ದೇವರಾಜೇಗೌಡ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ: ಶ್ರೇಯಸ್ ಎಂ.ಪಟೇಲ್

| Published : May 08 2024, 01:03 AM IST

ದೇವರಾಜೇಗೌಡ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ: ಶ್ರೇಯಸ್ ಎಂ.ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಕಾಂಗ್ರೆಸ್‌ನ ನಾಯಕರು ಹಾಗೂ ತಮ್ಮ ಮೇಲೆ ಸುಳ್ಳಿನ ಸುರಿಮಳೆಯನ್ನು ಮಾಡಿದ್ದಾರೆ, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಆರೊಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಹೇಳಿದರು. ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ । ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ । ಪೆನ್‌ಡ್ರೈವ್‌ ಸಿಕ್ಕಿದ್ದರೆ ನಾಶ ಮಾಡುತ್ತಿದ್ದೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಕಾಂಗ್ರೆಸ್‌ನ ನಾಯಕರು ಹಾಗೂ ತಮ್ಮ ಮೇಲೆ ಸುಳ್ಳಿನ ಸುರಿಮಳೆಯನ್ನು ಮಾಡಿದ್ದಾರೆ, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ತಮ್ಮ ಪಾತ್ರ ಇದೆ ಎಂದು ಸಾಬೀತು ಮಾಡಿದರೆ ಜೂ.೪ರ ಫಲಿತಾಂಶದಲ್ಲಿ ಗೆದ್ದರೆ ಅಂದೇ ರಾಜಿನಾಮೆ ನೀಡಿ, ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಸವಾಲು ಹಾಕಿದರು.

ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ತಮ್ಮ ನಿವಾಸದಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಪೆನ್‌ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ ಎಸ್‌ಐಟಿ ಅವರಿಂದ ತನಿಖೆ ಮಾಡಿಸುತ್ತಿರುವಾಗಲೇ, ವಕೀಲ ದೇವರಾಜೇಗೌಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೆಸರನ್ನು ಹೇಳಿ ತಾವು ತಪ್ಪಿಸಿಕೊಳ್ಳಲು ಸತ್ಯದ ತಲೆ ಮೇಲೆ ಹೊಡೆದಂತೆ ಹುಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.

ಪೆನ್‌ಡ್ರೈವ್‌ ಅನ್ನು ಮುಖಂಡರಿಗೆ ತಲುಪಿಸಿದ್ದೀರಿ, ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಹಣಿಯಲು ಅದನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ‘ಪೆನ್‌ಡ್ರೈವ್ ವಿಚಾರ ನನಗೆ ತಿಳಿದೇ ಇರಲಿಲ್ಲಾ, ನಮ್ಮ ಕ್ಷೇತ್ರದ ಮತದಾನದ ಮುನ್ನಾ ದಿನ ಟಿವಿಯಲ್ಲಿ ಬಂದಾಗಲೇ ನನಗೂ ಗೊತ್ತಾಗಿದ್ದು. ದೇವರಾಜೇಗೌಡ ಹೇಳುವಂತೆ ನಾನು ಹಾಸನದ ಹೋಟೆಲ್‌ನಲ್ಲಿ ಯಾರನ್ನೂ ಭೇಟಿ ಮಾಡಿಲ್ಲ, ಹಾಗೇನಾದರೂ ಇದ್ದರೆ ದಾಖಲೆ ತಂದು ಪ್ರದರ್ಶಿಸಲಿ’ ಎಂದು ಸವಾಲು ಹಾಕಿದರು.

‘ವಕೀಲ ದೇವರಾಜೇಗೌಡ ಈ ಹಿಂದೆ ಜೆಡಿಎಸ್ ಮೇಲೆ, ನಂತರ ಬಿಜೆಪಿ ಮೇಲೆ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ, ಇದರ ಹಿಂದಿನ ಉದ್ದೇಶ ಏನೆಂದು ಯೋಚನೆ ಮಾಡಿದಲ್ಲಿ ನಿಮಗೂ ಅರ್ಥವಾಗುತ್ತದೆ. ಅವರು ಬಿಡುಗಡೆ ಮಾಡಿರುವ ಆಡಿಯೋ ಕೂಡ ನಕಲಿ, ಅವರೇ ಹೇಳಿರುವಂತೆ ದಾಖಲೆಗಳನ್ನು ಸಿಬಿಐಗೆ ನೀಡಲಿ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಲಿ’ ಎಂದು ಕುಹಕವಾಡಿದರು.

‘ವಕೀಲ ದೇವರಾಜೇಗೌಡರೇ ನನ್ನ ಬಳಿ ಪೆನ್‌ಡ್ರೈವ್ ಇದೆ, ಹಾಸನದ ಎನ್‌ಆರ್ ವೃತ್ತದಲ್ಲಿ ಎಲ್‌ಇಡಿ ಪರದೆ ಹಾಕಿ ಪ್ರದರ್ಶನ ಮಾಡುತ್ತೇನೆ ಎನ್ನುತ್ತಿದ್ದರು. ಈ ಬಗ್ಗೆ ಬಿಜೆಪಿ ಮುಖಂಡರಿಗೆ ವಿವರಿಸಿದ್ದೆ, ಆದರೂ ನನ್ನ ದೂರು ಪರಿಗಣಿಸದೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು, ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಿದರು ಎನ್ನುತ್ತಿದ್ದರು, ಈಗ ಈ ರೀತಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಅರೋಪಿಸಿದರು.

‘ತಾಲೂಕು ಕಚೇರಿಯಲ್ಲಿ ಜಮೀನು ದಾಖಲೆಯನ್ನು ಕೊಡಲು ವಿಳಂಬ ಮಾಡುತ್ತಿದ್ದಾರೆ, ಬೇಗ ಕೊಡಿಸಿ, ಎಂದು ಕೇಳಿಕೊಂಡು ಹಿಂದೊಮ್ಮೆ ಕಾರ್ತಿಕ್ ನನ್ನ ಭೇಟಿ ಮಾಡಿದ್ದರು, ಅದನ್ನು ಬಿಟ್ಟರೆ ಮತ್ತೆ ಅವರು ನನ್ನ ಬಳಿ ಬಂದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತತ್ವ ಸಿದ್ದಾಂತ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಅಮ್ಮ, ಅಕ್ಕನ ಜೊತೆ ಬೆಳೆದಿರುವ ನಾನು, ಹೆಣ್ಣುಮಕ್ಕಳ ಹಿತದೃಷ್ಠಿಯಿಂದ ಪೆನ್‌ಡ್ರೈವ್ ಯಾರಿಗೂ ಸಿಗದಂತೆ ನಾಶ ಮಾಡುತ್ತಿದ್ದೆ. ಹಾಸನ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ, ಈ ಬಾರಿ ನಾನು ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸದಿಂದ ನುಡಿದರು.

ಹೊಳೆನರಸೀಪುರ ತಮ್ಮ ನಿವಾಸದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಮಾತನಾಡಿದರು.