ಆಕಸ್ಮಿಕ ಗೆಲುವಿನ ದುರಹಂಕಾರಿ ಮಧುಗೆ ಪಾಠ ಕಲಿಸಿ: ಕುಮಾರ ಬಂಗಾರಪ್ಪ

| Published : Apr 28 2024, 01:15 AM IST

ಸಾರಾಂಶ

ಸೊರಬ ಪಟ್ಟಣದ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಅಕ್ಷರ ಜ್ಞಾನ ಇಲ್ಲದ ಅಜ್ಞಾನಿ, ದುರಹಂಕಾರ ಎನ್ನುವುದನ್ನು ಇಡೀ ದೇಹಕ್ಕೆ ಅಳವಡಿಸಿಕೊಂಡು ಮೆರೆಯುತ್ತಿರುವ ಇಲ್ಲಿನ ಶಾಸಕರಿಗೆ ಲೋಕಸಭಾ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಈ ಮೂಲಕ ತಾಲೂಕು ಮತ್ತು ಜಿಲ್ಲೆ ಶುದ್ಧೀಕರಣವಾಗಬೇಕು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಮ್ಮ ಸಹೋದರ ಮಧು ಬಂಗಾರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಪಟ್ಟಣದ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದುರಹಂಕಾರಕ್ಕೂ ಒಂದು ಮಿತಿ ಇರುತ್ತದೆ. ಎಲ್ಲೆ ಮೀರಿದರೆ ಆಪತ್ತು ಖಂಡಿತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮಲ್ಲಿನ ಕೆಲವು ಗೊಂದಲಗಳಿಂದ ಆತ ಆಕಸ್ಮಿಕ ಗೆಲುವು ಸಾಧಿಸಿ ದುರಹಂಕಾರಿಯಾಗಿದ್ದಾನೆ. ಆತನಿಗೆ ಅಭಿವೃದ್ಧಿ ಪದದ ಅರ್ಥವೇ ತಿಳಿದಿಲ್ಲ. ಯಾರಿಗೆ ಯಾವ ರೀತಿ ಮಾತನಾಡಬೇಕು ಎನ್ನುವ ಪರಿಜ್ಞಾನ ಕೂಡ ಇಲ್ಲದ ಹೆಡ್ಡ. ದೊಡ್ಡವರನ್ನು ಬೈದರೆ ತಾನೂ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಲ್ಲದ ಮಾತುಗಳನ್ನು ಆಡುತ್ತಿದ್ದಾನೆ ಎಂದರು.

ತಂಗಿ ಗೀತಾ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಅವರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹಲವರು ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದರು. ಆದರೆ, ತಮ್ಮ-ತಂಗಿ ಎಂದು ಹೇಳಿಕೊಳ್ಳಲು ಅಹಸ್ಯ ಹುಟ್ಟಿಸುವ ಗೀತಾ, ಮಧು ಅವರನ್ನು ತಾನೆಂದೂ ಕ್ಷಮಿಸುವುದಿಲ್ಲ. ಅವರ ಬಗ್ಗೆ ಎಂದಿಗೂ ಮೃದುಧೋರಣೆ ಹುಟ್ಟುವುದಿಲ್ಲ. ಎಸ್.ಬಂಗಾರಪ್ಪ ಅವರು ಮಧುಗೆ ಚಿಕ್ಕ ವಯಸ್ಸಿನಲ್ಲಿ ಹಿರಿತನದ ಜವಾಬ್ದಾರಿ ಕೊಟ್ಟಿದ್ದರಿಂದ ಬಲುಬೇಗ ಆತ ದಾರಿ ತಪ್ಪಿದ ಎಂದು ಮಧು ಬಂಗಾರಪ್ಪ ಅವರ ವಿರುದ್ಧ ಹರಿಹಾಯ್ದರು.

ನನಗೆ ಪಕ್ಷವೇ ದೊಡ್ಡದು. ಕಾರ್ಯಕರ್ತರು ಅಕ್ಕ-ತಂಗಿಯರು. ಇಡೀ ದೇಶ ನಮ್ಮ ಬಂಧು-ಬಳಗ. ಹಾಗಾಗಿ ಕವಲು ದಾರಿಯಲ್ಲಿರುವ ತಮ್ಮ, ತಂಗಿ, ಭಾವ ಜಾತಿ ರಾಜಕಾರಣ ಮಾಡಲು ಹೊರಟು ಶಿವಮೊಗ್ಗದಲ್ಲಿ ಟೆಂಟ್‌ ಹಾಕಿದ್ದಾರೆ. ಚುನಾವಣೆ ಬಳಿಗೆ ಬೆಂಗಳೂರಿಗೆ ತೆರಳುವವರಿಗೆ ಮಣೆ ಹಾಕಬೇಡಿ. ಎಸ್.ಬಂಗಾರಪ್ಪ ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ ಎಂದರು.

ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಮ್ಮ ಜೊತೆಗೂಡಿ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅಂಥವರನ್ನು ಬೆಂಬಲಿಸಬೇಕು. ತಾವು ಇಂದಿನಿಂದ ಚುನಾವಣೆ ನಡೆಯುವ ಮೇ ೭ರವರೆಗೂ ತಾಲೂಕಿನಲ್ಲಿಯೇ ಬೀಡುಬಿಡುತ್ತೇನೆ. ಬಿಜೆಪಿ ಗೆಲ್ಲುವವರೆಗೂ ವಿಶ್ರಮಿಸುವುದಿಲ್ಲ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮುಖಂಡರಾದ ಎಂ.ಡಿ.ಉಮೇಶ, ಗುರುಕುಮಾರ ಪಾಟೀಲ್, ಸುಧಾಕರ, ಸುಧಾ ಶ್ರೀನಿವಾಸ, ಪ್ರಶಾಂತ್, ವಿನಾಯಕ ತವನಂದಿ, ಆಶಿಕ್ ನಾಗಪ್ಪ ಮೊದಲಾದವರು ಹಾಜರಿದ್ದರು.ನಮೋ ವೇದಿಕೆ ಮುಖಂಡರ ಗೈರು

ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಕುಮಾರ ಬಂಗಾರಪ್ಪ ವಿರುದ್ಧ ರಚಿತವಾದ ನಮೋ ವೇದಿಕೆಯ ಕಾರ್ಯಕರ್ತರು ಕುಮಾರ ಬಂಗಾರಪ್ಪ ಅವರ ಇಂದಿನ ಸಭೆಗೆ ಗೈರು ಹಾಜರಾಗಿದ್ದು ಎದ್ದು ಕಂಡಿತು. ಈ ಹಿಂದೆ ನಡೆದ ಪೇಜ್ ಪ್ರಮುಖರ ಸಭೆಯಲ್ಲಿ ನಮೋ ವೇದಿಕೆ ಮುಖಂಡರು ಆಸೀನರಾಗಿದ್ದು, ಕುಮಾರ ಬಂಗಾರಪ್ಪ ಅವರನ್ನು ಮುಜುಗರಕ್ಕೀಡು ಮಾಡಿತ್ತು. ಆ ನಂತರ ಮತ್ತೆ ಮುನಿಸಿಕೊಂಡಿದ್ದರು. ಈ ಕಾರಣದಿಂದ ನಮೋ ವೇದಿಕೆ ಮುಖಂಡರನ್ನು ದೂರ ಇಡಲಾಗಿದೆ ಎಂದು ಹೇಳಲಾಗಿದ್ದು, ಈ ಮೂಲಕ ತಾಲೂಕು ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎನ್ನಲಾಗದು. ಇನ್ನೂ ಬೂದಿಮುಚ್ಚಿದ ಕೆಂಡವಾಗಿಯೇ ಇದೆ.