ಬಿಸಿಲಿನ ತಾಪಕ್ಕೆ ಮಂದಗತಿಯಲ್ಲಿ ಸಾಗಿದ ಮತದಾನ

| Published : Apr 28 2024, 01:20 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಧ್ಯಾಹ್ನದ ಬಿಸಿಲಿನ ತಾಪದಿಂದ ಮತದಾರರು ಕೆಲ ಮತಗಟ್ಟೆಯತ್ತ ಮಧ್ಯಾಹ್ನದವರೆಗೂ ಮುಖ ಮಾಡಲಿಲ್ಲ. ಇದರಿಂದ ಮತಗಟ್ಟೆ ಸಿಬ್ಬಂದಿ ಮತದಾರರನ್ನು ಕಾಯುವ ಪರಿಸ್ಥಿತಿ ಎದುರಾಗಿತ್ತು. ಸಂಜೆ 4 ಗಂಟೆ ನಂತರ ಬಿರುಸುಗೊಂಡಿತು. ಸಂಜೆ 5 ಗಂಟೆ ವೇಳೆಗೆ 75.02% ಮತದಾನ ನಡೆದಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಲೋಕಸಭಾ ಚುನಾವಣೆಯ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಮುಂಜಾನೆ 7 ಗಂಟೆಯಿಂದ ಆರಂಭಗೊಂಡ ಮತದಾನ ಬಿಸಿಲಿನ ತಾಪದಿಂದ ಮಧ್ಯಾಹ್ನ ಮಂದಗತಿಯಲ್ಲಿ ಸಾಗಿತು. ಸಂಜೆ ನಂತರ ಬಿರುಸಿನಿಂದ ನಡೆಯಿತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಧ್ಯಾಹ್ನದ ಬಿಸಿಲಿನ ತಾಪದಿಂದ ಮತದಾರರು ಕೆಲ ಮತಗಟ್ಟೆಯತ್ತ ಮಧ್ಯಾಹ್ನದವರೆಗೂ ಮುಖ ಮಾಡಲಿಲ್ಲ. ಇದರಿಂದ ಮತಗಟ್ಟೆ ಸಿಬ್ಬಂದಿ ಮತದಾರರನ್ನು ಕಾಯುವ ಪರಿಸ್ಥಿತಿ ಎದುರಾಗಿತ್ತು. ಸಂಜೆ 4 ಗಂಟೆ ನಂತರ ಬಿರುಸುಗೊಂಡಿತು. ಸಂಜೆ 5 ಗಂಟೆ ವೇಳೆಗೆ 75.02% ಮತದಾನ ನಡೆದಿತ್ತು.

ಎರಡು ಬಾರಿ ಕೈಕೊಟ್ಟ ಮತಯಂತ್ರ:

ತಾಲೂಕಿನ ಅಲ್ಲಾಪಟ್ಟಣ ಗ್ರಾಮದ 132ರ ಮತಗಟ್ಟೆಯಲ್ಲಿನ ಮತಯಂತ್ರ ಎರಡು ಬಾರಿ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 1.45 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಂತರ ತಜ್ಞರು ಮತ ಯಂತ್ರವನ್ನು ದುರಸ್ಥಿಗೊಳಿಸಿದ್ದಾರೆ. ಆದರೆ, 29 ಮತಗಳು ಚಲಾವಣೆಗೊಂಡ ಬಳಿಕ ಮತ್ತೆ ಮತಯಂತ್ರ ಕೈ ಕೊಟ್ಟಿದೆ. ಈ ವೇಳೆ ಮತ್ತೆ ಒಂದು ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು. ಮತಯಂತ್ರ ದುರಸ್ಥಿಯಾಗದ ಕಾರಣ ಹೊಸ ಮತಯಂತ್ರದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಿರುವುದಾಗಿ ತಿಳಿದು ಬಂದಿದೆ.

ಪ್ರಮುಖರ ಮತದಾನ:

ಶಾಸಕ ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಸ್ವಕ್ಷೇತ್ರ ಅರಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 155ರ ಮತ ಚಲಾಯಿಸಿದರು. ನಂತರ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಮತದಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಹಾಗೂ ಪತ್ನಿ ಗೀತಾ ರವೀಂದ್ರ ಅವರೊಂದಿಗೆ ಆಗಮಿಸಿ ತಾಲೂಕಿನ ಅರಕೆರೆ ಗ್ರಾಮದ ಮತಗಟ್ಟೆ 150ರಲ್ಲಿ ಮತದಾನ ಮಾಡಿದರು. ಜ್ಯೋತಿಷಿ ವೇ.ಬ್ರ.ಡಾ. ವಿ. ಭಾನುಪ್ರಕಾಶ್ ಶರ್ಮಾ ಪಟ್ಟಣದ ಪುರಸಭೆಯಲ್ಲಿನ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾಯಿಸಿದರು. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು. ತಾಲೂಕಿನ ಕಡತನಾಳು ಗ್ರಾಮದಲ್ಲಿ ಬಿಜೆಪಿ ಮುಖಂಡ ಕೆ.ಎಸ್.ನಂಜುಂಡೇಗೌಡ ಮತದಾನ ಮಾಡಿದರು.