3 ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ನಿಶ್ಚಿತ: ಬಿ.ವೈ.ವಿಜಯೇಂದ್ರ

| Published : May 08 2024, 01:03 AM IST

3 ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ನಿಶ್ಚಿತ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಷ್ಟು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ದಾಖಲೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸದಿಂದ ನುಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕನಿಷ್ಠ 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶಿಕಾರಿಪುರದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ನಮ್ಮ ಅಭ್ಯರ್ಥಿ ಪರ ಶ್ರಮ ಹಾಕಿದ್ದಾರೆ. ಅದಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ಎಂಬ ವಿಶ್ವಾಸವಿದೆ ಮತದಾರರು ನಮ್ಮ ಅಭ್ಯರ್ಥಿ ಪರವಾಗಿ ಸ್ಪಂದನೆ ಮಾಡುತ್ತಿದ್ದಾರೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿ ಅಷ್ಟು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ದಾಖಲೆಯಲ್ಲಿ ನಿರ್ಮಾಣ ಮಾಡುತ್ತೇವೆ. ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರಕ್ಕೆ ಹೋದರು ಬಿಜೆಪಿ ಹಾಗೂ ಮೋದಿ ಪರವಾದ ಹಳೆ ಕಂಡು ಬರುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಕೂಡ ರಾಜ್ಯದ ಹಲೆವೆಡೆ ಪ್ರವಾಸ ನಡೆಸಿದ್ದೇನೆ. ಫಲಿತಾಂಶ ಬಿಜೆಪಿ ಹಾಗೂ ಮೋದಿ ಪರವಾಗಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿ ಆಗ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಅಚ್ಚರಿ ಕಾಯ್ದಿದೆ. ಮತದಾರರು ನಮಗೆ ಆಶೀರ್ವಾದ ಮಾಡುತ್ತಾರೆ. ಇದು ಸತ್ಯ. ಈ ಚುನಾವಣೆಯಲ್ಲಿ ಜಾತಿ, ಉಪಜಾತಿ ಯಾವುದು ಇಲ್ಲ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದೇ ಎಲ್ಲರ ಒತ್ತಾಸೆಯಾಗಿದೆ. ಯಾರು ಏನೇ ಜಾತಿ ಸಮೀಕರಣ ಮಾಡಲಿ, ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಂದಿಡಲಿ, ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕಾರ್ಯಕ್ರಮ ಹಾಗೂ ಯೋಜನೆ ಗಳು ನೇರವಾಗಿ ಜನರನ್ನು ತಲುಪಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ ಬಿಜೆಪಿ ಪರವಾದ ವಾತಾವರಣವನ್ನು ಈ ಬಾರಿ ಚುನಾವಣೆಯಲ್ಲಿ ಸೃಷ್ಟಿಸಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಭ್ರಮಾಲೋಕದಲ್ಲಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿ ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೂ ಪರಿಣಾಮ ಬೀರಲಿದೆ. ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಮುಂದೆ ಆಘಾತ ಕಾದಿದೆ ಎಂದು ಭವಿಷ್ಯ ನುಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಈ ಬಾರಿ ಕೂಡ ಮತದಾರರು ರಾಘವೇಂದ್ರ ಅವರನ್ನು ಕೈ ಹಿಡಿಯಲಿದ್ದಾರೆ. ಕೇಂದ್ರದಲ್ಲಿ ಮೋದಿ ಆಡಳಿತವನ್ನು ಮತ್ತೊಮ್ಮೆ ನೋಡಬೇಕೆಂಬ ಆಸೆ ಹೊಂದಿರುವ ಮತದಾರರು ರಾಘವೇಂದ್ರ ಅವರನ್ನು ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲುವು ತಂದು ಕೊಡಲಿದ್ದಾರೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಪ್ರಶ್ನೆಯೇ ಇಲ್ಲ. ಮತದಾರರೇನು ದಡ್ಡರಲ್ಲ. ಯೋಚಿಸಿ ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು.ಮೋದಿಯ ಅಲೆ, ಕಾರ್ಯಕರ್ತರ ಶ್ರಮದಿಂದ ಗೆಲುವು : ಬಿವೈಆರ್‌ಕನ್ನಡಪ್ರಭ ವಾರ್ತೆ ಶಿವಮೊಗ್ಗಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಶಿಕಾರಿಪುರದಲ್ಲಿ ಮತ ಚಲಾವಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಆ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಲು ಮೋದಿ ಸರ್ಕಾರಕ್ಕೆ ಒಂದು ಅವಧಿ ಬೇಕಾಯಿತು. ಎರಡನೇ ಅವಧಿಯಲ್ಲಿ ದೇಶದ ಅಭಿವೃದ್ಧಿ ಸಾಕಷ್ಟು ನಡೆದಿದೆ. ಕೋವಿಡ್ ಸಂಕಷ್ಟ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿದ್ದು ನಮ್ಮೆಲ್ಲರಿಗೂ ಗೊತ್ತಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಜೊತೆಗೆ ನಮ್ಮ ಕಾರ್ಯಕರ್ತರ ಶ್ರಮ ಕೂಡ ಗೆಲುವಿಗೆ ಕಾರಣವಾಗಲಿದೆ ಎಂದರು.ಕಳೆದ ಎರಡು ಮೂರು ತಿಂಗಳುಗಳಿಂದ ನಮ್ಮ ಕಾರ್ಯಕರ್ತರ ಪಡೆ ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಈ ರೀತಿ ಕಾರ್ಯಕರ್ತರನ್ನು ಬೇರೆ ಯಾವ ಪಕ್ಷದಲ್ಲೂ ನೋಡಲು ಸಾಧ್ಯವಿಲ್ಲ. ಅವರ ಹಾರೈಕೆಯಿಂದ ಈ ಬಾರಿ ತುಂಬಾ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳಿಗೆ ಜನರು ಬೇಸತ್ತಿ ಹೋಗಿದ್ದಾರೆ. ಕಾಂಗ್ರೆಸ್ ನುಡಿದಂತೆ ನಂತರ ನಡೆಯಲಿಲ್ಲ ಎಂಬ ಬೇಸರ ಜನರಲ್ಲಿದೆ. ನಮ್ಮ ಜೇಬಿನಿಂದ ದುಡ್ಡನ್ನು ಕಿತ್ತುಕೊಂಡು ನಮಗೆ ನೀಡುತ್ತಿದ್ದಾರೆ ಎಂದು ಜನರು ಅಕ್ರೋಶಗೊಂಡಿದ್ದಾರೆ. ಈ ಆಕ್ರೋಶವೇ ಬಿಜೆಪಿಗೆ ವರದಾನ ವಾಗಲಿದೆ. ರಾಜ್ಯ ಸರ್ಕಾರದ ಆಡಳಿತ ಕಂಡು ಭ್ರಮನಿರಸನಗೊಂಡಿರುವ ಮತದಾರರು ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಚುನಾವಣೆಗೆ 16 ರಿಂದ 17 ಜನ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದಾರೆ. ಕ್ಷೇತ್ರದ ಮತದಾರರು ಬುದ್ಧಿವಂತರಿದ್ದು ಯೋಚಿಸಿ ತಮ್ಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಬಾರದು ಎಂದು ಅರಿತು ಮತ ಚಲಾವಣೆ ಮಾಡಲಿದ್ದಾರೆ. ಬಂಡಾಯದಿಂದ ನಮಗೇನು ಅಂತಹ ನಷ್ಟ ಉಂಟಾಗಲಾರದು ಎಂದರು.