ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆ ಸಿಲಿಂಡರ್‌

| Published : May 09 2024, 12:46 AM IST

ಸಾರಾಂಶ

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್‌ ಬಳಸುವುದು ಕಾನೂನು ಉಲ್ಲಂಘಿಸಿದಂತೆ. ಆದರೂ ಕೆಲವು ಹೋಟೆಲ್‌ಗಳು ಹಾಗೂ ಫುಡ್‌ಕೋರ್ಟ್‌ಗಳಲ್ಲಿ ಗೃಹಬಳಕೆ ಸಿಲಿಂಡರ್‌ ಬಳಸಲಾಗುತ್ತಿದೆ. ವಾಣಿಜ್ಯ ಸಿಲಿಂಡರ್‌ ದರ ಹೆಚ್ಚಾಗಿರುವುದೇಇದಕ್ಕೆ ಕಾರಣ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಾಣಿಜ್ಯನಗರಿ ಚಿಂತಾಮಣಿಯಲ್ಲಿ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹೊಟೇಲ್ ಉದ್ಯಮ ಸೇರಿದಂತೆ ರಸ್ತೆ ಬದಿ ತಿನಿಸು ತಯಾರಿಸಿ ಮಾರುವ ವ್ಯಾಪಾರಿಗಳು ವಾಣಿಜ್ಯ ಸಿಲಿಂಡರ್‌ಗಳನ್ನು ಬಳಸದೆ ನಿಯಮಾವಳಿಗಳನ್ನು ಉಲ್ಲಂಘಿಸಿ ಗೃಹ ಬಳಕೆ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ನಿಯಮಾವಾಳಿ ಪ್ರಕಾರ ವಾಣಿಜ್ಯ ಉದ್ಯಮಗಳಲ್ಲಿ ವಾಣಿಜ್ಯ ಬಳಕೆಗೆಂದಿರುವ ಸಿಲಿಂಡರ್‌ಗಳನ್ನು ಮಾತ್ರ ಬಳಕೆ ಮಾಡಬೇಕು. ನಗರದ ಹಲವು ಹೋಟೆಲ್ ಸೇರಿದಂತೆ ಅಂಗಡಿಗಳಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಕೆ ಮಾಡುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡುಬಂದಿದೆ. ಗೃಹ ಬಳಕೆ ಸಿಂಡರ್‌ ದರ ಕಡಿಮೆ

ಬೆಲೆಯ ಹೊರೆ ತಪ್ಪಿಸಲು ಬಳಕೆ: ೧೯ ಕೆಜಿ ತೂಕದ ಕರ್ಮಷಿಯಲ್ ಸಿಲಿಂಡರ್ ಬೆಲೆ ೧೮೩೭.೫೦ ರೂ ಆದರೆ ಗೃಹ ಬಳಕೆ ಸಿಲಿಂಡರ್ ಬೆಲೆ ೯೦೦ ರಿಂದ ೯೫೦ ರೂ.ಗಳಿಗೆ ಸಿಗುವುದರಿಂದ ಅಧಿಕ ಬೆಲೆತೆತ್ತು ಕಮರ್ಷಿಯಲ್ ಸಿಲಿಂಡರ್ ಖರೀಸುವುದು ಕಷ್ಟವೆಂದು ಹೊಟೇಲ್, ಟೀ ಸ್ಟಾಲ್, ಚಿಕನ್ ಸ್ಟಾಲ್, ಕಬಾಬ್, ಗೋಭಿ, ಪಾನಿಪೂರಿ ಸೆಂಟರ್‌ಗಳು ಸೇರಿದಂತೆ ಹಲವು ಕಡೆ ಕೆಂಪು ಸಿಲಿಂಡರ್‌ಗಳನ್ನೇ ಬಳಕೆ ಮಾಡಲಾಗುತ್ತಿದೆ.

ವಾಣಿಜ್ಯ ಸಿಲೆಂಡರ್ ಬದಲಿಗೆ ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡಿದರೆ ಅಂತಹವರ ವಿರುದ್ಧ ದೂರು ದಾಖಲು ಮಾಡಲಾಗುವುದು. ಎರಡು ತಿಂಗಳ ಹಿಂದಷ್ಟೇ ನಗರದ ಕೆಲವು ಕಡೆ ಸೇರಿದಂತೆ ಮುರಗಮಲ್ಲ ಪ್ರವಾಸಿ ತಾಣದಲ್ಲಿ ಕೆಂಪು ಸಿಲಿಂಡರ್ ಬಳಕೆದಾರರ ವಿರುದ್ದ ದೂರು ದಾಖಲು ಮಾಡಿ ಎಚ್ಚರಿಕೆ ನೀಡಿದ್ದೇವೆಂದು ಅಧಿಕಾರಿಗಳು ಹೇಳುತ್ತಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ.ನಿಯಮ ಉಲ್ಲಂಘಿಸಿದರೆ ಕ್ರಮ

ನಗರ ಭಾಗದಲ್ಲಿ ಯಾವುದೇ ಹೋಟೆಲ್, ಅಂಗಡಿ ಮಳಿಗೆಗಳನ್ನು ತೆರೆಯಬೇಕಾದರೆ ನಗರಸಭೆ ವತಿಯಿಂದ ಪರವಾನಗಿಯನ್ನು ಪಡೆದಾಗ ಇಲಾಖೆ ನೀಡಿರುವ ನಿಯಮಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡುವುದು ಕಡ್ಡಾಯ. ಒಂದು ವೇಳೆ ತಪ್ಪಿದರೆ ಪರವಾನಗಿ ರದ್ದು ಮಾಡುವ ಅಧಿಕಾರ ನಗರಸಭೆ ಅಧಿಕಾರಿಗಳಿಗೆ ಇರುತ್ತದೆಯಾದರೂ ವಾಣಿಜ್ಯ ಕೇಂದ್ರಗಳಲ್ಲಿ ಕೆಂಪು ಸಿಲಿಂಡರ್ ಬಳಕೆ ಮಾಡುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ನಡೆದುಕೊಳ್ಳುತ್ತಿದ್ದಾರೆ.