ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಿಂಧನೂರು ಜಿಲ್ಲೆಗೆ ದ್ವಿತೀಯ ಸ್ಥಾನ

| Published : May 10 2024, 01:32 AM IST

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಿಂಧನೂರು ಜಿಲ್ಲೆಗೆ ದ್ವಿತೀಯ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿಯರ ಸರಾಸರಿ ಫಲಿತಾಂಶ ಶೇ.83.66 ಆಗಿರುವದರಿಂದ ಪ್ರತಿವರ್ಷದಂತೆ ಈ ವರ್ಷವು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಸಿಂಧನೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಸಿಂಧನೂರು ತಾಲೂಕು ರಾಯಚೂರು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಳಿಸಿದರು.

ತಾಲೂಕಿನ ಸರಾಸರಿ ಫಲಿತಾಂಶ ಶೇ.77.76 ಇದ್ದು, ವಿದ್ಯಾರ್ಥಿಗಳ ಸರಾಸರಿ ಫಲಿತಾಂಶ ಶೇ.70.78 ಇದೆ. ವಿದ್ಯಾರ್ಥಿನಿಯರ ಸರಾಸರಿ ಫಲಿತಾಂಶ ಶೇ.83.66 ಆಗಿರುವದರಿಂದ ಪ್ರತಿವರ್ಷದಂತೆ ಈ ವರ್ಷವು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 5611 ವಿದ್ಯಾರ್ಥಿಗಳಲ್ಲಿ 4363 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂಡಿಎನ್ ಫ್ಯೂಚರ್ ಇಂಗ್ಲಿಷ ಮಾಧ್ಯಮದ ಶಾಲೆಯ ವಿದ್ಯಾರ್ಥಿನಿ ಭೂಮಿಕಾ 613 ಅಂಕ ಪಡೆದು ಶೇ.98.08 ಫಲಿತಾಂಶ ಪಡೆದಿದ್ದಾರೆ. ತಾಲೂಕಿನ ಒಳಬಳ್ಳಾರಿಯ ಕನ್ನಡ ಮಾಧ್ಯಮದ ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಗಾದಿಲಿಂಗಪ್ಪ 610 ಅಂಕ ಪಡೆದು ಶೇ.97.60 ರಷ್ಟು ಫಲಿತಾಂಶ ಪಡೆದಿದ್ದಾರೆ. ನಗರದ ಗ್ಲೋರಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ನಂದಕುಮಾರ 608 ಅಂಕಪಡೆದು ಶೇ.97.28 ಫಲಿತಾಂಶ ಪಡೆದಿದ್ದಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.

ಸರ್ಕಾರಿ ಪ್ರೌಢ ಶಾಲೆ ಒಳಬಳ್ಳಾರಿ, ಸರ್ಕಾರಿ ಪ್ರೌಢ ಶಾಲೆ ಹೆಡಗಿನಾಳ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಜಾಲಿಹಾಳ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಾದರ್ಲಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಜವಳಗೇರಾ ಮತ್ತು ಎಂಡಿಎನ್ ಫ್ಯೂಚರ್ ಆಂಗ್ಲಾ ಮಾಧ್ಯಮ ಶಾಲೆ ಸಿಂಧನೂರು ಸಂಸ್ಥೆಗಳು ಪ್ರತಿಶತ 100 ರಷ್ಟು ಫಲಿತಾಂಶ ಪಡೆದ ಶಾಲೆಗಳಾಗಿವೆ ಎಂದು ಸೋಮಶೇಖರಗೌಡ ವಿವರಿಸಿದ್ದಾರೆ.