ಕೋಲಾರ ಜಿಲ್ಲೆಯಲ್ಲಿ ಬತ್ತಿದ ಕೆರೆಗಳು, ನೀರಿಗೆ ತತ್ವಾರ

| Published : May 08 2024, 01:03 AM IST

ಕೋಲಾರ ಜಿಲ್ಲೆಯಲ್ಲಿ ಬತ್ತಿದ ಕೆರೆಗಳು, ನೀರಿಗೆ ತತ್ವಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಕೆ.ಸಿ.ವ್ಯಾಲಿಯಿಂದ ಕೋಲಾರದ ಕೆರೆಗಳಿಗಿಗೆ ಎರಡು ಹಂತದ ಶುದ್ಧೀಕರಣಕ್ಕೆ ಒಳಪಡಿಸಿ ಹರಿಸಲಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಬೇಸಿಗೆಯ ಸುಡು ಬಿಸಿಲಿನ ತಾಪಕ್ಕೆ ಬಯಲು ಸೀಮೆ ಕೋಲಾರ ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಜೀವನಾಡಿಯಾಗಿರುವ ಕೆರೆಗಳು ಬತ್ತಿ ಬರಡಾಗಿವೆ. ಮೊದಲೇ ಬರದ ನಾಡು ಎಂಬ ಹಣೆಪಟ್ಟಿ ಹೊತ್ತ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಕೆ.ಸಿ.ವ್ಯಾಲಿ ಯೋಜನೆಯಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಲಾಗಿತ್ತು. ಇದರಿಂದ ಕಳೆದ ಎರಡು ವರ್ಷದಿಂದ ಜಿಲ್ಲೆಯ ಅಂತರ್ಜಾಲದಲ್ಲಿ ಚೇತರಿಕೆ ಕಂಡಿತ್ತು. ಒಂದು ಹಂತಕ್ಕೆ ಜಿಲ್ಲೆಗೆ ತಗುಲಿದ್ದ ಶಾಪ ವಿಮೋಚನೆ ಆದಂತೆ ಬಾಸವಾಗಿತ್ತು. ಆದರೆ, ಈಗ ಯಥಾಸ್ಥಿತಿಗೆ ಕೋಲಾರ ಜಿಲ್ಲೆ ಮರಳಿದೆ.ಕನಸಾದ ನೀರಾವರಿ ಯೋಜನೆ

ಬೆಂಗಳೂರಿನ ಕೊಳಚೆ ನೀರು ಕೊಟ್ಟಿದ್ದೇ ಸಾಧನೆ ಎಂಬಂತೆ ಈಗಿನ ಸರ್ಕಾರ ಹಾಗೂ ಹಿಂದಿನ ಸರ್ಕಾರಗಳು ಜಂಭ ಕೊಚ್ಚಿಕೊಂಡು ಪೈಪೋಟಿಯಲ್ಲಿ ಜನರನ್ನು ಮರಳು ಮಾಡಿದ್ದೇ ಮಾಡಿದ್ದು. ಇದನ್ನೇ ಮುಂದಿಟ್ಟುಕೊಂಡು ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ನದಿ ನೀರನ್ನೂ ಹರಿಸಿಲ್ಲ, ಎತ್ತಿನಹೊಳೆ ಯೋಜನೆ, ಮೇಕೆದಾಟು ಯೋಜನೆಗಳು ಮರೀಚಿಕೆಯಾಗಿವೆ. ಇಂದು ಇಡೀ ಜಿಲ್ಲೆಯ ಜನತೆ ನೀರಿಲ್ಲದೆ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಸಿ.ವ್ಯಾಲಿಯಿಂದ ಕೋಲಾರಕ್ಕೆ ನೀರು ಹರಿಯಬೇಕಾದರೆ ಬೆಂಗಳೂರಿನಲ್ಲಿ ಮಳೆ ಸುರಿಯಬೇಕು, ಬೆಂಗಳೂರು ಜನತೆ ಹೆಚ್ಚು ನೀರು ಬಳಸಿದಾಗ, ಹೆಚ್ಚು ಕೊಳಚೆ ನೀರು ಕಾಲುವೆಗೆ ಹರಿಯುತ್ತದೆ. ಆಗ ನೀರನ್ನು ಎರಡನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿಲ್ಲ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ

