ಬಸವಣ್ಣನ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪ : ತಮ್ಮಯ್ಯ

| Published : May 10 2024, 11:50 PM IST

ಸಾರಾಂಶ

ಚಿಕ್ಕಮಗಳೂರು, ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ. ಮೊದಲು ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದ್ದು 12 ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಿಂದ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

- ಕಲ್ಯಾಣ ನಗರದ ಬಸವ ತತ್ವ ಪೀಠದಲ್ಲಿ ವಿಶ್ವಗುರು ಬಸವಣ್ಣನವರ 891 ನೇ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ. ಮೊದಲು ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದ್ದು 12 ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಿಂದ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕಲ್ಯಾಣ ನಗರದ ಬಸವತತ್ವ ಪೀಠ ಬಸವ ಮಂದಿರದಲ್ಲಿ ಶುಕ್ರವಾರ ನಡೆದ ವಿಶ್ವಗುರು ಬಸವಣ್ಣನವರ 891 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಜಗಜ್ಯೋತಿ ಬಸವಣ್ಣನವರಿಗೆ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಬಿರುದನ್ನು ನೀಡಿದ ಬಳಿಕ ಆಚರಿಸುತ್ತಿರುವ ಈ ಜಯಂತಿ ಬಹಳ ಅರ್ಥಪೂರ್ಣವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶರಣ ಬಂಧುಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಇದರ ಜೊತೆಗೆ ಬಸವ ಮಂದಿರದಲ್ಲಿ ನೂತನ ಪೀಠಾಧಿಪತಿ ಡಾ.ಮರುಳುಸಿದ್ದ ಸ್ವಾಮೀಜಿಗಳ ಆಶೀರ್ವಾದದಿಂದ ಈ ಬಸವ ಜಯಂತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಠದ ಟ್ರಸ್ಟ್ ಸದಸ್ಯರ ತೀರ್ಮಾನದಂತೆ ಇಂದು ಅಂಬಲಿ ಮಜ್ಜಿಗೆ ದಾಸೋಹ ಪ್ರಸಾದ ನೀಡಲಾಗುತ್ತಿದೆ. ಕಾರಣ ಜಯಂತಿಗಳಲ್ಲಿ ದಾಸೋಹ ವಿಶೇಷವಾಗಿರ ಬೇಕೆಂದು ಕೆಲವು ಮಹನೀಯರ ಜಯಂತಿಯಲ್ಲಿ ಪಾನಕ, ಕೋಸಂಬರಿ ಪ್ರಸಾದ ಇರುತ್ತದೆ. ಬಸವಣ್ಣನವರೇ ಹೇಳಿರುವ ಕಾಯಕವೇ ಕೈಲಾಸ ಎಂಬಂತೆ ಮಾದಾರ ಚನ್ನಯ್ಯನವರ ಮನೆ ಯಿಂದ ಅಂಬಲಿ ಪಡೆದು, ನುಲಿಯ ಚಂದಯ್ಯನವರ ಮನೆಯಿಂದ ಮಜ್ಜಿಗೆ ಸ್ವೀಕರಿಸಿದ ನೆನಪಿಗೆ ಇಂದು ಅಂಬಲಿ ಮಜ್ಜಿಗೆ ಪ್ರಸಾದ ನೀಡಲಾಗುತ್ತಿದೆ. ಇದು ಇಂದಿನಿಂದ ನಿರಂತರವಾಗಿ ಬಸವತತ್ವ ಪೀಠದಲ್ಲಿ ನಡೆಯಲಿದೆ ಎಂದು ಹೇಳಿದರು.12ನೇ ಶತಮಾನದಲ್ಲಿ ಬಸವಣ್ಣ, 19ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸದಿದ್ದರೆ ಇಂದು ಖಂಡಿತಾ ಸಮ ಸಮಾಜ ನಿರ್ಮಾಣವಾಗುತ್ತಿರಲಿಲ್ಲ. ಹಿಂದುಳಿದವರು, ದಲಿತರು, ಶೋಷಿತರು ಸಮಾಜದ ಮುನ್ನಲೆಗೆ ಬರಲು ಸಾಧ್ಯ ವಾಗುತ್ತಿರಲಿಲ್ಲ ಎಂದರು.

ಮಹಾನ್ ಪುರುಷರ ವಿಚಾರಧಾರೆಗಳನ್ನು ಪ್ರಸ್ತುತ ಸಮಾಜದ ಎಲ್ಲಾ ವರ್ಗದ ಜನರು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್, ಕನಕ ದಾಸರಂತಹ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಿ ದಂತಾಗುತ್ತದೆ ಎಂದು ಹೇಳಿದರು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್ ಮಾತನಾಡಿ, ಬಸವಣ್ಣನವರು ಹೇಳಿದಂತೆ ಸರ್ವರೂ ಸಮನಾಗಿ ಜೀವಿಸಿದಾಗ ಮಾತ್ರ ಅವರ ಜಯಂತಿಗೆ ನಿಜ ಅರ್ಥ ಬರುತ್ತದೆ ಎಂದರು.ಸರ್ವ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದು ಬಸವಣ್ಣನವರ ಕನಸಾಗಿತ್ತು. ಆದರೆ, ಇಂದಿಗೂ ಅಸ್ಪೃಶ್ಯತೆ ಇರುವುದರ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು ಇದನ್ನು ತೊಡೆದು ಹಾಕುವಲ್ಲಿ ಸರ್ವರ ಸಹಭಾಗಿತ್ವ ಅಗತ್ಯ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಬಿ.ತಿಪ್ಪೇರುದ್ರಪ್ಪ, ಉದ್ಯಮಿ ಸದಾಶಿವ, ಜಗದೀಶ್ ಬಾಬು, ಮಧುಕುಮಾರ್, ಚಿದಾ ನಂದ, ಅಕ್ಕನ ಬಳಗದ ಸದಸ್ಯರು ಹಾಗೂ ಜಾಗತಿಕ ಬಸವಣ್ಣ ಸಾಂಸ್ಕೃತಿಕ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.

10 ಕೆಸಿಕೆಎಂ 4ಚಿಕ್ಕಮಗಳೂರಿನ ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಶುಕ್ರವಾರ ವಿಶ್ವಗುರು ಬಸವಣ್ಣನವರ 891 ನೇ ಜಯಂತಿ ಕಾರ್ಯಕ್ರಮ ನಡೆಯಿತು. ಶಾಸಕ ಎಚ್‌.ಡಿ. ತಮ್ಮಯ್ಯ, ಬಿ.ಎಚ್. ಹರೀಶ್, ಬಿ. ತಿಪ್ಪೇರುದ್ರಪ್ಪ, ಸದಾಶಿವ ಇದ್ದರು.