ಕಾನೂನು ಉಲ್ಲಂಘಿಸಿದ ಸಿದ್ದೇಶ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿ: ಕೆಪಿಸಿಸಿ

| Published : May 09 2024, 01:08 AM IST

ಕಾನೂನು ಉಲ್ಲಂಘಿಸಿದ ಸಿದ್ದೇಶ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿ: ಕೆಪಿಸಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತ ಚಲಾಯಿಸುವ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ಇವಿಎಂ ಬಳಿಯಿದ್ದಿದ್ದು ಕಾನೂನು ಉಲ್ಲಂಘನೆಯಾಗಿದೆ. ತಕ್ಷಣವೇ ಸಿದ್ದೇಶ್ವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದ್ದಾರೆ.

- ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತ ಚಲಾವಣೆ ವೇಳೆ ಸನಿಹವಿದ್ದ ಸಂಸದ: ಟೀಕೆ

- ಕಾಂಗ್ರೆಸ್ಸಿಗೆ ಮತ ನೀಡಬಹುದೆಂದು ಸಂಸದರಲ್ಲಿ ಅನುಮಾನ: ಡಿ.ಬಸವರಾಜ ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತ ಚಲಾಯಿಸುವ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ಇವಿಎಂ ಬಳಿಯಿದ್ದಿದ್ದು ಕಾನೂನು ಉಲ್ಲಂಘನೆಯಾಗಿದೆ. ತಕ್ಷಣವೇ ಸಿದ್ದೇಶ್ವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಇವಿಎಂ ಬಳಿ ಮತ ಚಲಾಯಿಸುವ ವೇಳೆ ಪತಿ, ಸಂಸದ ಜಿ.ಎಂ.ಸಿದ್ದೇಶ್ವರ ಅಲ್ಲಿಗೆ ಧಾವಿಸಿದ್ದರು. ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತೆ ರೇಣುಕಾ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶಕುಮಾರ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ಕೇವಲ ದೂರು ಮಾತ್ರ ನೀಡಿದ್ದು, ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಮೊದಲು ಎಫ್ಐಆರ್ ದಾಖಲಿಸಲಿ ಎಂದು ಅವರು ಆಗ್ರಹಿಸಿದರು.

ಸಂಸದರು ತಮ್ಮ ಪತ್ನಿಯ ಮತದಾನದಲ್ಲಿ ಭಾಗಿಯಾಗಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಕಾಂಗ್ರೆಸ್ ಗ್ಯಾರಂಟಿಗಳಿಂದ ಪ್ರಭಾವಿತರಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕಾಂಗ್ರೆಸ್ಸಿಗೆ ಮತ ನೀಡಬಹುದೆಂದು ಸಂಸದ ಸಿದ್ದೇಶ್ವರ ಅನುಮಾನಿಸಿ, ಮತದಾನ ಮಾಡುವಾಗ ನೋಡಿರಬಹುದು. ಅಡಕೆ ಮಾರಾಟ ಮಾಡಿಕೊಂಡಿದ್ದವರಿಗೆ ಅನಾಯಾಸವಾಗಿ ರಾಜಕೀಯ ಅಧಿಕಾರ ಸಿಕ್ಕರೆ ಹೀಗೆಯೇ ಆಗುವುದು ಎಂದು ಟೀಕಿಸಿದರು.

ನಾಲ್ಕು ಸಲ ಸಂಸದರಾದರೂ ಸಿದ್ದೇಶ್ವರ ಕೊಡುಗೆ ಶೂನ್ಯ. ಅಸಮರ್ಥರೆಂಬ ಕಾರಣಕ್ಕೆ ಸಿದ್ದೇಶ್ವರ ಅವರಿಂದ ನರೇಂದ್ರ ಮೋದಿ ಸಚಿವ ಸ್ಥಾನವನ್ನು ಕಿತ್ತುಕೊಂಡಿದ್ದರು. 2004ರಲ್ಲಿ ತಮ್ಮ ತಂದೆ ಸಾವಿನ ಅನುಕಂಪ, 2009ರಲ್ಲಿ ಅಲ್ಪ ಮತದಲ್ಲಿ, 2014 ಮತ್ತು 2019ರಲ್ಲಿ ನರೇಂದ್ರ ಮೋದಿ ಹೆಸರು, ಭಜನೆ ಮಾಡುತ್ತಲೇ ಅಡಕೆ ದುಡ್ಡಿನಿಂದ ಸಿದ್ದೇಶ್ವರ ಗೆದ್ದರು. ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಎಸ್.ಎ. ರವೀಂದ್ರನಾಥ ಅವರನ್ನು ಮೂಲೆಗುಂಪು ಮಾಡಿದ್ದೇ ಸಿದ್ದೇಶ್ವರ ಸಾಧನೆ ಎಂದು ಆರೋಪಿಸಿದರು.

ಬಿಜೆಪಿ ಸಂಸದರ ವರ್ತನೆಗೆ ಸ್ವಪಕ್ಷೀಯರೇ ಬೇಸತ್ತಿದ್ದು, ತಮಗೆ ಟಿಕೆಟ್ ಸಿಗದಿದ್ದರೂ ಸ್ಥಳೀಯ ಬಿಜೆಪಿ ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರ ವಿರೋಧದ ಮಧ್ಯೆಯೂ ಸಿದ್ದೇಶ್ವರ ತಮ್ಮ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಂಡರು. ಈಗ ಮತದಾನದ ವೇಳೆ ಪತ್ನಿ ಮತ ಹಾಕುವುದು ತಡವಾಗಿದ್ದರಿಂದ ತಾವೇ ನೇರವಾಗಿ ಹೋಗಿ ಪತ್ನಿ ಮತದಾನ ಮಾಡಿದ್ದಾರೋ, ಇಲ್ಲವೋ ಎಂಬುದನ್ನು ನೋಡಿದ್ದೇ ಕಾನೂನುಬಾಹಿರ ಎಂದು ಡಿ.ಬಸವರಾಜ ದೂರಿದರು.

ಪಕ್ಷದ ಮುಖಂಡರಾದ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ, ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ.ಮಂಜುನಾಥ, ಎಂ.ಕೆ.ಲಿಯಾಖತ್ ಅಲಿ, ಬಿ.ಎಚ್.ಉದಯಕುಮಾರ, ಜಿ.ಶಿವಕುಮಾರ, ಬಿ.ಎಸ್.ಸುರೇಶ ಇತರರು ಇದ್ದರು.

- - - ಕೋಟ್‌ ದಾವಣಗೆರೆ ಕ್ಷೇತ್ರದಲ್ಲಿ ಶಾಂತಿಯುತ, ಸುವ್ಯವಸ್ಥಿತವಾಗಿ ಮತದಾನವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ನೀಡಿದ ಸಮಸ್ತ ಮತದಾರರಿಗೆ ಹೃತ್ಫೂರ್ವಕ ಧನ್ಯವಾದ ಅರ್ಪಿಸುತ್ತೇವೆ

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

- - - -8ಕೆಡಿವಿಜಿ1, 2:

ದಾವಣಗೆರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.