ಮುಗಿದ ಚುನಾವಣೆ, ಶುರುವಾಗಿದೆ ಮತ ಗಳಿಕೆ ಲೆಕ್ಕಾಚಾರ

| Published : May 09 2024, 01:02 AM IST

ಮುಗಿದ ಚುನಾವಣೆ, ಶುರುವಾಗಿದೆ ಮತ ಗಳಿಕೆ ಲೆಕ್ಕಾಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಉರಿಬಿಸಿಲಿನೊಂದಿಗೆ ಕಳೆದ ಒಂದೂವರೆ ತಿಂಗಳಿಂದ ಕಾವೇರಿದ್ದ ಲೋಕಸಭಾ ಚುನಾವಣೆಯ ಪ್ರಮುಖ ಘಟ್ಟವಾದ ಮತದಾನವು ಮುಗಿದಿದ್ದು, ಎಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ, ಅದರಲ್ಲಿ ತಮಗೆಷ್ಟು, ಅವರಿಗೆಷ್ಟು ಎಂಬ ಲೆಕ್ಕಾಚಾರ ಶುರುವಾಗಿದ್ದು, ಜೂ. 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ನಾರಾಯಣ ಹೆಗಡೆ ಕನ್ನಡಪ್ರಭ ವಾರ್ತೆ ಹಾವೇರಿಉರಿಬಿಸಿಲಿನೊಂದಿಗೆ ಕಳೆದ ಒಂದೂವರೆ ತಿಂಗಳಿಂದ ಕಾವೇರಿದ್ದ ಲೋಕಸಭಾ ಚುನಾವಣೆಯ ಪ್ರಮುಖ ಘಟ್ಟವಾದ ಮತದಾನವು ಮುಗಿದಿದ್ದು, ಎಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ, ಅದರಲ್ಲಿ ತಮಗೆಷ್ಟು, ಅವರಿಗೆಷ್ಟು ಎಂಬ ಲೆಕ್ಕಾಚಾರ ಶುರುವಾಗಿದ್ದು, ಜೂ. 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ರಣ ಬಿಸಿಲ ನಡುವೆ ಸರಿಸುಮಾರು ಒಂದೂವರೆ ತಿಂಗಳಿಂದ ಜಿಲ್ಲೆಯಲ್ಲಿ ಚುನಾವಣಾ ಕಾವು ಕೂಡ ಏರಿತ್ತು. ಟಿಕೆಟ್ ಹಂಚಿಕೆ, ಪ್ರಚಾರ, ಆರೋಪ, ಪ್ರತ್ಯಾರೋಪ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ನಾನಾ ರೀತಿಯ ಕಸರತ್ತು, ಪಾದಯಾತ್ರೆ, ರೋಡ್ ಶೋ, ಸಮಾವೇಶ ಹೀಗೆ ನಿತ್ಯವೂ ಒಂದಿಲ್ಲೊಂದು ರಾಜಕೀಯ ಚಟುವಟಿಕೆ ನಡೆದು ಮಂಗಳವಾರ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ.

ದಾಖಲೆಯ ಶೇ.77.60ರಷ್ಟು ಮತದಾನವೂ ಆಗಿದೆ. ಜಿಲ್ಲೆಯ ೫ ಹಾಗೂ ಗದಗ ಜಿಲ್ಲೆಯ ೩ ಸೇರಿದಂತೆ ಒಟ್ಟು ೮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 14 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತದಾರರ ನಿರ್ಣಯ ಹೊರಬೀಳಲು ಇನ್ನೂ 25 ದಿನ ಕಾಯಬೇಕಿದೆ. ಸದ್ಯಕ್ಕೆ ಪಕ್ಷಗಳ ಮುಖಂಡರು ಮತ ಲೆಕ್ಕಾಚಾರದಲ್ಲೇ ಮುಳುಗಿದ್ದಾರೆ. ತಮ್ಮದೇ ರೀತಿಯಲ್ಲಿ ವಿಶ್ಲೇಷಣೆಯಲ್ಲಿ ಕಾರ್ಯಕರ್ತರು ತೊಡಗಿದ್ದಾರೆ.

ಮತ ಗಳಿಕೆ ಅಂದಾಜು: ಬರಗಾಲ, ಸೆಕೆ, ರಣ ಬಿಸಿಲು ನಡುವೆಯೂ 2019ರ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಕ್ಷೇತ್ರದ ಮತದಾನ ಶೇ.74.01ರಷ್ಟಾಗಿತ್ತು. ಈ ಸಲ ಶೇ.77.60ರಷ್ಟಾಗಿದೆ. ಗದಗ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದ್ದರೆ, ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲೂ ಭರ್ಜರಿ ಮತದಾನವೇ ಆಗಿದೆ. ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಕಂಡುಬಂದಿದೆ. ಪ್ರತಿ ಬೂತ್‌ನಲ್ಲೂ ಈ ಎರಡೂ ಪಕ್ಷಗಳ ಏಜೆಂಟರು ಮೈಯೆಲ್ಲ ಕಣ್ಣಾಗಿದ್ದು ಮತದಾನ ಗಮನಿಸಿದ್ದಾರೆ. ಯಾರ್‍ಯಾರು ಮತ ಹಾಕಿದ್ದಾರೆ ಎಂಬೆಲ್ಲ ಮಾಹಿತಿ ಅವರ ಕೈಯಲ್ಲಿದೆ. ನಮ್ಮ ಪಕ್ಷದ ಅಭ್ಯರ್ಥಿಗೆ ಎಷ್ಟು ಮತ ಬೀಳುತ್ತವೆ ಎಂಬುದರ ಅಂದಾಜು ಲೆಕ್ಕಾಚಾರವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಈಗ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿಯವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಡಿಮೆ ಅಂತರದಲ್ಲಾದರೂ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಹೇಳುತ್ತಿದ್ದರೆ, ಕಾಂಗ್ರೆಸ್ಸಿಗರು ಆನಂದಸ್ವಾಮಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಭಾರೀ ವಿಶ್ವಾಸದ ಮಾತನಾಡುತ್ತಿದ್ದಾರೆ.

ಮೂರು ಚುನಾವಣೆಯ ಇತಿಹಾಸ: ಕ್ಷೇತ್ರ ಮರು ವಿಂಗಡಣೆ ಬಳಿಕ ಹಾವೇರಿ ಕ್ಷೇತ್ರಕ್ಕೆ ಇದು ನಾಲ್ಕನೇ ಚುನಾವಣೆಯಾಗಿದೆ. 2009ರಲ್ಲಿ ಮೊದಲ ಬಾರಿಗೆ ಬಿಜೆಪಿಯ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್‌ನ ಸಲೀಂ ಅಹ್ಮದ್ ವಿರುದ್ಧ 88 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2014ರ ಚುನಾವಣೆಯಲ್ಲೂ ಇವರಿಬ್ಬರ ನಡುವೆಯೇ ಮುಖಾಮುಖಿ ನಡೆದಿತ್ತು. ಆಗಲೂ ಬಿಜೆಪಿಯ ಶಿವಕುಮಾರ ಉದಾಸಿ ಸುಮಾರು 86 ಸಾವಿರ ಮತಗಳ ಅಂತರದಲ್ಲೇ ಗೆದ್ದಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉದಾಸಿ ಅವರು 1.41 ಲಕ್ಷ ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸಿ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದರು. 2019ರಲ್ಲಿ ಬಿಜೆಪಿ ಶೇ. 53.92ರಷ್ಟು ಮತ ಗಳಿಸಿದ್ದರೆ, ಕಾಂಗ್ರೆಸ್‌ ಶೇ. 42.81ರಷ್ಟು ಮತ ತನ್ನ ಪಾಲಾಗಿಸಿಕೊಂಡಿತ್ತು.

ಕಳೆದ ಚುನಾವಣೆಗಿಂತ ಈ ಸಲ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತದಾರರ ಸಂಖ್ಯೆ ಹೆಚ್ಚಿದೆ. 17.92 ಲಕ್ಷ ಮತದಾರರ ಪೈಕಿ 13.91 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದ ಪ್ರತಿನಿಧಿ ಯಾರಾಗಬೇಕು ಎಂಬುದನ್ನು ಅವರು ಈಗಾಗಲೇ ನಿರ್ಧರಿಸಿಯಾಗಿದೆ. 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳು ತಾಲೂಕಿನ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಮ್ ಸೇರಿವೆ. ಎರಡೂ ಪಕ್ಷಗಳ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸದಲ್ಲೇ ಇದ್ದಾರೆ. ಫಲಿತಾಂಶದ ಮೇಲೆ ಬೆಟ್ಟಿಂಗ್‌ ಕೂಡ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ನೆಕ್‌ ಟು ನೆಕ್‌ ಫೈಟ್ ನೀಡಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಮೋದಿ ಅಲೆ, ತಾವು ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡು ಬೊಮ್ಮಾಯಿ ಗೆಲುವಿನ ಲೆಕ್ಕಾಚಾರದಲ್ಲಿದ್ದರೆ, ಕೈ ಅಭ್ಯರ್ಥಿ ಗಡ್ಡದೇವರಮಠ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡು ಮತದಾರರು ಕೈಹಿಡಿಯುವ ಆಶಯದಲ್ಲಿದ್ದಾರೆ. ಮತದಾರ ಯಾವುದೇ ಗುಟ್ಟು ಬಿಟ್ಟುಕೊಡದೇ ತನ್ನ ತೀರ್ಪನ್ನು ಒತ್ತಿದ್ದು, ಜೂ. 4ರ ವರೆಗೂ ಜನಾದೇಶಕ್ಕಾಗಿ ಕಾಯಬೇಕಿದೆ.