ಒತ್ತಡ ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ಮನರಂಜನೆ ಅಗತ್ಯ: ಕಲಾವಿದೆ ಮೈಸೂರು ಕಾವ್ಯ

| Published : Apr 28 2024, 01:28 AM IST

ಒತ್ತಡ ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ಮನರಂಜನೆ ಅಗತ್ಯ: ಕಲಾವಿದೆ ಮೈಸೂರು ಕಾವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿರುವ ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಶಾಲೆಯಲ್ಲಿ ನೃತ್ಯ, ಬಿಲ್ಲು ಬಿಡುವುದು, ಗಾಯನ, ಈಜು, ಕುಸ್ತಿ ಇತರೆ ತರಬೇತಿಗಳನ್ನು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳಲ್ಲಿ ನೀಡಲು ಸಾಧ್ಯವಾಗುವುದಿಲ್ಲ, ಆದರೆ, ಎರಡು ತಿಂಗಳ ರಜೆಯಲ್ಲಿ ನಡೆಯುವ ಬೇಸಿಗೆ ಶಿಬಿರದಲ್ಲಿ ಹಲವು ರೀತಿಯಲ್ಲಿ ತರಬೇತಿಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದೀರ್ಘಕಾಲದ ವ್ಯಾಸಂಗದಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಮನರಂಜನೆ ಮೂಲಕ ಒತ್ತಡ ಕಡಿಮೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಮಾತನಾಡುವ ಬೊಂಬೆ ಕಲಾವಿದೆ ಮೈಸೂರು ಕಾವ್ಯ ತಿಳಿಸಿದರು.

ಪಟ್ಟಣದಲ್ಲಿ ನ್ಯೂ ರೈನ್‌ಬೋ ಕಿಡ್ಜ್ ವರ್ಡ್ಸ್ ಹಾಗೂ ಜೆನ್‌ಸ್ಪೋಟ್ಸ್ ಮಾರ್ಷಲ್‌ ಆಟ್ಸ್ ಅಕಾಡೆಮಿ ವತಿಯಿಂದ ನಡೆಯುತ್ತಿರುವ 10 ನೇ ವರ್ಷದ ಬೇಸಿಗೆ ಶಿಬಿರದ ಅಂಗವಾಗಿ ನಡೆದ ‘ಮಾತಿನ ಬೊಂಬೆ ಸಾಂಸ್ಕೃತಿಕ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆ ಶಿಬಿರದಲ್ಲಿ ತರಬೇತಿ ಹೊಂದಿರುವ ಕಲಾವಿದರು ಹಾಗೂ ಹಲವು ಸಾಧಕರನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳ ಸಾಧನೆಗೂ ಸ್ಪೂರ್ತಿ ಸಿಕ್ಕಿದಂತಾಗುತ್ತದೆ ಎಂದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿರುವ ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಶಾಲೆಯಲ್ಲಿ ನೃತ್ಯ, ಬಿಲ್ಲು ಬಿಡುವುದು, ಗಾಯನ, ಈಜು, ಕುಸ್ತಿ ಇತರೆ ತರಬೇತಿಗಳನ್ನು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳಲ್ಲಿ ನೀಡಲು ಸಾಧ್ಯವಾಗುವುದಿಲ್ಲ, ಆದರೆ, ಎರಡು ತಿಂಗಳ ರಜೆಯಲ್ಲಿ ನಡೆಯುವ ಬೇಸಿಗೆ ಶಿಬಿರದಲ್ಲಿ ಹಲವು ರೀತಿಯಲ್ಲಿ ತರಬೇತಿಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಿದೆ ಎಂದು ಹೇಳಿದರು.

ಬೇಸಿಗೆ ರಜೆ ಬಂದ ಕೂಡಲೇ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿರುವ ಅಜ್ಜಿ ಮನೆಗೆ ಹೋಗಿ ಹಳ್ಳಿ ಆಟಗಳನ್ನು ಹಾಡಿ ಸಂತೋಷ ಪಡುತ್ತಿದ್ದರು. ಆದರೆ, ಪ್ರಸ್ತುತದಲ್ಲಿ ಆಧುನಿಕ ಯುಗಲ್ಲಿರುವ ವಿದ್ಯಾರ್ಥಿಗಳು, ರಜೆಯಲ್ಲಿ ಹೆಚ್ಚಿನ ಸಮಯವನ್ನು ಮೊಬೈಲ್ ನೋಡುವುದರಲ್ಲಿಯೇ ವ್ಯಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವಾರು ಶಾಲೆಯ ಮಕ್ಕಳು ಒಂದೆಡೆ ಸೇರುವುದರಿಂದ ಹಲವಾರು ವಿಷಯಗಳನ್ನು ವಿನಿಮಯ ಮಾಡಲು ಕೂಡ ಅನುಕೂಲವಾಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಶಿಬಿರಗಳು ಹೆಚ್ಚಾಗಿ ನಡೆಯಬೇಕೆಂದು ಸಲಹೆ ನೀಡಿದರು.

ಬೇಸಿಗೆ ಶಿಬಿರ ಆಯೋಜಿಸಿದ್ದ ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆ ಅಡಕವಾಗಿದೆ. ಶಾಲೆಗಳಲ್ಲಿ ಆಸಕ್ತಿಗೆ ಅನುಗುಣವಾಗಿ ತರಬೇತಿಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದರು.

ಬೇಸಿಗೆ ಶಿಬಿರದಲ್ಲಿ ಕರಾಟೆ, ಮಡಿಕೆ ತಯಾರಿಕೆ, ಈಜು, ಮಾಸ್ಕ್ ತಯಾರಿಕೆ, ನೃತ್ಯ, ಗಾಯನ, ಚಿತ್ರಕಲೆ ಮತ್ತು ಕರಕುಶಲ, ನಾಟಕ, ಭರತನಾಟ್ಯ, ಆತ್ಮರಕ್ಷಣೆ, ಬಿಲ್ಲುಗಾರಿಕೆ, ತಮಾಷೆ ಆಟಗಳ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಮನರಂಜನೆಗಾಗಿ ಮಾತನಾಡುವ ಬೊಂಬೆ ಸೇರಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮಾತನಾಡುವ ಬೆಂಬೆ ಕಾರ್ಯಕ್ರಮವನ್ನು ಕಾವ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭರತ್ಯನಾಟ್ಯ ಶಿಕ್ಷಕಿ ಸಿಂಚನ, ಮಹಾಲಕ್ಷ್ಮೀ, ಚೇತನ, ರೂಪ, ಸುಮಿತ್ರ ಸೇರಿದಂತೆ ಇತರರು ಇದ್ದರು.