ಫಲಿತಾಂಶ ಕ್ಷೀಣಿಸಿದರೂ ಜಿಲ್ಲೆಯ ಸ್ಥಾನ ಯಥಾಸ್ಥಿತಿ

| Published : May 10 2024, 01:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಿರೀಕ್ಷೆಯಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸಾಧನೆ ಮಾಡಿರುವ ಶಾಲೆಗಳಲ್ಲಿ ಸಂಭ್ರಮ ಮೇಳೈಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಾಧನೆ ಮಾಡಲು ಜಿಲ್ಲೆಗೆ ಸಾಧ್ಯವಾಗಿಲ್ಲ. ಹಿಂದಿನ ವರ್ಷದಂತೆಯೇ ವಿಜಯಪುರ ಜಿಲ್ಲೆ ಈ ವರ್ಷವೂ ರಾಜ್ಯದ ಫಲಿತಾಂಶದಲ್ಲಿ 11ನೇ ಸ್ಥಾನವನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಂಡಿದೆ. ಆದರೆ, ಕಳೆದ ಬಾರಿಗಿಂತ ಶೇ.11.41ರಷ್ಟು ಫಲಿತಾಂಶ ಕ್ಷೀಣಿಸಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ನಿರೀಕ್ಷೆಯಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸಾಧನೆ ಮಾಡಿರುವ ಶಾಲೆಗಳಲ್ಲಿ ಸಂಭ್ರಮ ಮೇಳೈಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಾಧನೆ ಮಾಡಲು ಜಿಲ್ಲೆಗೆ ಸಾಧ್ಯವಾಗಿಲ್ಲ. ಹಿಂದಿನ ವರ್ಷದಂತೆಯೇ ವಿಜಯಪುರ ಜಿಲ್ಲೆ ಈ ವರ್ಷವೂ ರಾಜ್ಯದ ಫಲಿತಾಂಶದಲ್ಲಿ 11ನೇ ಸ್ಥಾನವನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಂಡಿದೆ. ಆದರೆ, ಕಳೆದ ಬಾರಿಗಿಂತ ಶೇ.11.41ರಷ್ಟು ಫಲಿತಾಂಶ ಕ್ಷೀಣಿಸಿದೆ.

ನೆತ್ತಿ ಸುಡುವ ಬಿಸಿಲಿನಲ್ಲಿ ಪರೀಕ್ಷೆ ಬರೆದರೂ ಜಿಲ್ಲೆಯ ಫಲಿತಾಂಶ ಮಾತ್ರ ಕಳೆದ ವರ್ಷದಂತೆ 11ನೇ ಸ್ಥಾನದಲ್ಲೇ ಇದೆ. ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ದಿಟ್ಟ ನಿರ್ಧಾರದಿಂದ ನಕಲುಮುಕ್ತವಾಗಿ, ಪ್ರಾಮಾಣಿಕವಾಗಿ ಅಭ್ಯಸಿಸಿ ಉತ್ತಮ ರೀತಿಯಲ್ಲಿ ಫಲಿತಾಂಶ ತೆಗೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ.

ಸಿಸಿ ಕ್ಯಾಮರಾ ಕಣ್ಗಾವಲು:

ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಹಾಗೂ ನಕಲು ತಡೆಯುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಹೀಗಾಗಿ, ಎಚ್ಚರಿಕೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಅಕ್ರಮ ಎಸಗದೆ, ದಿಟ್ಟತನದಿಂದ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಾಧನೆ ಮಾಡಿ ತೋರಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ, ಸಾಲದ್ದಕ್ಕೆ ಪರೀಕ್ಷಾ ಕೊಠಡಿಯೊಳಗೆ ಹೋಗುವಾಗ ಪೂರ್ತಿ ತಪಾಸಣೆ, ಕೊಠಡಿ ಮೇಲ್ವಿಚಾರಕರು, ಸೂಪರವೈಸರ್‌ಗಳ ರೌಂಡ್ಸ್ ಹೀಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ್ದರೂ ಜಿಲ್ಲೆಯ ಫಲಿತಾಂಶ ಯಥಾಸ್ಥಿತಿ ಕಾಯ್ದುಕೊಂಡಿರುವುದು ಹೆಮ್ಮೆಯ ವಿಷಯ.

ಅಕ್ರಮಕ್ಕಿಲ್ಲ ಅವಕಾಶ:

ಈ ಹಿಂದೆ ನಡೆಯುತ್ತಿದ್ದ ಪರೀಕ್ಷೆಗಳಲ್ಲಿ ಹಲವಾರು ಕಡೆಗಳಲ್ಲಿ ಅಕ್ರಮವಾಗಿ ಚೀಟಿ, ಬುಕ್, ಗೈಡ್‌ಗಳ ಮೂಲಕ ನಕಲು ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ಆಗುವುದು ಕಂಡು ಬರುತ್ತಿತ್ತು. ಆದರೆ ಈ ಬಾರಿ ಪರೀಕ್ಷೆಯಲ್ಲಿ ಇಂತಹ ಯಾವುದೇ ಘಟನೆಗಳಿಗೆ ಇಲಾಖೆ ಅವಕಾಶವನ್ನೇ ನೀಡಿಲ್ಲ. ಜೊತೆಗೆ ಜಿಲ್ಲಾಡಳಿತದ ಮಾರ್ಗದರ್ಶನ ಸಲಹೆ ಮೇರೆಗೆ ಕಟ್ಟುನಿಟ್ಟಿನ ಕ್ರಮದಲ್ಲೂ ಜಿಲ್ಲೆ 11ನೇ ಸ್ಥಾನ ಕಾಯ್ದುಕೊಂಡಿರುವುದು ಖುಷಿ ವಿಚಾರ.

