ಮೂರು ವರ್ಷಗಳ ನಂತರ ಧಾರವಾಡ ಪ್ರವೇಶಿಸಿದ ವಿನಯ ಕುಲಕರ್ಣಿ

| Published : May 08 2024, 01:03 AM IST

ಮೂರು ವರ್ಷಗಳ ನಂತರ ಧಾರವಾಡ ಪ್ರವೇಶಿಸಿದ ವಿನಯ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನಕ್ಕೆ ಅವಕಾಶ ಕೋರಿ ವಿನಯ ಕುಲಕರ್ಣಿ ಪರ ವಕೀಲರು ಮತದಾನದ ಮುನ್ನಾ ದಿನ ಸೋಮವಾರವೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದು ಫಲಪ್ರದವಾಗಿರಲಿಲ್ಲ.

ಧಾರವಾಡ:

ನ್ಯಾಯಾಲಯದ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು ಮೂರು ವರ್ಷಗಳಿಂದ ಧಾರವಾಡ ಜಿಲ್ಲೆ ಪ್ರವೇಶಿಸದ ಶಾಸಕ ವಿನಯ ಕುಲಕರ್ಣಿ, ಉಚ್ಚ ನ್ಯಾಯಾಲಯದ ಅನುಮತಿ ಮೇರೆಗೆ ಮಂಗಳವಾರ ಧಾರವಾಡ ಪ್ರವೇಶಿಸಿ ಇಲ್ಲಿಯ ಶಾರದಾ ಹೈಸ್ಕೂಲ್‌ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಪತ್ನಿ ಶಿವಲೀಲಾ ಕುಲಕರ್ಣಿ, ಮಗಳು ವೈಶಾಲಿ ಜತೆಗೂಡಿ ಮತಗಟ್ಟೆಗೆ ಆಗಮಿಸಿದ ವಿನಯ ಕುಲಕರ್ಣಿ ಮತದಾನ ಮಾಡಿದರು.

ಮತದಾನಕ್ಕೆ ಅವಕಾಶ ಕೋರಿ ವಿನಯ ಕುಲಕರ್ಣಿ ಪರ ವಕೀಲರು ಮತದಾನದ ಮುನ್ನಾ ದಿನ ಸೋಮವಾರವೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದು ಫಲಪ್ರದವಾಗಿರಲಿಲ್ಲ. ಆದರೆ, ಹೈಕೋರ್ಟ್‌ ಏಕಸದಸ್ಯ ಪೀಠ ಮತದಾನಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿನಯ ಧಾರವಾಡಕ್ಕೆ ಆಗಮಿಸಿ ಮತದಾನ ಮಾಡಿದರು.

ವಿನಯ ಕುಲಕರ್ಣಿ ಸಂಜೆ 4.45ಕ್ಕೆ ಆಗಮಿಸಲಿದ್ದಾರೆ ಎಂದು ಸಾವಿರಾರು ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಮತಗಟ್ಟೆ ಎದುರು ಜಮಾಯಿಸಿದ್ದರು. ವಿನಯ ಅವರು ಸಂಜೆ 5.45ಕ್ಕೆ ಅಭ್ಯರ್ಥಿ ವಿನೋದ ಅಸೂಟಿ, ಶಾಸಕ ಎನ್‌.ಎಚ್‌. ಕೋನರಡ್ಡಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿ ಮರಳಿದರು. ವಿಕೆ ಬಾಸ್‌ ಎಂದು ಜಯಘೋಷ ಕೂಗಿದ ಅಭಿಮಾನಿಗಳು ಅವರಿಗೆ ಹಾರ ಹಾಕಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ ಕುಲಕರ್ಣಿ, ಉಚ್ಚ ನ್ಯಾಯಾಲಯ ಮತ ಹಾಕಲು ಅವಕಾಶ ನೀಡಿದ್ದು ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ನಾನೇ ಅಭ್ಯರ್ಥಿಯಾಗಿದ್ದರೂ ಮತ ಹಾಕಲು ಅವಕಾಶ ದೊರೆಯಲಿಲ್ಲ. ಆದ್ದರಿಂದ ಈಗ ವಿನೋದ ಅಸೂಟಿ ಅವರ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿದ್ದು ಖುಷಿ ಜತೆಗೆ ನಾನು ಶಾಸಕನಾದರೂ ಕ್ಷೇತ್ರಕ್ಕೆ ಪ್ರವೇಶ ಮಾಡದಂತಾಗಿದ್ದು ನೋವು ತಂದಿದೆ. ಈ ಬಾರಿ ಧಾರವಾಡ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2016ರ ಜೂನ್‌ 15ರಂದು ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು 2020ರ ನವೆಂಬರ್‌ 5ರಂದು ಬಂಧಿಸಿದ್ದರು. 2021ರ ಜುಲೈ 27ರಂದು ಜಿಪಿಎ ನೀಡಲು ವಿನಯ ಕುಲಕರ್ಣಿ ಧಾರವಾಡಕ್ಕೆ ಆಗಮಿಸಿದ್ದೇ ಕೊನೆ. ನಂತರದಲ್ಲಿ 2021ರ ಆಗಸ್ಟ್‌ 11ಕ್ಕೆ ಅವರಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.