ಈಗ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಾದ್ಯಂತ ಬಿಸಿಲಿನ ಬೇಗೆಯಿಂದ ಕೆರೆಗಳು ಬತ್ತಿ ಹೋಗಿವೆ, ಗಿಡ ಮರಗಳು ಒಣಗಿವೆ. ಜಾನುವಾರುಗಳು ಮೇವಿಲ್ಲದೆ ನರಳುತ್ತಿವೆ, ಪ್ರಾಣಿ ಪಕ್ಷಿಗಳು ಕಣ್ಮರೆಯಾಗಿವೆ. ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ದೂರಾಲೋಚನೆ ಇಲ್ಲದೆ ತಾತ್ಕಾಲಿಕ ಪರಿಹಾರದ ಕಡೆ ಗಮನಹರಿಸಿ, ಶಾಶ್ವತ ಯೋಜನೆಗಳನ್ನು ಮರೆತರೆ ಏನಾಗಬಾರದೋ ಅದೇ ಪರಿಸ್ಥಿತಿ ಇಂದು ಜಿಲ್ಲೆಗೆ ಬಂದೊದಗಿದೆ.

ಒಟ್ಟಿನಲ್ಲಿ ಸುಡು ಬಿಸಿಲಿನ ತಾಪಕ್ಕೆ ಬಯಲು ಸೀಮೆ ಕೋಲಾರ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಸಾಮಾನ್ಯವಾಗಿ ಜಿಲ್ಲೆಯ ಸರಾಸರಿ ತಾಪಮಾನ ೧೮ ಡಿಗ್ರಿಯಿಂದ ೨೮ ಡಿಗ್ರಿ ಇರುತ್ತದೆ. ಅಪರೂಪಕ್ಕೆ ೩೦ರ ಗಡಿ ದಾಟುತ್ತಿತ್ತು. ಆದರೆ ಈಗ ಪ್ರತಿ ದಿನದ ತಾಪಮಾನ ೩೬ ರಿಂದ ೪೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ನೀರಿನ ಸಮಸ್ಯೆ ಬಿಗಡಾಯಿಸುವ ಮುನ್ನ ಈ ಸಮಸ್ಯೆಗೆ ಸರ್ಕಾರ ಪರಿಹಾರ ರೂಪಿಸಬೇಕಿದೆ.

ಬಾಕ್ಸ್‌.......ಸದ್ಯ ನೀರಿನ ಸಮಸ್ಯೆ ಇಲ್ಲ

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹಾಗೂ ಕೆಸಿ ವ್ಯಾಲಿ ನೀರು ಹರಿಯುತ್ತಿಲ್ಲವಾದ ಕಾರಣಕ್ಕೆ ನೀರಿನ ಶೇಖರಣೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಕೆರೆಗಳು ಬತ್ತಿ ಹೋಗಿವೆ. ಆದರೆ ಕಳೆದ ಮೂರು ವರ್ಷಗಳಿಂದ ಒಳ್ಳೆಯ ಮಳೆಯಾಗಿರುವ ಕಾರಣ ಅಂತರ್ಜಲ ವೃದ್ಧಿಯಾಗಿದ್ದು, ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆ. ಇನ್ನೂ ಮೂರು ತಿಂಗಳು ಕುಡಿಯುವ ನೀರಿನ ಸಮಸ್ಯೆ ಇಲ್ಲ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಇಲ್ಲ, ಇಷ್ಟು ದಿನ ಬಳಕೆಯಾಗದೆ ಇದ್ದ ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆ. ಮೂರು ತಿಂಗಳ ನಂತರ ಕೊರತೆ ಉಂಟಾದರೆ ಹೊಸ ಕೊಳವೆಬಾವಿ ಕೊರೆಯಬೇಕಾಗುತ್ತದೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ ಎಂದು ಜಿಪಂ ಸಿಇಒ ಪದ್ಮ ಬಸವಂತಪ್ಪ ಪ್ರತಿಕ್ರಿಯೆ ನೀಡಿದ್ದಾರೆ.