ಬಿಸಿಲ ಧಗೆಯಲ್ಲಿ ಪರೀಕ್ಷೆ:

ಈ ಬಾರಿಯ ಬಿಸಿಲು ಹಾಗೂ ಸೆಕೆ ಕೂಡ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಹಿಂಡಿ ಹಿಪ್ಪೆ ಮಾಡಿತು. ಯಾರನ್ನೂ ಕೂತಲ್ಲಿ ಕೂರೋಕೆ ಬಿಡುತ್ತಿರಲಿಲ್ಲ. ನಿಂತಲ್ಲಿ ನಿಲ್ಲಲು ಆಗುತ್ತಿರಲಿಲ್ಲ. ಅಂತಹ ಸಂಕಟದಲ್ಲಿ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಓದಿ ಪರೀಕ್ಷೆ ಬರೆದು ಸಾಧನೆ ಮಾಡಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಚಾರವೇ ಸರಿ.

ಒಟ್ಟು ಫಲಿತಾಂಶದಲ್ಲಿ ಇಳಿಕೆ:

ಕಳೆದ ಸಾಲಿನಲ್ಲಿ ಶೇ.91.23ರಷ್ಟು ಶೇಕಡಾವಾರು ಫಲಿತಾಂಶ ಪಡೆದಿದ್ದ ವಿಜಯಪುರ 11ನೇ ಸ್ಥಾನದಲ್ಲಿತ್ತು. ಬಾರಿ ಒಟ್ಟು ಫಲಿತಾಂಶದಲ್ಲಿ ಇಳಿಕೆ ಕಂಡಿದೆ. ಆದರೆ, ಅದೇ ಸ್ಥಾನವನ್ನು ಮುಂದುವರಿಸಿದೆ. ಈ ಭಾರಿ ಶೇ.79.82 ಫಲಿತಾಂಶ ಪಡೆದಿದೆ. ಈ ಬಾರಿ ಒಟ್ಟು 40,528 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 32,351 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪಾಸಾದವರ ಲೆಕ್ಕಾಚಾರ:

ಉತ್ತೀರ್ಣವಾದವರು ಈಗಾಗಲೇ ಮುಂದೇನು ಮಾಡಬೇಕು? ಯಾವ ಕೋರ್ಸ್ ತೆಗೆದುಕೊಳ್ಳಬೇಕು ಹಾಗೂ ಯಾವುದಕ್ಕೆಲ್ಲ ಸಿಇಟಿ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಾಗಬೇಕು ಎಂದು ಚಿಂತೆಯಲ್ಲಿ ತೊಡಗಿದ್ದಾರೆ. ಇತ್ತ ಅನುತ್ತೀರ್ಣವಾದವರು ಮತ್ತೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

---------

ಕೋಟ್

ಈ ಹಿಂದಿನಂತೆ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಕೊಡದೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲಾದ್ಯಂತ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಹುಮ್ಮಸ್ಸಿನಿಂದ ಪರೀಕ್ಷೆ ಬರೆದಿದ್ದಾರೆ. ಪರಿಣಾಮ ಬೇರೆ ಜಿಲ್ಲೆಗಳಲ್ಲಿ ಸ್ಥಾನಗಳು ಪಲ್ಲಟವಾದರೂ ವಿಜಯಪುರ ಜಿಲ್ಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಅನುತ್ತೀರ್ಣವಾದ ವಿದ್ಯಾರ್ಥಿಗಳು ಎದೆಗುಂದದೆ ಇನ್ನೊಮ್ಮೆ ಪರೀಕ್ಷೆ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು.

- ಟಿ.ಭೂಬಾಲನ್, ವಿಜಯಪುರ ಡಿಸಿ.

--------

ವಿಷಯವಾರು ವಿಷಯ ವೇದಿಕೆ ನಡೆಸುವುದರ ಮೂಲಕ ಸಮಾಲೋಚನೆ ನಡೆಸಿರುವುದು ಸಹ ಫಲಿತಾಂಶ ಸುಧಾರಣೆಗೆ ಅನುಕೂಲವಾಯಿತು. ಹೊಸ ಆಸೆಯೊಂದಿಗೆ ಫಲಿತಾಂಶ ಸುಧಾರಣೆಯೊಂದಿಗೆ ಮುನ್ನಡೆಯೋಣ, ಅನಿವಾರ್ಯ, ಒತ್ತಡ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರಬಹುದು, ಆದರೆ ನಿರುತ್ಸಾಹಿಗಳಾಗದೇ ಕಠಿಣ ಅಧ್ಯಯನ ಮೂಲಕ ಜಯಶಾಲಿಯಾಗಬೇಕೇ ಹೊರತು ಕುಗ್ಗಬಾರದು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಗುತ್ತಿದೆ.

- ಶಿವರಾಜ ಬಿರಾದಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ.