ರಿಲ್ಯಾಕ್ಸ್‌ ಮೂಡ್ನಲ್ಲಿ ಕಾಗೇರಿ

| Published : May 09 2024, 01:01 AM IST / Updated: May 09 2024, 01:02 AM IST

ಸಾರಾಂಶ

ಕಾಗೇರಿ ಅವರು ಬುಧವಾರ ಬೆಳಗ್ಗೆ ಕುಟುಂಬದವರೊಟ್ಟಿಗೆ ಖುಷಿಯಿಂದ ಮಾತನಾಡುತ್ತ ತಿಂಡಿ, ಟೀ ಕುಡಿದ ಕಾಗೇರಿ ಕೊಟ್ಟಿಗೆಗೆ ಹೋಗಿ ದನಕರುಗಳ ಮೈದಡವಿದರು.

ವಸಂತಕುಮಾರ್ ಕತಗಾಲ

ಕಾರವಾರ: ಚುನಾವಣಾ ಭರಾಟೆ ಮುಗಿಯುತ್ತಿದ್ದಂತೆ ರೆಸಾರ್ಟ್‌ಗೆ ಹೋಗಿಲ್ಲ. ರೆಸ್ಟ್ ಅಂತೂ ಕೇಳಬೇಡಿ. ದನಕರುಗಳ ಮೈದಡವುತ್ತ, ಅಡಕೆ ತೋಟದಲ್ಲಿ ತಿರುಗಾಡುತ್ತ, ಹೂವಿನ ಗಿಡಗಳಿಗೆ ನೀರುಣಿಸುತ್ತ ಬುಧವಾರ ಇಡೀ ದಿನವನ್ನು ನಿರುಮ್ಮಳವಾಗಿ ಕಳೆದಿದ್ದಾರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ.

ಕಾಗೇರಿ ಇಂತಹ ಕಾಯಕದಿಂದಲೇ ರಿಲ್ಯಾಕ್ಸ್ ಆಗುತ್ತಾರೆ. ಹೆಚ್ಚು ಕಡಿಮೆ ಎರಡು ತಿಂಗಳುಗಳಿಂದ ಅವರ ಕುಟುಂಬದವರು ಕಾಗೇರಿ ಅವರೊಂದಿಗೆ ಕುಳಿತು ಪಟ್ಟಂಗ ಹೊಡೆದಿರಲಿಲ್ಲ. ಅವರ ಮನೆಯ ದನಕರುಗಳು ಹೆಗಡೆ ಅವರನ್ನು ಕಂಡಿರಲಿಲ್ಲ. ಕಾಗೇರಿ ಅವರೂ ಮನೆಯ ಊಟವನ್ನು ಮಾಡದೆ ಸಾಕಷ್ಟು ದಿನಗಳಾಗಿತ್ತು. ಅಡಕೆ ತೋಟಕ್ಕೆ ಹೋಗದೆ ಬೇಸರವಾಗಿತ್ತು.

ಬುಧವಾರ ಬೆಳಗ್ಗೆ ಕುಟುಂಬದವರೊಟ್ಟಿಗೆ ಖುಷಿಯಿಂದ ಮಾತನಾಡುತ್ತ ತಿಂಡಿ, ಟೀ ಕುಡಿದ ಕಾಗೇರಿ ಕೊಟ್ಟಿಗೆಗೆ ಹೋಗಿ ದನಕರುಗಳ ಮೈದಡವಿದರು. ಮೇವು ನೀಡಿದರು. ಕಾಗೇರಿ ತೋಟಕ್ಕೆ ಹೊರಟು ನಿಂತಾಗ ಅವರ ಮನೆಯ ನಾಯಿಯೂ ಜಿಗಿದಾಡುತ್ತ ಕಾಗೇರಿ ಅವರನ್ನು ಅನುಸರಿಸಿತು.

ನಂತರ ಕಾಗೇರಿ ಶಿರಸಿಯ ಕಚೇರಿಯಲ್ಲಿ ಕೆಲ ಸಮಯ ಕಳೆದಿದ್ದಾರೆ. ಆಗಮಿಸಿದ ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ಮತಗಳ ಲೆಕ್ಕಾಚಾರ ಹಾಕಿದ್ದಾರೆ. ಮಧ್ಯಾಹ್ನ ಮತ್ತೆ ತಮ್ಮ ಊರಾದ ಕುಳವೆಯ ಕಾಗೇರಿಗೆ ಬಂದು ಊಟ ಪೂರೈಸಿ, ಕಿರು ವಿಶ್ರಾಂತಿ ಮಾಡಿ ಮತ್ತೆ ಶಿರಸಿಯ ಆಫೀಸಿಗೆ ಬಂದಿದ್ದಾರೆ.

ದನಕರುಗಳ ಮೈದಡವುತ್ತ, ತೋಟದಲ್ಲಿ ತಿರುಗಾಡುತ್ತ, ಹೂವಿನ ಗಿಡಗಳಿಗೆ ನೀರೆರೆದರು. ಬಳಿಕ ಕೆಲ ಸಮಯ ಗಿಳಿಗಳ ಜತೆ ಕಾಲ ಕಳೆದರು. ಅದೇ ರೀತಿ ಕುಟುಂಬ, ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ಮಾತನಾಡುತ್ತ ಕಾಗೇರಿ ರಿಲ್ಯಾಕ್ಸ್ ಆಗಿದ್ದಾರೆ.

ಧಾವಂತದ ಬದುಕು: ಚುನಾವಣಾ ಪ್ರಚಾರದಲ್ಲಿ ಕಾಗೇರಿ ಅವರದ್ದು ಧಾವಂತದ ಬದುಕು. ಊಟ, ತಿಂಡಿ, ನಿದ್ದೆ ಯಾವುದಕ್ಕೂ ಸಮಯ ಇಲ್ಲ. ವಿಸ್ತಾರವಾದ ಕ್ಷೇತ್ರದುದ್ದಕ್ಕೂ ಓಡಾಟ. ನಡುವೆ ನರೇಂದ್ರ ಮೋದಿ ಪ್ರಚಾರ ಸಭೆ ತಯಾರಿ. ಹೀಗೆ ಗಡಿಬಿಡಿಯಲ್ಲೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಈಗ ಒಮ್ಮೆಲೆ ನಿರಾಳರಾದ ಅನುಭವ ಉಂಟಾಗಿದೆ.

ಧನ್ಯವಾದ: ಈ ಬಾರಿ ಈ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ಆಗಿದೆ. ಎಲ್ಲೆಡೆ ಅನುಕೂಲಕರವಾಗಿದೆ. ಪಕ್ಷದ ಕಾರ್ಯಕರ್ತರು, ಪ್ರಮುಖರು, ಹಿರಿಯರು ಅವಿರತವಾಗಿ ದುಡಿದಿದ್ದಾರೆ. ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ದು ತುಂಬ ಪರಿಣಾಮವಾಗಿದೆ. ಅವರೆಲ್ಲರಿಗೆ ಧನ್ಯವಾದಗಳು. ಹಲವು ದಿನಗಳ ತರುವಾಯ ಕುಟುಂಬದವರೊಂದಿಗೆ ಆಪ್ತರೊಂದಿಗೆ ಕುಳಿತು ಸಮಾಧಾನದಿಂದ ಮಾತನಾಡುವ ಅವಕಾಶ ಇಂದು ದೊರೆತಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.