ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ಜಿಲ್ಲೆ ಕಳಪೆ ಸಾಧನೆ

| Published : May 10 2024, 01:34 AM IST

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ಜಿಲ್ಲೆ ಕಳಪೆ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ತರಗತಿಯಾಗಿದ್ದರು ಫಲಿತಾಂಶ ಪ್ರಕಟಗೊಂಡಾಗ ಕುಖ್ಯಾತಿ ಕಳಂಕವು ರಾಯಚೂರಿಗೆ ಪಕ್ಕಾ ಎನ್ನುವ ಖಚಿತ ವಾತಾವರಣ ನಿರ್ಮಾಣವಾಗುತ್ತಿರುವುದು ಪಾಲಕರು, ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸುತ್ತಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಎಸ್ಸೆಸ್ಸೆಲ್ಸಿ ಫಲಿತಾಂಶವಿರಲಿ.. ದ್ವಿತೀಯ ಪಿಯುಸಿ ಫಲಿತಾಂಶವಿರಲಿ.. ಇಲ್ಲವೇ ಸಿಇಟಿ ಫಲಿತಾಂಶವಿರಲಿ.. ರಾಯಚೂರಿನ ಮಟ್ಟಿಗೆ ಕಳಪೆ ಸಾಧನೆ ಕಟ್ಟಿಟ್ಟ ಬುತ್ತಿ ಎನ್ನುವ ಮಟ್ಟಿಗೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿತಕಂಡಿದೆ.ಯಾವುದೇ ತರಗತಿಯಾಗಿದ್ದರು ಫಲಿತಾಂಶ ಪ್ರಕಟಗೊಂಡಾಗ ಕುಖ್ಯಾತಿ ಕಳಂಕವು ರಾಯಚೂರಿಗೆ ಪಕ್ಕಾ ಎನ್ನುವ ಖಚಿತ ವಾತಾವರಣ ನಿರ್ಮಾಣವಾಗುತ್ತಿರುವುದು ಪಾಲಕರು, ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸುತ್ತಿದೆ.

ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯಲು ಹತ್ತು ಹಲವು ಕಾರಣಗಳನ್ನು ವಿಶ್ಲೇಷಿಸಬಹುದಾಗಿದೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವ ಸರ್ಕಾರ, ಜಿಲ್ಲಾಡಳಿತ, ಜಿಪಂ ಮಕ್ಕಳ ವಿದ್ಯಾಭ್ಯಾಸಕ್ಕೆ ಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿಲ್ಲ. ಜಿಲ್ಲೆಯ ನೂರಾರು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿದೆ. ಅತಿಥಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ, ಶಾಲೆಗಳಲ್ಲಿ ಮೂಲಭೂತ ಸವಲತ್ತು ಕೊರತೆ ಜೊತೆಗೆ ಮಕ್ಕಳಿಗೆ ಪರಿಣಾಮಕಾರಿಯಾದ ಬೋಧನೆ ನೀಡುವಂತಹ ಸುಧಾರಿತ ವ್ಯವಸ್ಥೆಯಿಲ್ಲದ ಕಾರಣಕ್ಕೆ ನಿರಂತರವಾಗಿ ಕಳಪೆ ಸಾಧನೆ ಕಳಂಕವು ಅಂಟಿಕೊಳ್ಳುತ್ತಿದೆ.ಬಾಕ್ಸ್.........

ಇವರೇ ಜಿಲ್ಲೆ ಎಸ್ಸೆಸ್ಸೆಲ್ಸಿ ಟಾಪರ್ಸ್‌:

ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶದಲ್ಲಿ ಜಿಲ್ಲೆಯ 10 ಜನ ವಿದ್ಯಾರ್ಥಿಗಳು 625 ಕ್ಕೆ 600ಕ್ಕೂ ಅಧಿಕ ಅಂಕಗಳನ್ನು ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

ನಗರದ ಕೆಡಬ್ಲೂಟಿ ಪ್ರೌಢಶಾಲೆಯ ಪ್ರಥಮ ಮಹಮ್ಮದ್ ಆದಿಲ್ ಫರಹಾನ್ ಅವರು 625ಕ್ಕೆ 618 ಅಂಕಗಳನ್ನು ಗಳಿಸುವ ಮೂಲಕ ಶೇ 98.88ರಷ್ಟು ಫಲಿತಾಂಶ ಪಡೆದಿದ್ದಾರೆ. ದೇವದುರ್ಗ ತಾಲೂಕಿನ ಜಾಲಹಳ್ಳಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ರಾಮನಗೌಡ ಅವರು 625ಕ್ಕೆ 617 ಅಂಕಗಳಿಸಿ ಶೇ 98.72ರಷ್ಟು ಫಲಿತಾಂಶ ಗಳಿಸಿದ್ದಾರೆ. ದೇವದುರ್ಗ ತಾಲೂಕಿ ಜಾಲಹಳ್ಳಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಮಲ್ಲಿಕಾರ್ಜುನ ಅವರು 625ಕ್ಕೆ 616 ಅಂಕ ಗಳಿಸುವ ಮೂಲಕ ಶೇ 98.56ರಷ್ಟು ಫಲಿತಾಂಶ, ರಾಯಚೂರು ನಗರದ ಇನ್‌ಫೆಂಟ್ ಜೀಸಸ್ ಶಾಲೆ ವಿದ್ಯಾರ್ಥಿ ರಘುರಾಮ 625ಕ್ಕೆ 615 ಅಂಕ ಗಳಿಸುವ ಮೂಲಕ ಶೇ 98.40ರಷ್ಟು ಫಲಿತಾಂಶ ಪಡೆದಿದ್ದಾರೆ.

ಶಕ್ತಿನಗರ ಕೆಪಿಸಿಎಲ್ ಡಿಎವಿ ಶಾಲೆಯ ವಿದ್ಯಾರ್ಥಿನಿ ಸಂಜನಾ, ಸಿಂಧನೂರಿನ ಎಂಡಿಎನ್ ಪ್ಯೂಚರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ, ಲಿಂಗಸುಗೂರಿನ ಆದರ್ಶನ ವಿದ್ಯಾಲಯದ ವಿದ್ಯಾರ್ಥಿ ಇರ್ಮಾನ್ ಮೂವರೂ 625ಕ್ಕೆ 615 ಅಂಕ ಗಳಿಸಿ ಶೇ 98.08ರಷ್ಟು ಫಲಿತಾಂಶ ಗಳಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಅಡವಿಬಾವಿ ಕಿತ್ತೂರುರಾಣಿ ಶಾಲೆ ವಿದ್ಯಾರ್ಥಿನಿ ಸೀತಮ್ಮ ಅವರು 625ಕ್ಕೆ 612 ಅಂಕ ಗಳಿಸುವ ಮೂಲಕ ಶೇ 97.92ರಷ್ಟು ಫಲಿತಾಂಶ ಪಡೆದಿದ್ದಾರೆ.

ರಾಯಚೂರಿನ ವಿದ್ಯಾಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಮನೋಜಕುಮಾರ ಟಿ.ಎಸ್ ಹಾಗೂ ರಾಯಚೂರಿನ ಲಿಟಲ್ ಏಂಜಲ್ಸ್‌ ಪ್ರೌಢಶಾಲೆ ವಿದ್ಯಾರ್ಥಿ ಉಮ್ಮೆ ವಾಕಹ ಅವರು 625ಕ್ಕೆ 611 ಅಂಕ ಗಳಿಸುವ ಮೂಲಕ ಶೇ 97.76ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ತಿಳಿಸಿದೆ.

ಜಿಲ್ಲೆ ಸೇರಿ ಇಡೀ ರಾಜ್ಯದಲ್ಲಿಯೇ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದ ಫಲಿತಾಂಶದಲ್ಲಿ ಹಿನ್ನಡೆ ಸಾಧಿಸುತ್ತಿದ್ದೇವೆ. ಅತಿಥಿ ಶಿಕ್ಷಕರಿಂದ ನಿರ್ವಹಣೆ ಮಾಡಲಾಗುತ್ತಿದೆ. ಜತೆಗೆ ಫಲಿತಾಂಶ ಸುಧಾರಣೆಗೆ ಸಾಕಷ್ಟು ಒತ್ತು ನೀಡಲಾಗಿತ್ತು. ಅಧ್ಯಯನದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗಿತ್ತು. ಪಾಲಕರ ಸಭೆಗಳನ್ನು ನಡೆಸಲಾಗಿತ್ತು. ವಿಷಯವಾರು ತರಗತಿಗಗಳಿಗೆ ಒತ್ತು ನೀಡಲಾಗಿತ್ತು. ಆದರೂ ಸಹ ನಿರೀಕ್ಷಿತ ಫಲಿತಾಂಶವು ಲಭಿಸಿಲ್ಲ...

ಕೆ.ಡಿ.ಬಡಿಗೇರ್, ಡಿಡಿಪಿಐ, ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಇದರ ಜೊತೆಗೆ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಮತ್ತು ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿಕೊಡಲು ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಶಿಕ್ಷಣದ ಗುಣಮಟ್ಟ ಇನ್ನಷ್ಟು ಕುಸಿತ ಕಾಣಲಿದೆ.

ಸೈಯದ್‌ ಹಫೀಜುಲ್ಲಾ, ಸಂಚಾಲಕ, ಜ್ಞಾನ ವಿಜ್ಞಾನ ಸಂಸ್ಥೆ, ರಾಯಚೂರು

ಪ್ರತಿದಿನ ನಿರಂತರವಾಗಿ ಅಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಲಾಗಿದೆ. ಇದರಿಂದ ಈ ಸಾಧನೆ ಮಾಡಲು ಸಹಕಾರಿಯಾಗಿದೆ. ಮುಂದೆ ವಿಜ್ಞಾನ ವಿಷಯ ಪಡೆದುಕೊಂಡು ವೈದ್ಯನಾಗಬೇಕು ಎಂಬ ಗುರಿಯನ್ನು ಹೊಂದಿದ್ದೇನೆ. ನಮ್ಮ ತಂದೆ ಹಾಗೂ ತಾಯಿ ನನಗೆ ಓದಲು ಸಾಕಷ್ಟು ಪ್ರೋತ್ಸಾಹಿಸುವುದರೊಂದಿಗೆ ಸಹಕಾರವನ್ನೂ ನೀಡುತ್ತಿದ್ದಾರೆ.

ಮಹಮ್ಮದ್ ಆದಿಲ್ ಫರಾಹನ್, ಎಸ್ಸೆಸ್ಸೆಲ್ಸಿ ಟಾಪರ್