ಸಕಾಲದಲ್ಲಿ ಸರ್ಕಾರಿ ಸೌಲಭ್ಯ ತಲುಪಿಸಲು ಶ್ರಮಿಸಿ

| Published : May 10 2024, 01:32 AM IST

ಸಕಾಲದಲ್ಲಿ ಸರ್ಕಾರಿ ಸೌಲಭ್ಯ ತಲುಪಿಸಲು ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿಳಂಬವಿಲ್ಲದೇ ದೊರಕಿಸಿಕೊಡುವಲ್ಲಿ ಆಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪೂರೆ ಹೊನ್ನಾಳಿಯಲ್ಲಿ ಸೂಚಿಸಿದ್ದಾರೆ.

- ಅಹವಾಲು ಸ್ವೀಕರಿಸಿ ಲೋಕಾಯುಕ್ತ ಎಸ್‌ಪಿ ಎಂ.ಎಸ್‌.ಕೌಲಾಪೂರೆ ಸೂಚನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿಳಂಬವಿಲ್ಲದೇ ದೊರಕಿಸಿಕೊಡುವಲ್ಲಿ ಆಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪೂರೆ ಸೂಚಿಸಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ತಾಲೂಕಿನ ಬಸವನಹಳ್ಳಿ ಗ್ರಾಮದ ಯಶೋಧಮ್ಮ ಕೋಂ ಆನಂದಪ್ಪ ಅವರು ಅತಿವೃಷ್ಟಿಯಿಂದಾಗಿ ಬಿದ್ದುಹೋದ ಮನೆ ನಿರ್ಮಾಣದಲ್ಲಿ ತಮಗೆ ಆಗುತ್ತಿರುವ ಸಮಸ್ಯೆ ಕುರಿತು ಲೋಕಾಯುಕ್ತರ ಗಮನ ಸೆಳೆದರು.

ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ ಅವರು, 2022-23ರಲ್ಲಿ ಅತಿವೃಷ್ಠಿಯಿಂದಾಗಿ ಮನೆ ಬಿದ್ದುಹೋಗಿದೆ. ತಮ್ಮ ಗಂಡನ ಜಮೀನಲ್ಲಿ ಮನೆ ಕಟ್ಟಿಕೊಳ್ಳಲು ಮುಂದಾಗಿ ಸರ್ಕಾರದ ಪರಿಹಾರ ಗ್ರ್ಯಾಂಟ್‌ ಮೊದಲ ಕಂತು ಕೂಡ ಬಿಡುಗಡೆಯಾಗಿದೆ. ಇದರಲ್ಲಿ ಫೌಂಡೇಷನ್ ಹಾಕಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಆದರೆ, ಮನೆ ಗ್ರ್ಯಾಂಟ್‌ನ ಮುಂದಿನ ಕಂತುಗಳನ್ನು ಕಂದಾಯ ಇಲಾಖೆಯಿಂದ ತಡೆಹಿಡಿಯಲಾಗಿದೆ. ಇದರಿಂದ ಮನೆ ಪೂರ್ಣಗೊಳಿಸಲಾಗುತ್ತಿಲ್ಲ ಎಂದು ಲೋಕಾಯುಕ್ತ ಎಸ್‌ಪಿ ಕೌಲಾಪೊರೆ ಅವರಿಗೆ ಸಮಸ್ಯೆ ವಿವರಿಸಿದರು.

ಮನವಿ ಪರಿಶೀಲಿಸಿದ ಲೋಕಾಯುಕ್ತರು, ಆರಂಭದಲ್ಲಿ ಬೇರೆ ಜಾಗದಲ್ಲಿ ಮನೆ ಕಟ್ಟಿದರೆ ಗ್ರ್ಯಾಂಟ್ ಕೂಡಲು ಬರುವುದಿಲ್ಲ ಎಂದು ಫಲಾನುಭವಿಗಳಿಗೆ ಅಧಿಕಾರಿಗಳು ಮನವರಿಕೆ ಮಾಡಬೇಕಿತ್ತು. ಆದರೆ, ಹಾಗೇ ಮಾಡದೇ ಗ್ರ್ಯಾಂಟ್‌ನ ಕೆಲ ಕಂತುಗಳನ್ನು ಬಿಡುಗಡೆ ಮಾಡಿ, ಇದೀಗ ಬರುವುದಿಲ್ಲ ಎಂದು ಹೇಳಿದರೆ ಮನೆ ನಿರ್ಮಿಸಿಕೊಳ್ಳುವುದು ಹೇಗೆ? ಮೊದಲೇ ಅಧಿಕಾರಿಗಳು ಹೇಳಬೇಕಿತ್ತು. ಈ ಬಗ್ಗೆ ಅಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಆದಷ್ಟು ಬಾಕಿ ಉಳಿದಿರುವ ಗ್ರಾಂಟ್ ಕಂತುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು. ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಇನ್ನೂ 15 ದಿನ ಕಾಲಾವಕಾಶ ನೀಡಿದರು.

ಅನಂತರ ಅರಣ್ಯ ಇಲಾಖೆ ಅಧಿಕಾರಿಗಳ ಕುರಿತು ಮಾತನಾಡಿ, ಭೀಕರ ಬರಗಾಲ ಬಿಸಿಲು ಇರುವ ಕಾರಣ ಬಹಳಷ್ಟು ಪ್ರಾಣಿ, ಪಕ್ಷಿಗಳಿಗೆ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ ಈ ಕಾರಣಕ್ಕೆ ಕೆಲವೊಮ್ಮೆ ಅವು ಜನವಸತಿ ಪ್ರದೇಶಗಳ ಕಡೆ ನುಗ್ಗುವ ಸಂಭವ ಇರುತ್ತದೆ. ಆದಷ್ಟು ಆರಣ್ಯ ಇಲಾಖೆಯವರು ಕಾಡುಗಳಲ್ಲಿ ನೀರಿನ ಹೊಂಡಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರು ಸಿಗುವಂತೆ ಮಾಡಬೇಕು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಅವರಿಗೆ ಪಟ್ಟಣದಲ್ಲಿ ಸ್ವಚ್ಛತೆಗೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿ, ಕೊರತೆ ಬಾರದಂತೆ ಕ್ರಮ ವಹಿಸುವಂತೆ ತಿಳಿಸಿದರು.

ಆರೋಗ್ಯ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳಿಗೂ ಕೂಡ ಜನ-ಜಾನುವಾರು ಆರೋಗ್ಯ ಸಂರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಸಿಡಿಪಿಒ ಜ್ಯೋತಿ ಅವರಿಗೆ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟದ ಬಗ್ಗೆ ಸದಾ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಶಾಲೆಗಳಿಗೆ ನೂರಾರು ವರ್ಷಗಳ ಹಿಂದು ದಾನಿಗಳು ಭೂದಾನ ಮಾಡಿದ್ದು, ಇಂತಹ ಪ್ರಕರಣಗಳಲ್ಲಿ ಕೂಡ ಬಿಇಒ ಮತ್ತು ಕಂದಾಯ ಇಲಾಖೆಗಳು ಸಮಗ್ರ ವರದಿ ಪಡೆದು, ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಲೋಕಾಯುಕ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಲವಾರು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ಎಸ್.ಕೆ. ಇನ್‌ಸ್ಪೆಕ್ಟರ್‌ಗಳಾದ ಮಧುಸೂಧನ್, ಪ್ರಭು ಬಿ. ಸುರೇನ, ರಾಷ್ಟ್ರಪತಿ, ಉಪವಿಭಾಗಾಧಿಕಾರಿ ವಿ.ಅಭಿಷೇಕ್, ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗೆಡೆ. ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ತಾಪಂ ಇಒ ಸುಮಾ ಹಾಗೂ ರಾಘವೇಂದ್ರ ಇತರರು ಇದ್ದರು.

- - - -9ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಎಸ್‌ಪಿ, ಎಂ.ಎಸ್, ಕೌಲಾಪೊರೆ ಸಾರ್ವಜನಿಕರ ಅಹವಾಲು ಸ್ವೀಕಾರ-ಚರ್ಚೆ ಕಾರ್ಯಕ್ರಮ ನಡೆಸಿದರು. ಎಸಿ, ತಹಸೀಲ್ದಾರ್‌ಗಳು, ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.