ಬಿಸಿಲೂರ ಮತೋತ್ಸಾಹದ ಮುಂದೆ ಉರಿ ಬಿಸಿಲೇ ಮಂಕಾಯ್ತು!

| Published : May 08 2024, 01:03 AM IST

ಸಾರಾಂಶ

ತಂಡೋಪತಂಡದಲ್ಲಿ ಬಂದು ಮತದಾನದಲ್ಲಿ ಪಾಲ್ಗೊಂಡಿದ್ದ ಉತ್ಸಾಹಿ ಮತದಾರರು ಜಿಲ್ಲಾದ್ಯಂತ 46.1ರಷ್ಟು ಪ್ರಖರತೆಯಲ್ಲಿ ಉರಿ ಬಿಸಿಲಿದ್ದರೂ ಕೂಡಾ ಅದನ್ನು ಲೆಕ್ಕಿಸದೆ ಮತದಾನ ಮಾಡುತ್ತ ಬಿಸಿಲನ್ನೇ ಸೋಲಿಸಿದರು.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಸಿಲೂರು ಕಲಬುರಗಿಯಲ್ಲಿಂದು ಲೋಕಸಭೆಗೆ ನಡೆದ 2ನೇ ಹಂತದ ಮತದಾನದ ಪ್ರಕ್ರಿಯೆಯಲ್ಲಿ ಮತದಾರರ ಸಮೂಹದಿಂದ ಪುಟಿದು ಬಂದ ಮತೋತ್ಸಾಹದ ಮುಂದೆ ಉರಿ ಬಿಸಿಲೇ ಮಂಕಾಯ್ತು!

ತಂಡೋಪತಂಡದಲ್ಲಿ ಬಂದು ಮತದಾನದಲ್ಲಿ ಪಾಲ್ಗೊಂಡಿದ್ದ ಉತ್ಸಾಹಿ ಮತದಾರರು ಜಿಲ್ಲಾದ್ಯಂತ 46.1ರಷ್ಟು ಪ್ರಖರತೆಯಲ್ಲಿ ಉರಿ ಬಿಸಿಲಿದ್ದರೂ ಕೂಡಾ ಅದನ್ನು ಲೆಕ್ಕಿಸದೆ ಮತದಾನ ಮಾಡುತ್ತ ಬಿಸಿಲನ್ನೇ ಸೋಲಿಸಿದರು. ಮತದಾನದ ದಿನವಾದ ಮಂಗಳವಾರ ಜಿಲ್ಲಾದ್ಯಂತ ಸರಾಸರಿ 46.1 ಡಿಗ್ರಿ ಸೆಲ್ಸಿಯಸ್‌ ಪ್ರಖರ ಬಿಸಿಲು ದಾಖಲಾದರೂ ಸಹ ಇದು ಮತದಾನದ ಮೇಲೆ ಯಾವುದೇ ರೀತಿ ಪರಿಣಾಮ ಬೀರಲಿಲ್ಲ. ಮತದಾರರು ಬೆಳಗಿನ 7 ಗಂಟೆಯಿಂದಲೇ ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತ ಗಂಟೆಗಟ್ಟಲೇ ತಮ್ಮ ಸರತಿಗಾಗಿ ಕಾಯತ್ತಿರುವ ನೋಟಗಳು ಜಿಲ್ಲಾದ್ಯಂತ ಕಂಡು ಬಂದವು. ಬಿಸಿಲು ಲೆಕ್ಕಿಸದೆ ವಿಶೇಷ ಚೇತನರು, ಹಿರಿಯ ನಾಗರಿಕರು ಕೂಡಾ ಹಲವರ ನೆರವಿನಿಂದ ಮತ ಚಲಾಯಿಸಲು ಮತಗಟ್ಟೆಗೆ ಬಂದರು. ಅದರಲ್ಲೂ ಯುವ ಮತದಾರರ ಲವಲವಿಕೆಯಂತೂ ಮುಗಿಲು ಮುಟ್ಟಿತ್ತು.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದು, ಇದರಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಹಾಗೂ ಅಗತ್ಯ ಸೇವಾ ವಲಯದಡಿ ಬರುವ 952 ಜನ ಮತದಾರರು ಈಗಾಗಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿರುತ್ತಾರೆ.

ಹಿರಿಯ ನಾಗರಿಕರು, ವಯೋವೃದ್ಧರು ಮತಗಟ್ಟೆಗೆ ಬರುತ್ತಿದ್ದಂತೆಯೇ ಸ್ವಯಂ ಸೇವಕರು ಸಹಾಯ ಮಾಡುತ್ತಿದ್ದ ನೋಟಗಳೂ ಕಂಡವು. ಈ ಬಾರಿ ಚನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ನೀರು ನೆರಳಿನ ಸವಲತ್ತು ಮಾಡಿರೋದು ಮತದಾರರ ಮೆಚ್ಚುಗೆಗೆ ಪಾತ್ರವಾಗಿತ್ತು.

