ಹಿಂದೂಗಳ ರಕ್ಷಣೆಗೆ ಮೋದಿಗೆ ಮತ ಹಾಕಿ: ಯತ್ನಾಳ

| Published : Apr 27 2024, 01:23 AM IST

ಸಾರಾಂಶ

ಮುಸ್ಲಿಮರ ರಕ್ಷಣೆಗಾಗಿ ದೇಶದಲ್ಲಿ 52 ರಾಜಕೀಯ ಪಕ್ಷಗಳಿವೆ. ಆದರೆ ಹಿಂದೂಗಳ ರಕ್ಷಣೆಗೆ ಇರುವುದು ಬಿಜೆಪಿಯೊಂದೇ. ಅದಕ್ಕಾಗಿ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಮನೆ ಉಳಿಸಿಕೊಳ್ಳಲು ಮೋದಿಗೆ ಬೆಂಬಲಿಸಬೇಕು.

ಹುಬ್ಬಳ್ಳಿ:

ಕಾಂಗ್ರೆಸ್‌ ಹಿಂದೂ ವಿರೋಧಿ ಎನ್ನುವುದಕ್ಕೆ ನೇಹಾ ಹಿರೇಮಠ ಹತ್ಯೆಯೇ ಸಾಕ್ಷಿ. ನೇಹಾ ಬದಲು ಯಾರಾದರೂ ಮುಸ್ಲಿಂ ಯುವತಿ ಕೊಲೆಯಾಗಿದ್ದರೆ, ರಾಹುಲ್‌ ಗಾಂಧಿ, ಪ್ರಿಯಾಂಕ್‌ ಗಾಂಧಿಯೇ ಆಗಮಿಸುತ್ತಿದ್ದರು. ಆದರೆ ಇಲ್ಲಿ ಒಂದು ವಾರವಾದರೂ ಮುಖ್ಯಮಂತ್ರಿಯೂ ಬರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನವಲಗುಂದ ಕ್ಷೇತ್ರದ ಮೊರಬದಲ್ಲಿ ಆಯೋಜಿಸಿದ್ದ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನೇಹಾ ಕಾಂಗ್ರೆಸ್‌ ಮುಖಂಡನ ಮಗಳು. ಅವರ ಪಕ್ಷದ ಮುಖಂಡರ ಮನೆಯಲ್ಲೇ ಘಟನೆ ನಡೆದಿದ್ದರೂ ನಿರ್ಲಕ್ಷ್ಯ ಮಾಡಿದರು. ವೈಯಕ್ತಿಕ ಅಂತಂದ್ರು. ಪ್ರೇಮ ಪ್ರಕರಣ ಅಂತಂದ್ರು. ವಾರವಾದರೂ ಸಿದ್ದರಾಮಯ್ಯ ಬರಲಿಲ್ಲ. ಅದೇ ಮುಸ್ಲಿಂ ಯುವತಿ ಕೊಲೆಯಾಗಿದ್ದರೆ ಸಿದ್ರಾಮಣ್ಣ ಇಲ್ಲೇ ಅಳತಾ ಮಲಗಾತಾ ಇದ್ದರು. ರಾಹುಲ್‌, ಪ್ರಿಯಾಂಕಾ ಕೂಡ ಬರುತ್ತಿದ್ದರು ಎಂದರು.

ಮುಸ್ಲಿಮರ ರಕ್ಷಣೆಗಾಗಿ ದೇಶದಲ್ಲಿ 52 ರಾಜಕೀಯ ಪಕ್ಷಗಳಿವೆ. ಆದರೆ ಹಿಂದೂಗಳ ರಕ್ಷಣೆಗೆ ಇರುವುದು ಬಿಜೆಪಿಯೊಂದೇ. ಅದಕ್ಕಾಗಿ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಮನೆ ಉಳಿಸಿಕೊಳ್ಳಲು ಮೋದಿಗೆ ಬೆಂಬಲಿಸಬೇಕು. ಹಿಂದೂಗಳೆಲ್ಲ ಒಟ್ಟಾಗಿ ಬಿಜೆಪಿಗೆ ಮತ ಹಾಕಬೇಕು. ಇದು ಜೋಶಿ, ಮೋದಿ ಚುನಾವಣೆ ಅಲ್ಲ. ನಿಮ್ಮ ಮನೆ, ಮಾನ ಉಳಿಸಿಕೊಳ್ಳಲು ನಡೆಯುತ್ತಿರುವ ಚುನಾವಣೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಜೋಶಿ ಅವರು ಯಾವ ಲಿಂಗಾಯತರನ್ನು ತುಳಿಯುವ ಕೆಲಸ ಮಾಡಿಲ್ಲ. ಲಿಂಗಾಯತರ ಪರ ಅತ್ಯಂತ ಗಟ್ಟಿಯಾಗಿ ನಿಂತ ನಾಯಕ. ಲಿಂಗಾಯತರನ್ನು ಬೆಳೆಸಿದ ನಾಯಕರು ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಳಸಾ-ಬಂಡೂರಿ ವಿಷಯವಾಗಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರೆಲ್ಲರೂ ಬರೀ ಸುಳ್ಳು ಹೇಳುತ್ತಿದ್ದಾರೆ. ಅದೇ ಪಕ್ಷ ಈ ಯೋಜನೆ ವಿಷಯದಲ್ಲಿ ಅಡ್ಡಗಾಲು ಹಾಕುತ್ತಲೇ ಬಂದಿದೆ. ನಾವು ಬಂದ ಮೇಲೆಯೇ ಯೋಜನೆಯ ಒಂದೊಂದು ಅಡೆತಡೆಗಳನ್ನು ನಿವಾರಿಸುತ್ತಾ ಬಂದಿದ್ದೇವೆ. ಈಗ ಫಾರೆಸ್ಟ್‌ ಕ್ಲಿಯರೆನ್ಸ್‌ ಕೊಡುವುದೊಂದು ಬಾಕಿಯಿದೆ. ಅದಕ್ಕೆ ಬೇಕಾದ ವರದಿಗಳನ್ನು ರಾಜ್ಯ ಸರ್ಕಾರ ಕೊಡುವಲ್ಲಿ ವಿಳಂಬ ಮಾಡಿದೆ. ಆದರೆ ನಾವು ಈ ಯೋಜನೆಗೆ ಅನುಮತಿ ಕೊಟ್ಟೇ ತೀರುತ್ತೇವೆ. ಇದು ನಮ್ಮ ಜವಾಬ್ದಾರಿ ಕೂಡ ಹೌದು. ನಿಮ್ಮ ಋಣ ನನ್ನ ಮೇಲಿದೆ. ಆ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಕಳಸಾ-ಬಂಡೂರಿ ಜಾರಿಗೊಳಿಸಿಯೇ ತೀರುತ್ತೇನೆ ಎಂದು ಭರವಸೆ ನೀಡಿದರು.

ಒಬಿಸಿಯ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ನೀಡಲು ಹೊಂಚು ಹಾಕುತ್ತಿದೆ. ಆದರೆ ಈಗ ಮೀಸಲಾತಿ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಸಮಾವೇಶದಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ, ಸೇರಿದಂತೆ ಹಲವು ಗಣ್ಯರು ಇದ್ದರು.