ಜೆಡಿಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶ

| Published : May 10 2024, 01:32 AM IST

ಸಾರಾಂಶ

ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣರವರ ಬಗ್ಗೆ ಅವಹೇಳನಕಾರಿ ಪೋಸ್ಟಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟಿರುವ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಜೆಡಿಎಸ್ ನ ಮಾಧ್ಯಮ ವಕ್ತಾರ ವಿ.ನರಸಿಂಹಮೂರ್ತಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣರವರ ಬಗ್ಗೆ ಅವಹೇಳನಕಾರಿ ಪೋಸ್ಟಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟಿರುವ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಜೆಡಿಎಸ್ ನ ಮಾಧ್ಯಮ ವಕ್ತಾರ ವಿ.ನರಸಿಂಹಮೂರ್ತಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಶಾಸಕರ ತೇಜೋವಧೆ ಮಾಡುವಂತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರಾದ ಎಚ್.ಎಂ.ಪುರುಷೋತ್ತಮ ಮತ್ತು ಶ್ರೀನಿವಾಸ್ ರಾಮನಗರ ವಿರುದ್ಧ ದೂರು ದಾಖಲಿಸಿದ್ದಾರೆ.

ಪೊಲೀಸರು - ಮುಖಂಡರ ಮಾತಿನ ಚಕಮಕಿ:

ಜೆಡಿಎಸ್ ನ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ ವಿಷಯ ತಿಳಿದು ಗುರುವಾರ ಬೆಳಗ್ಗೆ ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿದ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು, ಡಿ.ಕೆ.ಸಹೋದರರು, ಶಾಸಕರ ಅಣತಿಯಂತೆ ರಾಮನಗರ ಪೊಲೀಸರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳಬಾರದು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೇಳಿದರು. ಈ ವೇಳೆ ಸಿಇಎನ್ ಠಾಣೆಯಲ್ಲಿ ಕೆಲ ಕಾಲ ಪೊಲೀಸರು ಮತ್ತು ಮುಖಂಡರು ನಡುವೆ ಮಾತಿನ ಚಕಮಕಿ ನಡೆಯಿತು.

ಅಲ್ಲದೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರಾದ ಎಚ್.ಎಂ.ಪುರುಷೋತ್ತಮ ಮತ್ತು ಶ್ರೀನಿವಾಸ್ ರಾಮನಗರ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನು ಹಾಕಾಲಾಗಿದೆ ಎಂದು ದೂರು ಸಲ್ಲಿಸಿ ಶೀಘ್ರ ಆರೋಪಿಗಳ ಬಂಧನ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಲೋಕಸಭೆ ಚುನಾವಣೆ ಮತದಾನದ ನಂತರ ಡಿ.ಕೆ.ಸಹೋದರರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. ಇದರಿಂದ ಹತಾಶರಾಗಿ ರಾಮನಗರದಲ್ಲಿ ದ್ವೇಷದ ರಾಜಕೀಯ ಪ್ರಾರಂಭಿಸಿದ್ದಾರೆ. ಇದರ ಪರಿಣಾಮ ರಾಜಕೀಯ ಪ್ರೇರಿತವಾಗಿ ಸುಳ್ಳು ಮೊಕ್ಕದಮ್ಮೆ ಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ರಾತ್ರೋ ರಾತ್ರಿ ಬಂಧಿಸಿದ್ದಾರೆ. ಯಾವುದೇ ಆಧಾರವಿಲ್ಲದ ಕೇಸ್ ನಲ್ಲಿ ಸೂಕ್ತ ತನಿಖೆಯನ್ನು ನಡೆಸದೆ ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿ ಬಂಧಿಸುತ್ತಿದ್ದಾರೆ ಎಂದು ದೂರಿದರು.

ಎಸ್ ಐಟಿ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಆಶ್ಲೀಲ ವಿಡಿಯೋ ಬಿಡುಗಡೆ ಮಾಡಿದವನ್ನು ಬಂಧಿಸದೆ ಸುಮ್ಮನ್ನಿದ್ದಾರೆ. ಆದರೆ ರಾಮನಗರದ ಪೊಲೀಸರು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಸ್ ಐಟಿಗೆ ರಾಮನಗರ ಪೊಲೀಸರನ್ನು ಬಳಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ರಾಮನಗರದ ಎಸ್ಪಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರುವುದು ಉತ್ತಮ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಿತ್ತು. ಕಾಂಗ್ರೆಸ್ ನಾಯಕರಿಗಿಂತ ತುಂಬಾ ಉತ್ಸಾಹದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಅವರು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮಾಧ್ಯಮ ವಕ್ತಾರ ವಿ.ನರಸಿಂಹಮೂರ್ತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಮನಗರದ ಎಸ್ಪಿ ಮತ್ತು ಡಿಸಿ ಅವರು ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ - ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ. ಇದು ನಿಲ್ಲದಿದ್ದರೆ ಶೀಘ್ರದಲ್ಲೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಈ ಕೂಡಲೇ ಡಿಸಿ ಮತ್ತು ಎಸ್ಪಿ ಅವರನ್ನು ವರ್ಗಾವಣೆ ಮಾಡಬೇಕು. ಜೆಡಿಎಸ್ ಕಾರ್ಯಕರ್ತರು ಸೈನಿಕರಿದ್ದಂತೆ, ಇಂತಹ ಕುತಂತ್ರಕ್ಕೆಲ್ಲ ಜಗ್ಗುವುದಿಲ್ಲ. ಒಂದು ದಿನ ಅಲ್ಲ, ಒಂದು ವರ್ಷ ಬೇಕಾದರು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಇದು ರಾಮನಗರ, ಕನಕಪುರ ಅಲ್ಲ. ಅಧಿಕಾರ ಶಾಶ್ವತ ಅಲ್ಲ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ಮುಖಂಡರಾದ ಸಬ್ಬಕೆರೆ ಶಿವಲಿಂಗಪ್ಪ, ನಗರಸಭೆ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಎ.ರವಿ, ಗೂಳಿ ಕುಮಾರ್, ಕೃಷ್ಣ, ರಮೇಶ್, ಅಂಜನಾಪುರ ವಾಸು, ಮೋಹನ್, ಜಯ್ ಕುಮಾರ್, ಯೋಗೇಶ್ ಮತ್ತಿತರರು ಹಾಜರಿದ್ದರು.

9ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳೊಂದಿಗೆ ಜೆಡಿಎಸ್ ಮುಖಂಡರು ಮಾತಿನ ಚಕಮಕಿಯಲ್ಲಿ ತೊಡಗಿರುವುದು

2.ರಾಮನಗರ ಸಿಇಎನ್ ಪೊಲೀಸ್ ಠಾಣೆ ಎದುರು ಜೆಡಿಎಸ್ - ಬಿಜೆಪಿ ಮುಖಂಡರು ಜಮಾಯಿಸಿರುವುದು.