ಸ್ಟ್ರಾಂಗ್‌ ರೂಮ್‌ಗೆ ಬಿಗಿ ಬಂದೋಬಸ್ತ್

| Published : May 09 2024, 01:08 AM IST

ಸಾರಾಂಶ

ಮತಯಂತ್ರಗಳನ್ನು ನಗರದ ರಾವ್ ಬಹದ್ದೂರು ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಇರಿಸಿ, ಕಟ್ಟಡಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಜರುಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಮತಯಂತ್ರಗಳನ್ನು ನಗರದ ರಾವ್ ಬಹದ್ದೂರು ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ (ಆರ್‌ವೈಎಂಸಿ) ಕಟ್ಟಡದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಇರಿಸಿ, ಕಟ್ಟಡಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.

ಆರ್‌ವೈಎಂಸಿ ಕಾಲೇಜು ಕಟ್ಟಡದಲ್ಲಿ ಬುಧವಾರ ಜಿಲ್ಲಾಧಿಕಾರಿ, ಚುನಾವಣಾ ಸಾಮಾನ್ಯ ವೀಕ್ಷಕರು, ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳ ಸ್ಟ್ರಾಂಗ್ ರೂಂ. ಬಾಗಿಲಿಗೆ ಬೀಗ ಹಾಕಿ ಮೊಹರು ಹಾಕಲಾಯಿತು. ಜೊತೆಗೆ ಬಾಗಿಲನ್ನು ದಪ್ಪ ಹಲಗೆಯ ಮೂಲಕ ಸಂಪೂರ್ಣ ಮುಚ್ಚಿ ಸೀಲ್ ಮಾಡಲಾಯಿತು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನಗರದ ಕಾಲೇಜು ಕಟ್ಟಡ ಆವರಣದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೇ 07ರಂದು ಸುಗಮವಾಗಿ ಶಾಂತಿಯುತವಾಗಿ ಜರುಗಿದೆ. ಈ ಬಾರಿ ಶೇ. 73.92ರಷ್ಟು ಮತದಾನವಾಗಿದೆ. ಕ್ಷೇತ್ರ ವ್ಯಾಪ್ತಿಯ ಕಂಪ್ಲಿ, ಬಳ್ಳಾರಿ, ಬಳ್ಳಾರಿ ನಗರ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾದ ಇವಿಎಂ, ವಿವಿ ಪ್ಯಾಟ್ ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿ ಡಿಮಸ್ಟರಿಂಗ್ ಮಾಡಲಾಗಿದೆ.

ಮತಯಂತ್ರಗಳನ್ನು ಇರಿಸಲು ಕಾಲೇಜು ಕಟ್ಟಡದಲ್ಲಿ ವಿಶೇಷ ವ್ಯವಸ್ಥೆ ಮಾಡಿ ನೆಲಮಹಡಿ, ಮೊದಲನೆ ಮಹಡಿ ಹಾಗೂ ಮೂರನೆ ಮಹಡಿಗಳಲ್ಲಿ ಸ್ಟ್ರಾಂಗ್ ರೂಂ ಗಳನ್ನು ನಿರ್ಮಿಸಿ, ಒಪ್ಪವಾಗಿ ಜೋಡಿಸಿಡಲಾಗಿದೆ. ಸ್ಟ್ರಾಂಗ್ ರೂಂ ಗಳನ್ನು ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಅಲ್ಲದೆ ಅಭ್ಯರ್ಥಿಗಳು ಹಾಗೂ ಅವರ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಗಳನ್ನು ಸೀಲಿಂಗ್ ಮಾಡಲಾಗಿದೆ. ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲು ಒಟ್ಟು 20 ಸ್ಟ್ರಾಂಗ್ ರೂಂಗಳು, ಪೋಸ್ಟಲ್ ಬ್ಯಾಲೆಟ್‍ಗಳನ್ನು ಇರಿಸಲು 2 ಸ್ಟ್ರಾಂಗ್ ರೂಂಗಳನ್ನು ಮಾಡಲಾಗಿದೆ ಎಂದರು.

