ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆ

| Published : May 10 2024, 11:51 PM IST

ಸಾರಾಂಶ

ಶಿರಸಿಯ ಜೀವಜಲ ಕಾರ್ಯಪಡೆಯು ಒಂದು ಕಡೆ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ನಡೆದಿದ್ದಲ್ಲಿ ಮತ್ತೊಂದೆಡೆ ಅಗತ್ಯ ಉಳ್ಳವರ ದಾಹ ತಣಿಸುವ ಕೆಲಸ ಆಗುತ್ತಿದೆ.‌

ಶಿರಸಿ: ತೀವ್ರ ಬೇಸಿಗೆಯ ಪರಿಣಾಮ ಎಲ್ಲ ಕಡೆ ನೀರಿನ ಕೊರತೆ ಎದುರಾಗಿದೆ. ಮಲೆನಾಡಿನ‌ ಬಾಗಿಲಾದ ಶಿರಸಿಯಲ್ಲಿಯೂ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದನ್ನು ಮನಗಂಡ ಶಿರಸಿ ಜೀವಜಲ ಕಾರ್ಯಪಡೆಯು ಸ್ವತಃ ನಗರ ಭಾಗದ ವಿವಿಧೆಡೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡುತ್ತಿದೆ. ಸಾರ್ವಜನಿಕರಿಗೆ ಉಂಟಾಗುತ್ತಿರುವ ಕುಡಿಯುವ ನೀರಿನ‌ ಸಮಸ್ಯೆ ನಿವಾರಿಸಲು ಮುಂದಾಗಿದೆ.

ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನಿರಂತರ ಅವರು ಒಂಬತ್ತು ವರ್ಷಗಳಿಂದ ಕೆರೆ ಅಭಿವೃದ್ಧಿಯ ಜತೆಗೆ ಮನೆ ಮನೆಗೆ ಉಚಿತವಾಗಿ ನೀರು ನೀಡುವ ಕೆಲಸವನ್ನೂ ಮಾಡುತ್ತಿದೆ. ಒಂದು ಕಡೆ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ನಡೆದಿದ್ದಲ್ಲಿ ಮತ್ತೊಂದೆಡೆ ಅಗತ್ಯ ಉಳ್ಳವರ ದಾಹ ತಣಿಸುವ ಕೆಲಸ ಆಗುತ್ತಿದೆ.‌ ಒಂದು‌ ಸಂಸ್ಥೆ ಜಲ‌ ಸಂರಕ್ಷಣೆ, ಜಲ ದಾನ ಎರಡೂ‌ ಮಾಡುತ್ತಿದೆ. ಕಾರ್ಯಪಡೆ ಈವರೆಗೆ ೨೨ ಕೆರೆ ಅಭಿವೃದ್ಧಿ ಮಾಡಿ‌ ಗಮನ ಸೆಳೆದರೆ ಈಗ ಮತ್ತೆ ನಗರದಲ್ಲಿ ಮೂರು ಟ್ಯಾಂಕರ್ ನೀರು ಸದಾ ನೀರುಣಿಸುತ್ತಿದೆ.ನಿಸ್ವಾರ್ಥ ಸೇವೆ: ಒಂದೆಡೆ‌ ಕೆರೆಗಳ ಜೀರ್ಣೋದ್ಧಾರ ಮೂಲಕ‌ ಜಲ‌ ಸಂರಕ್ಷಣೆ ಮಾಡಿದರೆ, ಈಗ‌ ಬಾಯಾರಿದ ಜನರಿಗೆ ನೀರನ್ನೂ ಕೊಡುತ್ತಿದ್ದಾರೆ. ಹೆಬ್ಬಾರ್ ಅವರ ಮಾನವೀಯ‌ ಕಾರ್ಯಕ್ಕೆ, ನಿಸ್ವಾರ್ಥ ಸೇವೆಗೆ ಬೆಲೆ‌ ಕಟ್ಟಲು ಸಾಧ್ಯವಿಲ್ಲ ಎಂದು ಧಾರವಾಡ ಹಾಲು‌ ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ ತಿಳಿಸಿದರು.ಎಲ್ಲರ ಜವಾಬ್ದಾರಿ: ಜಲ‌ ಸಂಕಷ್ಟದ ಅರಿವಿದೆ. ಹೀಗಾಗಿ ಕುಡಿಯುವ ನೀರು ಕೊಡುವದು ಎಲ್ಲರ ಜವಾಬ್ದಾರಿ ಎಂದು ಭಾವಿಸಿ ನಿರಂತರ‌ ಸೇವೆ ನೀಡುತ್ತಿದ್ದೇವೆ ಎಂದು ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದರು.