ಕೊಪ್ಪಳ ಜಿಲ್ಲೆಯಲ್ಲಿ ಶೇ. 70.94 ರಷ್ಟು ಮತದಾನ

| Published : May 08 2024, 01:03 AM IST

ಕೊಪ್ಪಳ ಜಿಲ್ಲೆಯಲ್ಲಿ ಶೇ. 70.94 ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಗವಿಮಠದ ಶ್ರೀಗಳು ಸೇರಿದಂತೆ ಹಲವು ಪ್ರಮುಖರು ತಮ್ಮ ಹಕ್ಕು ಚಲಾಯಿಸಿದರೆ ಸಚಿವರು, ಶಾಸಕರು ಸರದಿಯಲ್ಲಿ ನಿಂತು ಮತದಾನ ಮಾಡಿದರು.

ಹಕ್ಕು ಚಲಾಯಿಸಿದ ಗವಿಮಠದ ಶ್ರೀಗಳು

ಸರದಿಯಲ್ಲಿ ನಿಂತು ಮತದಾನ ಮಾಡಿದ ಸಚಿವರು, ಶಾಸಕರು

ಮತಗಟ್ಟೆಗೆ ಪೂಜೆ ಸಲ್ಲಿಸಿದ ಏಜೆಂಟರು, ಅಲ್ಲಲ್ಲಿ ಮತದಾನ ಬಹಿಷ್ಕಾರಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಲ್ಲಲ್ಲಿ ಮತದಾನ ಬಹಿಷ್ಕಾರ, ಮತಗಟ್ಟೆಗೆ ಪೂಜೆ, ಶತಾಯುಷಿಗಳಿಂದ ಮತದಾನ ಮಾಡಿದ್ದು, ವಿಶೇಷವಾಗಿ ಕಂಡು ಬಂದಿತು. ಗವಿಮಠದ ಶ್ರೀಗಳು ಸೇರಿದಂತೆ ಹಲವು ಪ್ರಮುಖರು ತಮ್ಮ ಹಕ್ಕು ಚಲಾಯಿಸಿದರೆ ಸಚಿವರು, ಶಾಸಕರು ಸರದಿಯಲ್ಲಿ ನಿಂತು ಮತದಾನ ಮಾಡಿದರು. ಮತದಾನ ಜಿಲ್ಲಾದ್ಯಂತ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ.

ಇದು, ಕೊಪ್ಪಳ ಲೋಕಸಭಾ ಕ್ಷೇತ್ರದ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮತದಾನ ಝಲಕ್.

ಬಿಗಿ ಪೊಲೀಸ್ ಪಹರೆ ಮತ್ತು ಜಿಲ್ಲಾಡಳಿತದ ಅಚ್ಚುಕಟ್ಟಾದ ವ್ಯವಸ್ಥೆಯಿಂದಾಗಿ ಜಿಲ್ಲಾದ್ಯಂತ ಇದೇ ಮೊದಲ ಬಾರಿ ಯಾವುದೇ ಸಣ್ಣ ಅವಘಡಗಳು ಇಲ್ಲದೆ ಮತದಾನ ಶಾಂತಿಯುತವಾಗಿ ನಡೆದಿದೆ.

ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ಮತದಾರರು ಮತ ಚಲಾಯಿಸಿದರು. ಆದರೆ ಮಧ್ಯಾಹ್ನದ ವೇಳೆಗೆ ಮತಗಟ್ಟೆಯ ಬಳಿ ಹೆಚ್ಚಿನ ಜನ ಸುಳಿಯಲಿಲ್ಲ.

ಬಳಿಕ ಸಂಜೆಯಾಗುತ್ತಿದ್ದಂತೆ ಮತ್ತೆ ಮತಗಟ್ಟೆಯತ್ತ ಮತದಾನ ಮಾಡಲು ಜನರು ಧಾವಿಸಿದರು. ಹೀಗಾಗಿ, ಸಂಜೆಯಾಗುತ್ತಿದ್ದಂತೆ ಎಲ್ಲ ಮತಗಟ್ಟೆಯಲ್ಲಿ ಜನವೋ ಜನ ಎನ್ನುವಂತಾಗಿತ್ತು. ಬೆಳಗ್ಗೆ 11 ಗಂಟೆಯ ವೇಳಗೆ ಸುಮಾರು ಶೇ.34ರಷ್ಟು ಮತದಾನವಾಯಿತು. ಬೀಸಿನ ತಾಪ ಇದ್ದಿದ್ದರಿಂದ ಮತದಾರರು ಬೆಳ್ಳಂಬೆಳಗ್ಗೆಯೇ ಮತಗಟ್ಟೆಯತ್ತ ಧಾವಿಸಿದ್ದರು. ಹೀಗಾಗಿ, ಬೆಳಗ್ಗೆ ಮತದಾನ ಚುರುಕುಗೊಂಡಿತು. ಬೆಳಗ್ಗೆ ಇನ್ನೇನು ಮತಗಟ್ಟೆ ಸಿಬ್ಬಂದಿ ಸಿದ್ಧವಾಗುವುದರ ಒಳಗೇ ಮತದಾರರು ಮತಗಟ್ಟೆಗೆ ಆಗಮಿಸಿದ್ದರು. ಮುಂಡಾನೆ 6 ಗಂಟೆಗೆ ಮತದಾನ ಶುರು ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಧ್ಯಾಹ್ನ 1 ಗಂಟೆಯ ವೇಳೆಗೆ ಸುಮಾರು 45ರಷ್ಟು ಮತದಾನವಾಗಿದ್ದು ಮತಗಟ್ಟೆಯ ಸಿಬ್ಬಂದಿಗೆ ಅಚ್ಚರಿಯಾಗುವಂತೆ ಮಾಡಿತು. ಇದೇ ವರ್ಷವೇ ಬೆಳಗ್ಗೆಯೇ ಇಷ್ಟೊಂದು ಮತದಾನವಾಗಿರುವುದು ಎಂದು ವಿಶ್ಲೇಷಣೆ ಮಾಡುತ್ತಿದ್ದರು. ಆದರೆ, 1 ಗಂಟೆಯ ನಂತರ ಮತದಾನ ನಡೆಯುತ್ತಿದೆಯಾ ಇಲ್ಲವಾ ಎನ್ನುವಂತೆ ಮತಗಟ್ಟೆಗಳು ಬಣಗುಡುತ್ತಿದ್ದವು. ಹೀಗಾಗಿ, ಮಧ್ಯಾಹ್ನದ ಎರಡು ಗಂಟೆ ಸಮಯದಲ್ಲಿ ನಾಲ್ಕಾರು ಪರ್ಸೆಂಟೇಸ್ ಸಹ ಮತದಾನ ಆಗಲಿಲ್ಲ. ಆದರೆ, ಮಧ್ಯಾಹ್ನ 3 ಗಂಟೆಯ ನಂತರ ಮತ್ತೆ ಮತದಾನ ಶುರುವಾಯಿತು. ಹೀಗಾಗಿ, ಸಂಜೆ 5 ಗಂಟೆಯ ವೇಳೆಗೆ 65ರಷ್ಟು ಮತದಾನವಾಗಿರುವ ವರದಿಯಾಗಿದೆ.

ಹಕ್ಕು ಚಲಾಯಿಸಿದ ಶ್ರೀಗಳು:

ಗವಿಸಿದ್ದೇಶ್ವರ ಶ್ರೀಗಳು ಕೊಪ್ಪಳ ನಗರದ ಕುವೆಂಪು ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅದೇ ರೀತಿ ಜಿಲ್ಲಾದ್ಯಂತ ಅನೇಕ ಸ್ವಾಮೀಜಿ ಮತದಾನ ಮಾಡಿದರು.

ಸರದಿಯಲ್ಲಿ ಸಚಿವರು, ಶಾಸಕರು:

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರಟಗಿಯಲ್ಲಿ ಕುಟಂಬ ಸಮೇತ ಸರದಿಯಲ್ಲಿಯೇ ನಿಂತು ಮತದಾನ ಮಾಡಿದರು.

ಸಚಿವರು ಆಗಮಿಸುತ್ತಿದ್ದಂತೆ ಸರದಿಯಲ್ಲಿ ನಿಂತವರು ಮತದಾನಕ್ಕೆ ಅನುವು ಮಾಡಿಕೊಟ್ಟರು. ಆದರೆ ಸಚಿವ ತಂಗಡಗಿ ನೇರವಾಗಿ ಮತದಾನ ಮಾಡಲು ಹೋಗದೆ ಸರದಿಯಲ್ಲಿಯೇ ನಿಂತು ಮತದಾನ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರವಾದರು.

ಕುಷ್ಟಗಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಸಹ ಕುಟುಂಬ ಸಮೇತ ಆಗಮಿಸಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.

ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಮಾಜಿ ಸಚಿವ ಹಾಲಪ್ಪ ಆಚಾರ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮೊಮ್ಮಗಳೊಂದಿಗೆ ಬಂದು ಮತಚಲಾಯಿಸಿದರು. ಮಾಜಿ ಸಂಸದ ಸಂಗಣ್ಣ ಕರಡಿ ಕೊಪ್ಪಳ ನಗರದ ಪಿಎಲ್‌ಡಿ ಬ್ಯಾಂಕ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಅಲ್ಲಲ್ಲಿ ಮತದಾನ ಬಹಿಷ್ಕಾರ:

ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದ್ದು, ಬಳಿಕ ಕೆಲವೆಡೆ ಮತದಾನ ನಡೆದಿದೆ.

ಕುಕನೂರು ಸಮೀಪದ ಗುದ್ನೆಪ್ಪ ಮಠದ ಬಳಿ ನಿವಾಸಿಗಳು ಭೂಮಿಯ ವಿವಾದ ಇತ್ಯರ್ಥಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಸುಮಾರು 850ಕ್ಕೂ ಹೆಚ್ಚು ಮತದಾನ ಇದ್ದರೂ ಕೇವಲ 32 ಮತದಾರರು ಮಾತ್ರ ಮತದಾನ ಮಾಡಿದ್ದಾರೆ.

ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದಲ್ಲಿಯೂ ಸಾರ್ವಜನಿಕರು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ ಹಾಕಿದ್ದಾರೆ. ಅಧಿಕಾರಿಗಳು ನಿವಾಸಿಗಳ ಮನವೊಲಿಸಿದ್ದು, ಮತದಾನ ನಡೆಯಿತು.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ 18ನೇ ವಾರ್ಡಿನಲ್ಲಿ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಸಾವು ಸಂಭವಿಸಿದೆ. ಹೀಗಾಗಿ, ನಾವು ಮತದಾನ ಮಾಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದು, ಮತದಾನದಿಂದ ದೂರ ಉಳಿದಿದ್ದಾರೆ. ವೈದ್ಯರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.

ಮತಗಟ್ಟೆಯಲ್ಲಿ ಪೂಜೆ:

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಮತದಾನ ಪ್ರಾರಂಭವಾಗುವ ಮೊದಲು ಏಜೆಂಟರೆಲ್ಲ ಸೇರಿ ಮತಗಟ್ಟೆಗೆ ಪೂಜೆ ಸಲ್ಲಿಸಿದರು. ಮತಗಟ್ಟೆಗೆ ಪೂಜೆ ಸಲ್ಲಿಸಿದ ಬಳಿಕವೇ ಮತದಾನಕ್ಕೆ ಅವಕಾಶ ನೀಡಲಾಯಿತು.

ತಾಲೂಕಿನ ಹುಲಿಗಿ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಮಾಡಿ, ಮತಯಂತ್ರದ ಹೆಸರಿನಲ್ಲಿ ಬಾಗಿಲಲ್ಲಿ ತೆಂಗಿನಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿದರು.

ಮತಗಟ್ಟೆ ಸಿಂಗಾರ:

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಮತಗಟ್ಟೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು, ತಳಿರು ತೋರಣ ಕಟ್ಟಿದ್ದರು. ಗಂಗಾವತಿಯ ಕೆಲ ಮತಗಟ್ಟೆಯಲ್ಲಿ ಮತದಾರರಿಗೆ ಶರಬತ್ತು ಸಹ ವಿತರಣೆ ಮಾಡಲಾಯಿತು.

ಕೈಕೊಟ್ಟ ಇವಿಎಂ:

ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದಲ್ಲಿ ವಾರ್ಡ್ ನಂ. 3ರಲ್ಲಿದ್ದ ಮತಗಟ್ಟೆಯಲ್ಲಿ ಮತದಾನ ಪ್ರಾರಂಭವಾಗುವ ಮುನ್ನವೇ ಇವಿಎಂ ಕೈಕೊಟ್ಟಿದ್ದರಿಂದ ಕೆಲಕಾಲ ಎಲ್ಲರೂ ಗಲಿಬಿಲಿಗೊಂಡರು. ಕೊನೆಗೆ ಸೆಕ್ಟರ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ಮಾಡಿದ ಬಳಿಕ ತಾಂತ್ರಿಕ ಸಹಾಯಕರ ಮೂಲಕ ರಿಪೇರಿ ಮಾಡಲಾಯಿತು.