ಯುವ ಮತದಾರರು, ಮಹಿಳಾ ಮತದಾರರು, ವಿಶೇಷ ಚೇತನರು, ಹಿರಿಯ ನಾಗರಿಕರು ಬಿಸಿಲಿಗೆ ಹೆದರದೆ ಹುರುಪಿನಿಂದ ಮತದಾನ ಮಾಡಿದರು. ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು ಸಂತಸದಲ್ಲಿದ್ದರು.

ಉರಿ ಬಿಸಿಲಿನಿಂದ ಮತದಾರರು ಬಾಯಾರಿದರೆ ಪಕ್ಕದಲ್ಲೇ ಅವರಿಗಾಗಿ ಕುಡಿಯುವ ನೀರು, ನೆರಳಿನ ಶಾಮಿಯಾನ ವ್ಯವಸ್ಥೆ, ಅಗತ್ಯ ಔಷಧೋಪಚಾರ ವ್ಯವಸ್ಥೆಗೆ ವೈದ್ಯಕೀಯ ತಂಡ ನಿಯೋಜನೆ ಮಾಡಲಾಗಿತ್ತು. ರ್ಯಾಂಪ್, ವ್ಹೀಲ್ ಚೇರ್ ವ್ಯವಸ್ಥೆ ಮಾಡಿದ್ದರಿಂದ ಹಿರಿಯ ನಾಗರಿಕರು, ವಿಶೇಷಚೇತನರ ತಾಪತ್ರಯ ತಗ್ಗಿತ್ತು.

ಮತಗಟ್ಟೆಗಳಲ್ಲಿ ಹೆಣ್ಮಕ್ಕಲೇ ಹೆಚ್ಚು: ಜಿಲ್ಲಾದ್ಯಂತ ಶೇ.60ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಹೆಮ್ಮಕ್ಕಳೇ ತುಂಬ ಉತ್ಸಾಹದಿಂದ ಬಂದು ಮತದಾನ ಮಾಡಿದ ನೋಟಗಳು ಕಂಡವು. ಹಿಳೆಯರಿಗಾಗಿಯೇ ಮಾಡಲಾಗಿದ್ದ ಸಖಿ ಮತಗಟ್ಟೆಯಲ್ಲಿ ಸಹಜವಾಗಿಯೇ ಮಹಿಳೆಯರು ಅಧಿಕವಾಗಿದ್ದರು. ಜೇವರ್ಗಿ ಪಟ್ಟಣದ ಸಖಿ ಪಿಂಕ್ ಬೂತ್ ಸ.ಕ.ಹಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 89ರಲ್ಲಿ ಬೆಳಗ್ಗೆಯಿಂದ ಮಹಿಳಾ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೂ ಮಹಿಳಾ ಮತದಾರರು ಸಂಖ್ಯೆ ಇಳಿಮುಖವಾಗಲಿಲ್ಲ. ಮಹಿಳೆಯರು ಮತ್ತು ಪರುಷರಿಂದ ಮತಗಟ್ಟೆ ತುಂಬಿ ಹೋಗಿತ್ತು.

ಇದೇ ಆವರಣದ ಮತಗಟ್ಟೆ ಸಂಖ್ಯೆ 90ರಲ್ಲಿ ಶಿವರಾಜ ಮತ್ತು ಪವಿತ್ರಾ ದಂಪತಿ ತಮ್ಮ ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದ ನಂತರ ಪಿಂಕ್ ಸೆಲ್ಪಿ ಬೂತ್ ನಲ್ಲಿ ಪೋಸ್ ನೀಡಿದರು.

ಯುವ ಮತದಾರರಿಂದ ಮತದಾನ,ಅಭಿನಂದನಾ ಪತ್ರ ವಿತರಣೆ: ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಸ್ಥಳೀಯ ನಿವಾಸಿ ಬಿ.ಎ. ವ್ಯಾಸಂಗ ಮಾಡುತ್ತಿರುವ ರಾಧಿಕಾ ಅವರು ಪ್ರಥಮ ಬಾರಿಗೆ ಮತ ಚಲಾಯಿಸಿ ಸಂತಸ ಹಂಚಿಕೊಂಡರು. ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಟನೂರ ‘ಡಿ’ ಮತಗಟ್ಟೆ ಸಂಖ್ಯೆ 217ರಲ್ಲಿ ಯುವತಿಯರು ಮೊದಲ ಬಾರಿಗೆ ಮತ ಚಲಾಯಿಸಿದ ನಂತರ ಮತದಾರರ ಗುರುತಿನ ಚಿಟ್ಟಿಯೊಂದಿಗೆ ನಗೆ ಬೀರಿದರು.

ಅಫಜಲ್ಪುರ ಕ್ಷೇತ್ರದ ಮಾದರಿ ಯುವ ಬೂತ್ ಗುಡೂರ ಹೆಚ್ಪಿಎಸ್ ಶಾಲೆ ಮತಗಟ್ಟೆ ಸಂಖ್ಯೆ 8ರಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವ ಮತದಾರರಿಗೆ ಗ್ರಾಮ ಪಂಚಾಯತಿಯಿಂದ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.

ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಇತ್ತೀಚೆಗೆ ಪಾರ್ಶ್ವವಾಯುಗೆ ಒಳಗಾದ ಪುರಸಭೆ ಸದಸ್ಯ ಪರಶುರಾಮ ದೊಡ್ಡಮನಿ ಆಟೋ ಸಹಾಯದಿಂದ ಮತಗಟ್ಟೆಗೆ ಬಂದು ತಮ್ಮ ಪತ್ನಿ, ತಾಯಿಯೊಂದಿಗೆ ಮತ ಚಲಾಯಿಸಿದರು.

ಮಣ್ಣೂರಲ್ಲಿ ಮಹಿಳೆಯರದ್ದೇ ಅಬ್ಬರ: ಮಮ್ಣೂರಿನ 7 ಮತಗಟ್ಟೆಗಳಲ್ಲಿ ಬೆಳಗ್ಗಿಯಿಂದ ಸಂಜೆಯವರೆಗೂ ಮಹಿಳೆಯರದ್ದೇ ಅಬ್ಬರ ಕಂಡಿತ್ತು. ಎಲ್ಲಾ ಬೂತ್‌ಗಳಲ್ಲಿ ಮಹಿಳೆಯರೇ ಸರತಿಯಲ್ಲಿ ಹೆಚ್ಚಿಗೆ ಕಂಡು ಬಂದರು, ಪುರುಷ ಮತದಾರರು ಆಗೊಮ್ಮೆ, ಈಗೊಮ್ಮೆ ನಾಲ್ಕಾರು ಜನ ಬಂದು ಮತ ಹಾಕಿ ಹೋಗುತ್ತಿದ್ದರು. ಆದರೆ ಮಹಿಳೆಯರು ಹೆಚ್ಚಿಗೆ ಮತದಾನ ಮಾಡಲು ಉತ್ಸುಕರಾಗಿದ್ದ ನೋಟಗಳು ಕಂಡವು. ಇಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಮತದಾರರು ಮೋಬೈಲ್‌ ಸಮೇತರಾಗಿ ಮತದಾನಕ್ಕೆ ಹೋಗದಂತೆ ನಿಗಾ ವಹಿಸಿದ್ದರು.

ಕಣದಲ್ಲಿರುವ 14 ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿ ಭದ್ರ: ಕಲಬುರಗಿ ಲೋಕಸಭೆ ಕಣದಲ್ಲಿರುವ 14 ಅಭ್ಯರ್ಥಿಗಳ ಭವಿಷ್ಯ ಮತದಾರರು ಇಂದು ಗುಂಡಿ ಅದುಮಿ ಇವಿಎಂಗಳಲ್ಲಿ ಭದ್ರಪಡಿಸಿದ್ದಾರೆ.

ಅಂತಿಮ ಕಣದಲ್ಲಿರುವ ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಮನಿ, ಬಿಜೆಪಿಯ ಉಮೇಶ ಜಾಧವ್‌ ಸೇರಿದಂತೆ ತಾರಾಬಾಯಿ ಭೋವಿ (ಭಾರತೀಯ ಜನ ಸಾಮ್ರಾಟ್ ಪಾರ್ಟಿ), ಶರಣಬಸಪ್ಪ ಮಲ್ಲಿಕಾಜಪ್ಪ (ಸೋಷಾಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ವಿಜಯಕುಮಾರ ಭೀಮಶಾ (ಪ್ರಹಾರ್ ಜನಶಕ್ತಿ ಪಾರ್ಟಿ), ನಾಗೇಂದ್ರ ಎಚ್ (ಉತ್ತಮ ಪ್ರಜಾಕೀಯ ಪಾರ್ಟಿ), ವಿಜಯ ಗೋವಿಂದ ಜಾಧವ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ರಾಜಕುಮಾರ ಗೋಪಿನಾಥ (ಭಾರತೀಯ ಬಹುಜನ ಕ್ರಾಂತಿ ದಳ), ಹುಚ್ಚಪ್ಪ ಬಸಪ್ಪ (ಬಹುಜನ್ ಸಮಾಜ ಪಾರ್ಟಿ) ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ರಮೇಶ ಭೀಮಸಿಂಗ್, ಆನಂದ ಸಿದ್ದಣ್ಣ, ಶರಣಪ್ಪ ಮರಲಿಂಗಪ್ಪ, ಜ್ಯೋತಿ ರಮೇಶ ಹಾಗೂ ಸುಂದರ ಮೇಘು ಇವರೆಲ್ಲರ ಭವಿಷ್ಯ ಇವಿಎಂ ಸೇರಿದ್ದು ಜೂ. 4 ರ ಮತ ಎಣಿಕೆಯಂದೇ ಅವರ ಅದೃಷ್ಟ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ.