ಶಿಕ್ಷಣ ಇಲಾಖೆಯಲ್ಲಿ ನಾಲಾಯಕ್‌ ಮಂತ್ರಿ ಇದ್ದಾರೆ

| Published : May 09 2024, 12:46 AM IST

ಶಿಕ್ಷಣ ಇಲಾಖೆಯಲ್ಲಿ ನಾಲಾಯಕ್‌ ಮಂತ್ರಿ ಇದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತುಹೋಗಿದೆ. ಶಿಕ್ಷಕರಿಗೆ ಎರಡು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೆ-2 ಸಮಸ್ಯೆ ಎಂದು ಹೇಳುತ್ತಾರೆ.

ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತುಹೋಗಿದೆ. ಶಿಕ್ಷಕರಿಗೆ ಎರಡು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೆ-2 ಸಮಸ್ಯೆ ಎಂದು ಹೇಳುತ್ತಾರೆ. ವಿಧಾನ ಪರಿಷತ್ ಸದಸ್ಯನಾಗಿ ಹತ್ತಾರು ಬಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯನ್ನು ಅವರ ಗಮಕ್ಕೆ ತಂದಿದ್ದೇನೆ. ಆದರೂ ಗಮನಹರಿಸುತ್ತಿಲ್ಲ. ಇದು ಕಿವಿ, ಕಣ್ಣು ಇಲ್ಲದ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.ನಗರದಲ್ಲಿ ಬುಧವಾರ ಮತಯಾಚನೆ ಮಾಡಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ನಾಲಾಯಕ್ ಶಿಕ್ಷಣ ಮಂತ್ರಿ ಇದ್ದಾರೆ. ಮಂತ್ರಿಗೆ ಇಲಾಖೆ ಮೇಲೆ ಹಿಡಿತವಿಲ್ಲ. ಹಾಗಾಗಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಕುಣಿಯಲು ಶುರು ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ, ವೆಬ್ ಕ್ಯಾಸ್ಟಿಂಗ್ ನಿರ್ವಹಿಸಲು ಗೊತ್ತಿರುವ ಅಧಿಕಾರಿಗಳಿಗೆ ಕೆ-2 ಸಮಸ್ಯೆ ಪರಿಹರಿಸಲಾಗದ ಬ್ರಹ್ಮ ವಿದ್ಯೆಯಾಗಿ ಬಿಟ್ಟಿದೆ ಎಂದರು. ಎರಡು ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರು ಪರಿತಪಿಸುತ್ತಿದ್ದಾರೆ. ಯುಗಾದಿಗೂ ಸಂಬಳ ಇಲ್ಲ, ಬಸವ ಜಯಂತಿಗೂ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರಕ್ಕೆ, ಶಿಕ್ಷಣ ಇಲಾಖೆಗೆ ಶಿಕ್ಷಕರು ಶಾಪ ಹಾಕುತ್ತಿದ್ದಾರೆ. ಸರ್ಕಾರ ಈ ಕೂಡಲೇ ಶಿಕ್ಷಕರಿಗೆ ಸಂಬಳ ಬಿಡುಗಡೆ ಮಾಡಬೇಕು. ಇಲ್ಲವಾದರೆ ಇದೊಂದು ಅಯೋಗ್ಯ ಸರ್ಕಾರ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಏಳನೇ ವೇತನ ಜಾರಿಗೆ, ಹಳೆ ಪೆನ್ಷನ್ ಪದ್ದತಿ ಜಾರಿಗೆ ಹೋರಾಟ ಮಾಡುವುದೂ ಸೇರಿದಂತೆ ಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡುತ್ತೇನೆ ಎಂದರು.20 ವರ್ಷಗಳಿಂದ ಶಿಕ್ಷಕರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು, ಶಿಕ್ಷಕರಿಗೆ ದೊರೆಯಬೇಕಾದ ಸವಲತ್ತುಗಳನ್ನು ಸಮಯಾನುಸಾರ ಕೊಡಿಸುವ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ಶಿಕ್ಷಕರು ಸ್ವಾಭಿಮಾನದಿಂದ ತಲೆ ಎತ್ತಿ ಗೌರವದಿಂದ ಬಾಳುವಂತಹ ವ್ಯವಸ್ಥೆ ನಿರ್ಮಾಣ ಮಾಡಿದ ವಿಶ್ವಾಸ ತಮಗಿದೆ. ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೆ, ಜಾತಿ, ಮತ ಬೇಧವಿಲ್ಲದಂತೆ ಕೆಲಸ ಮಾಡಿದ್ದೇನೆ. ಈ ಬಾರಿಯೂ ತಮಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ನಗರದ ವಿಶ್ವ ವಿದ್ಯಾಲಯ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ವಿದ್ಯಾವಾಹಿನಿ, ಕಾಲೇಜು, ಶ್ರೀದೇವಿ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಕ್ಷಯ, ಅಶ್ವಿನಿ ಸಂಸ್ಥೆಗಳ ಶಾಲಾ ಕಾಲೇಜುಗಳಲ್ಲಿ ಶಿಕ್ಷಕ ಮತದಾರರನ್ನು ಭೇಟಿ ಮಾಡಿದ ನಾರಾಯಣಸ್ವಾಮಿ ತಮಗೆ ಮತ ನೀಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡುವಂತೆ ಕೋರಿದರು.ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಆಗ್ನೇಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಮೊದಲಾದವರು ಭಾಗವಹಿಸಿದ್ದರು.