ಕುಮಾರಸ್ವಾಮಿ ದೇಗುಲದ ಜಾಗದ ಸರ್ವೆ ಕಾರ್ಯ ಶೀಘ್ರ ನಡೆಯಲಿ: ವೆಂಕಟರಾವ್ ಘೋರ್ಪಡೆ

| Published : May 10 2024, 01:32 AM IST

ಕುಮಾರಸ್ವಾಮಿ ದೇಗುಲದ ಜಾಗದ ಸರ್ವೆ ಕಾರ್ಯ ಶೀಘ್ರ ನಡೆಯಲಿ: ವೆಂಕಟರಾವ್ ಘೋರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ಯಶವಂತರಾವ್ ಘೋರ್ಪಡೆ ಸರ್ಕಾರಕ್ಕೆ ೪೫೦೦ ಎಕರೆಯನ್ನು ಹಸ್ತಾಂತರಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಅಂದಿನ ಸಿಎಂ ದೇವರಾಜ್ ಅರಸು ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ೫೦೦ ಎಕರೆ ಬಿಟ್ಟುಕೊಟ್ಟಿದ್ದರು

ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಲ್ಲಿರುವ ಕುಮಾರಸ್ವಾಮಿ ದೇವಸ್ಥಾನಕ್ಕೆ ೧೯೭೨ರಲ್ಲಿ ಅಂದಿನ ಸಿಎಂ ದೇವರಾಜ ಅರಸು ೫೦೦ ಎಕರೆ ಭೂಮಿ ನೀಡಿದ್ದರು. ಇದರಲ್ಲಿ ಕೆಲ ಭಾಗ ಅತಿಕ್ರಮಣವಾಗಿದೆ. ದೇವಸ್ಥಾನದ ಜಾಗದ ಸರ್ವೆಯನ್ನು ಶೀಘ್ರ ನಡೆಸಿ, ಅತಿಕ್ರಮಣವಾದ ಜಾಗ ತೆರವುಗೊಳಿಸಿ ದೇವಸ್ಥಾನದ ಟ್ರಸ್ಟಿಗೆ ಒಪ್ಪಿಸಬೇಕು ಎಂದು ಘೋರ್ಪಡೆ ರಾಜವಂಶಸ್ಥ ವೆಂಕಟರಾವ್ ಘೋರ್ಪಡೆ ಒತ್ತಾಯಿಸಿದರು.ಪಟ್ಟಣದ ಹೊರವಯಲದ ಕೃಷ್ಣಾನಗರದಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಯಶವಂತರಾವ್ ಘೋರ್ಪಡೆ ಸರ್ಕಾರಕ್ಕೆ ೪೫೦೦ ಎಕರೆಯನ್ನು ಹಸ್ತಾಂತರಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಅಂದಿನ ಸಿಎಂ ದೇವರಾಜ್ ಅರಸು ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ೫೦೦ ಎಕರೆ ಬಿಟ್ಟುಕೊಟ್ಟಿದ್ದರು ಎಂದು ತಿಳಿಸಿದರು.

ಹೊಸ ಟ್ರಸ್ಟ್ ರಚನೆಯಾಗಲಿ:

ದೇವಸ್ಥಾನದ ಉಸ್ತುವಾರಿಗಾಗಿ ೬ ಜನರಿರುವ ಹೊಸ ಟ್ರಸ್ಟ್ ರಚಿಸಬೇಕಿದೆ. ಇದರಲ್ಲಿ ದಿ.ಯಶವಂತರಾವ್ ಘೋರ್ಪಡೆಯವರ ನಾಲ್ವರು ಪುತ್ರರ ಕುಟುಂಬದಲ್ಲಿ ತಲಾ ಒಬ್ಬರನ್ನು ಹಾಗೂ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರನ್ನೊಳಗೊಂಡ ೬ ಜನರ ಟ್ರಸ್ಟ್ ರಚಿಸಿದರೆ, ದೇವಸ್ಥಾನದ ಸೂಕ್ತ ನಿರ್ವಹಣೆಗೆ ಅನುಕೂಲವಾಗಲಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಬಂದ ಭಕ್ತರಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಲವು ರೀತಿಯ ಅನುದಾನ ಲಭ್ಯವಾಗಲಿವೆ ಎಂದರು.

ಶಾಸಕರು, ಸಂಸದರು, ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು : ದೇವಸ್ಥಾನ ಇಲ್ಲಿನ ಜನಕ್ಕೆ ಸೇರಿದ್ದು. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ದೇವಸ್ಥಾನದ ಆಸ್ತಿಯ ಅತಿಕ್ರಮಣ ತೆರವುಗೊಳಿಸಿ, ಅದರ ರಕ್ಷಣೆ ಮತ್ತು ಅಭಿವೃದ್ಧಿಯ ಕುರಿತು ಧ್ವನಿ ಎತ್ತಬೇಕಿದೆ. ಸಂಘಟಿತ ಪ್ರಯತ್ನದಿಂದ ಈ ಕಾರ್ಯಕ್ಕೆ ವೇಗ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ದೇವಸ್ಥಾನದ ಜಾಗದ ಸರ್ವೆ ಕುರಿತಂತೆ ಸಚಿವ ರಾಮಲಿಂಗಾರೆಡ್ಡಿ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ನಾನು ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಚುನಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಅಧಿಕಾರಿಗಳು ದೇವಸ್ಥಾನದ ಜಾಗದ ಸರ್ವೇ ಕಾರ್ಯ, ಹೊಸ ಟ್ರಸ್ಟ್ ರಚನೆ ಕುರಿತಂತೆ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ಶಾಸಕರು, ಸಂಸದರು ಮತ್ತು ಸಂಘಸಂಸ್ಥೆಗಳು ಈ ಕುರಿತು ಗಮನ ಹರಿಸುವ ಅಗತ್ಯವಿದೆ ಎಂದರು.

ಈ ಕುರಿತು ಶಾಸಕ ಈ.ತುಕಾರಾಂ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ದೇವಸ್ಥಾನವು ಸ್ವಾಮಿಮಲೈ ಅರಣ್ಯ ವಲಯದಲ್ಲಿದೆ. ಇಲ್ಲಿ ಸರ್ವೆ ಸೆಟ್ಲಮೆಂಟ್ ಇನ್ನು ಆಗಿಲ್ಲ. ಕೆಲ ಗಣಿಗಳ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಮಾನದ ನಂತರ ಸರ್ವೇ ನಡೆಸಿ, ಅದರಲ್ಲಿ ಅರಣ್ಯ ಹಾಗೂ ಕಂದಾಯ ಪ್ರದೇಶಗಳನ್ನು ಗುರುತಿಸಬೇಕು. ಕಂದಾಯ ಪ್ರದೇಶದಲ್ಲಿ ಇನಾಂ ಭೂಮಿ ಗುರುತಿಸಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.