ಮೇ 14ರಿಂದ ಮಲಪ್ರಭಾ ಕಾಲುವೆಗೆ ನೀರು

| Published : May 10 2024, 01:32 AM IST

ಸಾರಾಂಶ

ಕಾಲುವೆಗೆ ಹರಿಸಲಾದ ನೀರು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕು. ಕುಡಿಯುವ ನೀರು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕಾಗಿ ಬಳಕೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು.

ಧಾರವಾಡ:

ಮೇ 14ರಿಂದ 23ರ ವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕು ವ್ಯಾಪ್ತಿಯ 58 ಕುಡಿಯುವ ನೀರಿನ ಕೆರೆ ತುಂಬಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ಗುರುವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದ ನಡುವೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹತ್ತು ದಿನ ನಿರಂತರ ಮಲಪ್ರಭಾ ಬಲದಂಡೆ ಕಾಲುವೆಗಳಿಂದ 0.5 ಟಿಎಂಸಿ (600 ಕ್ಯುಸೆಕ್‌) ನೀರನ್ನು ನಾಲ್ಕು ತಾಲೂಕುಗಳ 58 ಕೆರೆಗಳಿಗೆ ಬಿಡಲಾಗುವುದು ಎಂದ ಅವರು, ನವಲಗುಂದ ತಾಲೂಕಿನ 37 ಕೆರೆ, ಅಣ್ಣಿಗೇರಿಯ 13, ಹುಬ್ಬಳ್ಳಿಯ ಏಳು ಹಾಗೂ ಕುಂದಗೋಳದ ಮೂರು ಪೂರಕ ಸಂಗ್ರಹಣಾ ಕೆರೆಗಳನ್ನು ಭರ್ತಿ ಮಾಡಲಾಗುವುದು. ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಇಒ, ನೀರಾವರಿ ಇಲಾಖೆ ಎಇಇಗಳು ಕ್ರಿಯಾಶೀಲರಾಗಿ ನಿಗಾ ವಹಿಸಿತಕ್ಕದ್ದು ಎಂದು ಸೂಚಿಸಿದರು.

ಕಾಲುವೆಗೆ ಹರಿಸಲಾದ ನೀರು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕು. ಕುಡಿಯುವ ನೀರು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕಾಗಿ ಬಳಕೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ನೀರಾವರಿ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಪೋಲಿಸ್ ಹಾಗೂ ಗ್ರಾಮೀಣ ಕುಡಿಯುವ ನೀರು ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೂರು ತಂಡಗಳನ್ನು ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಎಲ್ಲರೂ ಒಬ್ಬರಿಗೊಬ್ಬರು ಸಹಕಾರದೊಂದಿಗೆ ನಾಲ್ಕು ತಾಲೂಕುಗಳ ಏಳು ಉಪ ವಿಭಾಗಗಳ ಸುಮಾರು 90 ಕಿಮೀ ವ್ಯಾಪ್ತಿಯ ಕಾಲುವೆ ಸುತ್ತ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ ಕ್ರಿಯಾಶೀಲರಾಗಿ ಕೆಲಸ ಮಾಡತಕ್ಕದ್ದು ಎಂದರು.

ಕಾಲುವೆ ಸುತ್ತಲಿನ 66 ಗ್ರಾಮಗಳಲ್ಲಿ 144 ಸೆಕ್ಷನ್ ಆದೇಶ ಹೊರಡಿಸಿ ನೀರು ಹರಿಸುವ ಸಮಯದಲ್ಲಿ ಆಯಾ ವಿಭಾಗಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲು ಪೊಲೀಸ್‌ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡಗೆ ಸೂಚಿಸಿದರು. ಬೇರೆ ಉದ್ದೇಶಕ್ಕೆ ನೀರು ಬಳಕೆಯಾಗದಂತೆ ಆಯಾ ವ್ಯಾಪ್ತಿಯ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು, ಪಿಡಿಒ, ಗ್ರಾಮಲೆಕ್ಕಿಗರು, ಪೊಲೀಸ್‌ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕೆಂದರು.

ಹೆಸ್ಕಾಂ ಅಧಿಕಾರಿಗಳು ನೀರು ಹರಿಸುವ ಸಮಯದಲ್ಲಿ ಎಲ್ಲ ಐಪಿ ಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಸೂಚಿಸಿದಾಗ, ಸೆಕ್ಷನ್ ಅಧಿಕಾರಿಗಳನ್ನು ಇದಕ್ಕೆ ನೇಮಿಸಲಾಗುವುದೆಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಕುಮಾರ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಮಲಪ್ರಭಾ ಯೋಜನಾ ವಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಡಾ. ಎಸ್.ಬಿ. ಮಲ್ಲಿಗವಾಡ, ಬ್ಯಾಹಟ್ಟಿ ವಿಭಾಗದ ಇಇ ಮನೋಹರ ಬಿಸ್ನಾಳ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಇಇ ಆರ್.ಎಂ. ಸೊಪ್ಪಿಮಠ ಇದ್ದರು.