ಜೂ. 4ರಂದು ಮತಗಳ ಏಣಿಕಾ ಕೇಂದ್ರ ಇದೇ ಕಾಲೇಜು ಕಟ್ಟಡದಲ್ಲಿ ಜರುಗಲಿದ್ದು, ಇದಕ್ಕಾಗಿ 8 ಮತ ಏಣಿಕಾ ಕೊಠಡಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಏಣಿಕಾ ಕೊಠಡಿಯಲ್ಲಿ 14 ಟೇಬಲ್‍ಗಳನ್ನು ಹಾಕಲಾಗುತ್ತಿದ್ದು, ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳು ನಿರ್ಧಾರವಾಗಲಿವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ. ಮತ ಏಣಿಕಾ ಕೇಂದ್ರ ಕಟ್ಟಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿರ್‌ಪಿಎಎಫ್, ಕೆಎಸ್‍ಆರ್‌ಪಿ, ಸಿವಿಲ್ ಪೊಲೀಸ್, ಡಿವೈಎಸ್‍ಪಿ, ಇನ್‌ಸ್ಪೆಕ್ಟರ್ ಹಂತಗಳ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ.ಅಧಿಕಾರಿ, ಸಿಬ್ಬಂದಿಯು ದಿನದ 24 ಗಂಟೆ ಕಟ್ಟಡಕ್ಕೆ ಬಿಗಿ ಭದ್ರತೆ ನೀಡಲಿದ್ದು, ಶಿಫ್ಟ್ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಚುನಾವಣಾ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನವೀನ್ ಕುಮಾರ್ ಹಾಗೂ ರವಿಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮುಗಿದ ಚುನಾವಣೆ ಸಮರ; ಫಲಿತಾಂಶದ್ದೇ ಕಾತರ...!

ಲೋಕಸಭಾ ಚುನಾವಣೆಯ ಸಮರ ಮುಗಿದಿದ್ದು, ಫಲಿತಾಂಶದ ಕಾತರ ಶುರುವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಹೆಚ್ಚಳಗೊಂಡಿರುವ ಮತದಾನದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬ ಲೆಕ್ಕಾಚಾರ ನಡೆದಿದೆ. ತೀವ್ರ ಜಿದ್ದಾಜಿದ್ದಿ ಕಣವಾಗಿದ್ದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾರ ಕಡೆಗಿತ್ತು? ಮೋದಿ ಅಲೆಯೋ, ಗ್ಯಾರಂಟಿಯ ಬಲವೋ ಎಂಬುದೇ ಸದ್ಯದ ಕುತೂಹಲ.

ನಿರೀಕ್ಷೆಗೂ ಮೀರಿ ಮತದಾನವಾಗಿರುವುದರಿಂದ ನಮ್ಮ ಗೆಲುವು ಖಚಿತ ಎಂದು ಬಿಜೆಪಿ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರೆ, ಎಲ್ಲ ಮತಗಟ್ಟೆಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಗ್ಯಾರಂಟಿ ನಮ್ಮ ಅಭ್ಯರ್ಥಿ ಕೈ ಹಿಡಿಯಲಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನ ಕಾರ್ಯಕರ್ತರು ಅಪಾರ ವಿಶ್ವಾಸದಲ್ಲಿದ್ದಾರೆ.

ಸುಸೂತ್ತ ಮತದಾನ

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಿದೆ. ಎಲ್ಲೆಡೆ ಶಾಂತಿಯುತ ಮತದಾನಾಗಿದೆ. ಚುನಾವಣೆ ಸುಸೂತ್ರವಾಗಿ ಜರುಗಲು ಶ್ರಮಿಸಿದ ಎಲ್ಲ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸುವೆ.

ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬಳ್ಳಾರಿ.