ಗೃಹಿಣಿ ಜ್ಯೋತಿ ಹಾಗೂ ಇವರ ಪುತ್ರ ನಿತಿನ್ ತಾಲೂಕಿನ ವಿವೇಕ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದು, 2ನೇ ಬಾರಿ ಪರೀಕ್ಷೆ ಎದುರಿಸಿದ ಜ್ಯೋತಿ ೨೫೦ ಅಂಕ ಗಳಿಸುವ ಮೂಲಕ ತೇರ್ಗಡೆಯಾದರೆ ಮಗ ನಿತೀನ್ ೫೮೨ ಅಂಕ ಗಳಿಸುವ ಮೂಲಕ ತೇರ್ಗಡೆಯಾಗಿದ್ದಾನೆ.