ಸ್ವಂತ ಖರ್ಚಿನಲ್ಲಿ ಹೂಳೆತ್ತಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾದ ಯುವಕರು

| Published : Apr 19 2024, 01:15 AM IST / Updated: Apr 19 2024, 10:01 AM IST

ಸ್ವಂತ ಖರ್ಚಿನಲ್ಲಿ ಹೂಳೆತ್ತಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾದ ಯುವಕರು
Share this Article
  • FB
  • TW
  • Linkdin
  • Email

ಸಾರಾಂಶ

ಬರದಿಂದ ನೀರಿಲ್ಲದೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುವುದನ್ನು ಕಂಡು ದಿಬ್ಬೂರಿನ ಯುವಕರು, ಗ್ರಾಮದಲ್ಲಿ ಹೂಳು ತುಂಬಿ, ಒಣಗಿ ಹೋಗಿದ್ದ ಗೌಡರ ಕಟ್ಟೆಯ ಹೂಳೆತ್ತಿಸಿ, ನೀರು ತುಂಬಿಸುವ ಮೂಲಕ ಜಲಚರ, ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ.

 ತುಮಕೂರು :  ಬರದಿಂದ ನೀರಿಲ್ಲದೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುವುದನ್ನು ಕಂಡು ದಿಬ್ಬೂರಿನ ಯುವಕರು, ಗ್ರಾಮದಲ್ಲಿ ಹೂಳು ತುಂಬಿ, ಒಣಗಿ ಹೋಗಿದ್ದ ಗೌಡರ ಕಟ್ಟೆಯ ಹೂಳೆತ್ತಿಸಿ, ನೀರು ತುಂಬಿಸುವ ಮೂಲಕ ಜಲಚರ, ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ.

ತುಮಕೂರು ನಗರದ 6ನೇ ವಾರ್ಡಿಗೆ ಸೇರಿದ ದಿಬ್ಬೂರು ಗ್ರಾಮದ ಯುವಕರಾದ ಡಿ.ಕೆ.ಇಂದ್ರಕುಮಾರ್ ಹಾಗೂ ಸಮಾನ ಮನಸ್ಕರು ಸೇರಿ, ಗ್ರಾಮದಲ್ಲಿ ಹಲವು ವರ್ಷಗಳಿಂದ ನೀರಿಲ್ಲದೆ, ಹೂಳು ತುಂಬಿ ಒಣಗಿದ್ದ ಗೌಡರ ಕಟ್ಟೆಯನ್ನು ಜೆಸಿಬಿ ಮೂಲಕ ಹೂಳು ತೆಗೆದು, ಸುಮಾರು 20 ಅಡಿ ಆಳದಷ್ಟು ಕೃಷಿ ಹೊಂಡ ನಿರ್ಮಿಸಿ, ಟ್ಯಾಂಕರ್ ಮೂಲಕ ನೀರು ತುಂಬಿಸಿ, ಸುತ್ತಮುತ್ತಲ ದನ,ಕರುಗಳು ಹಾಗೂ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸಿದ್ದಾರೆ.

ದಿಬ್ಬೂರು ಯುವಕರ ಈ ಕಾರ್ಯವನ್ನು ಮೆಚ್ಚಿ,ಕೆಲಸ ನಡೆಯುವ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅಖಿಲ ಭಾರತ ಡಾ. ಅಂಬೇಡ್ಕ ರ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಡಾ.ಚಿ.ನಾ.ರಾಮು ಮಾತನಾಡಿ, ನಿಜಕ್ಕೂ ಇದೊಂದು ಸುತ್ಯಾರ್ಹ ಕೆಲಸ. ಇಂದು ಬರಗಾ ಲದಿಂದ ಜನರ ಜೊತೆಗೆ, ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. 

ಎಷ್ಟೋ ಪ್ರಾಣಿಗಳು ದಾಹ ತೀರಿಸಿಕೊಳ್ಳಲು ಜನವಸತಿ ಪ್ರದೇಶಗಳಿಗೆ ಬರುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ಇದನ್ನು ಮನಗಂಡು ದಿಬ್ಬೂರು ಯುವಕರು ಮುಚ್ಚಿ ಹೋಗುವ ಹಂತದಲ್ಲಿದ್ದ ಗೌಡರಕಟ್ಟೆಯ ಹೂಳು ತೆಗೆಸಿ, ನೀರು ತುಂಬಿಸಿ, ಜೀವ ಜಲ ಒದಗಿಸುವುದು ಅತ್ಯಂತ ಸಂತೋಷ ತಂದಿದೆ. ಇಂತಹ ಕೆಲಸಗಳು ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ದಿಬ್ಬೂರು ಗ್ರಾಮದ ಗೌಡರಕಟ್ಟೆ ನೀರಿಲ್ಲದ ಒಣಗಿತ್ತು. ಸುತ್ತಮುತ್ತಲ ಆಲದ ಮರಗಳ ಬೀಳಲು ಇಳಿಬಿದ್ದು ಇಲ್ಲಿ ಒಂದು ಕಟ್ಟೆ ಇತ್ತು ಎಂಬುದನ್ನೇ ಕೆಲವರು ಮರೆತಿದ್ದರು. ಇದನ್ನೇ ನೆಪ ಮಾಡಿಕೊಂಡ ಕೆಲವರು ಕಟ್ಟೆಯ ಸ್ವಲ್ಪ ಭಾಗವನ್ನು ಒತ್ತುವರಿ ಮಾಡಿದ್ದರು. 

ನೀರಿನ ಮೂಲವಾಗಿರುವ ಕಟ್ಟೆಯನ್ನು ಉಳಿಸುವುದರ ಜೊತೆಗೆ, ಬೇಸಿಗೆಯಲ್ಲಿ ಜನ, ಜಾನುವಾರು ಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರು ಸೇರಿ, ಜೆಸಿಬಿ ಮೂಲಕ ಹೂಳು ತೆಗೆಸಿ, ಸುತ್ತಮುತ್ತ ಬೆಳೆದಿದ್ದ ಗಿಡ ಗಂಟಿಗಳನ್ನು ಕಡಿದು, ಟ್ಯಾಂಕರ್ ಮೂಲಕ ನೀರು ತುಂಬಿಸಿ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ.ಇದಕ್ಕೆ ಸಹಕಾರ ನೀಡಿದ ಎಲ್ಲಾ ಗೆಳೆಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಈ ವೇಳೆ ದಿಬ್ಬೂರಿನ ಯುವಕರಾದ ದರ್ಶನ್, ರವಿ, ಮಂಜುನಾಥ್, ಪ್ರದೀಪ್, ಹರೀಶ್, ರಮೇಶ್, ಪ್ರಕಾಶ್, ಗೋಪಿ,ಗಿರಿ ಮತ್ತು ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.