ಎಸ್ಸೆಸ್ಸೆಲ್ಸಿ, ಹಾವೇರಿ ಜಿಲ್ಲೆಗೆ ಶೇ. 78ರಷ್ಟು ಫಲಿತಾಂಶ

| Published : May 10 2024, 01:33 AM IST

ಎಸ್ಸೆಸ್ಸೆಲ್ಸಿ, ಹಾವೇರಿ ಜಿಲ್ಲೆಗೆ ಶೇ. 78ರಷ್ಟು ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ. ೭೮.೩೪ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದಲ್ಲಿ ೧೫ನೇ ಸ್ಥಾನ ಪಡೆದಿದೆ.

ಹಾವೇರಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ. ೭೮.೩೪ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದಲ್ಲಿ ೧೫ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಜಿಲ್ಲೆಗೆ ಶೇ. ೮೯.೧೧ರಷ್ಟು ಫಲಿತಾಂಶ ಬಂದಿದ್ದರೂ ರಾಜ್ಯಮಟ್ಟದಲ್ಲಿ ಜಿಲ್ಲೆ ೨೨ನೇ ಸ್ಥಾನ ಸಿಕ್ಕಿತ್ತು. ಪ್ರಸಕ್ತ ವರ್ಷ ಶೇಕಡಾ ಫಲಿತಾಂಶದಲ್ಲಿ ಇಳಿಕೆಯಾದರೂ ರಾಜ್ಯಮಟ್ಟದ ರ‍್ಯಾಂಕಿಂಗ್‌ನಲ್ಲಿ ಜಿಲ್ಲೆ ೧೫ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಫಲಿತಾಂಶ ಸಮಾಧಾನಕರವಾಗಿದೆ.

ಜಿಲ್ಲೆಯಲ್ಲಿ ೨೧,೯೨೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧೭,೧೭೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾವೇರಿ ನಗರದ ಸೇಂಟ್ ಆನ್ಸ್ ಪ್ರೌಢಶಾಲೆಯ ಸಿಂಚನಾ ಓಲೇಕಾರ ೬೨೦ ಅಂಕ (ಶೇ. ೯೯.೨೦) ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಡ ಮಾಧ್ಯಮದಲ್ಲಿ ೧೫,೩೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧೧,೫೯೦ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೭೫.೩೩ರಷ್ಟು ಫಲಿತಾಂಶ ಬಂದಿದೆ.

ಆಂಗ್ಲ ಮಾಧ್ಯಮದಲ್ಲಿ ೪,೬೨೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೪,೧೯೨ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೯೦.೫೮ರಷ್ಟು ಫಲಿತಾಂಶ ದಾಖಲಾಗಿದೆ.ಉರ್ದು ಮಾಧ್ಯಮದಲ್ಲಿ ೧,೯೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧,೩೯೩ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. ೭೨.೯೭ರಷ್ಟು ಫಲಿತಾಂಶ ಬಂದಿದೆ.ನಗರ ಪ್ರದೇಶದ ೬,೫೬೮ ವಿದ್ಯಾರ್ಥಿಗಳಲ್ಲಿ ೪,೮೯೫ ವಿದ್ಯಾರ್ಥಿಗಳ ಉತ್ತೀರ್ಣರಾಗಿದ್ದು, ಶೇ. ೭೪.೫೩ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದ ೧೫,೩೫೫ ವಿದ್ಯಾರ್ಥಿಗಳ ಪೈಕಿ ೧೨,೨೮೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. ೭೯.೯೭ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯ ೫೧ ಪ್ರೌಢಶಾಲೆಗಳು ಶೇಕಡ ನೂರರಷ್ಟು ಫಲಿತಾಂಶ ಪಡೆದಿವೆ.

ಮಾಧ್ಯಮವಾರು ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಬ್ಯಾಡಗಿಯ ಬಿಇಎಸ್ ಪ್ರೌಢಶಾಲೆಯ ಹೇಮಂತ ಛತ್ರದ ೬೧೭ ಅಂಕ, ಮೋಟೆಬೆನ್ನೂರಿನ ವಿ.ಬಿ. ಕಳಸೂರಮಠ ಪ್ರೌಢಶಾಲೆಯ ತರುಣ ಹಿರೇಮಠ ೬೧೭ ಅಂಕ ಪಡೆದು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ಬಸವನಾಳದ ಸರ್ಕಾರಿ ಪ್ರೌಢಶಾಲೆಯ ಅರುಂಧತಿ ಅಮತೇನವರ ೬೧೩ ೬೧೦ ಅಂಕ ಪಡೆದಿದ್ದಾಳೆ.

ಆಂಗ್ಲ ಮಾಧ್ಯಮ: ಹಾವೇರಿ ಸೇಂಟ್ ಆನ್ಸ್ ಪ್ರೌಢಶಾಲೆಯ ಸಿಂಚನಾ ಓಲೇಕಾರ ೬೨೦ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಶಿಗ್ಗಾವಿಯ ಜೆ.ಎಂ.ಜೆ. ಪ್ರೌಢಶಾಲೆಯ ಅಮೀತ್ ಕೆಲಗೇರಿ ೬೧೯ ಅಂಕ, ಚಿಕ್ಕೇರೂರ ಎಂ.ಡಿ.ಆರ್.ಎಸ್. ಪ್ರೌಢ ಶಾಲೆಯ ಸರ್ವಮಂಗಳ ಸಾವಕಾರ ೬೧೯ ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅಕ್ಕಿಆಲೂರ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ನೇಹಾ ಹಳಿಯಾಳ ೬೧೮ ಅಂಕ, ಹಂಸಭಾವಿ ಡಾ. ಬಸವರಾಜ ಕೆರೂಡಿ ಪ್ರೌಢಶಾಲೆಯ ಗುಣಶ್ರೀ ದೇಸಾಯಿ ೬೧೮ ಅಂಕ ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.ಉರ್ದು ಮಾಧ್ಯಮ: ಹಾನಗಲ್ಲ ತಾಲೂಕಿನ ಹಜರತ್ ಮಖಬೂಲಿಯಾ ಉರ್ದು ಪ್ರೌಢಶಾಲೆಯ ಬೀಬಿ ಸಕೀನಾ ಸುಂಕದ ೬೧೦ ಅಂಕ, ಹಾವೇರಿಯ ಸರ್ಕಾರಿ ಉರ್ದು ಪ್ರೌಢಶಾಲೆಯ ಉಮ್ಮೆ ಹಿತ್‌ಜಾ ದೊಡ್ಮನಿ ೬೦೯ ಅಂಕ, ಹಾವೇರಿ ತಾಲೂಕಿನ ಕನವಳ್ಳಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸಬ್ರೀನ್ ಕಬ್ಬೂರ ೬೦೪ ಅಂಕ ಪಡೆದು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಬ್ಯಾಡಗಿ ಫಸ್ಟ್, ಹಿರೇಕೆರೂರು ಲಾಸ್ಟ್: ಬ್ಯಾಡಗಿ ತಾಲೂಕು ಜಿಲ್ಲೆಗೆ ಮೊದಲ ಸ್ಥಾನ ಹಾಗೂ ಹಿರೇಕೆರೂರು ತಾಲೂಕು ಕೊನೆಯ ಸ್ಥಾನ ಪಡೆದಿದೆ. ಬ್ಯಾಡಗಿ ಶೇ. ೮೯.೫೭, ಸವಣೂರು ಶೇ. ೮೩.೩೪, ರಾಣಿಬೆನ್ನೂರು ಶೇ. ೮೦.೭೮, ಹಾನಗಲ್ಲ ಶೇ. ೮೦.೪೦, ಹಾವೇರಿ ಶೇ. ೭೭.೬೦, ಶಿಗ್ಗಾಂವಿ ಶೇ. ೭೬.೪೧, ಹಿರೇಕೆರೂರು ಶೇ. ೬೩.೯೭ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಈ ಸಲದ ಫಲಿತಾಂಶ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಕಳೆದ ವರ್ಷ 22 ಸ್ಥಾನದಲ್ಲಿದ್ದ ಜಿಲ್ಲೆ 15ನೇ ಸ್ಥಾನಕ್ಕೆ ಬಂದಿದೆ. ಮಕ್ಕಳಿಗೆ ಕ್ವಿಜ್‌, ಸರಣಿ ಪರೀಕ್ಷೆ ಸೇರಿದಂತೆ ಅಗತ್ಯ ತಯಾರಿ ನಡೆಸಿದ್ದರಿಂದ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ತಜ್ಞರನ್ನು ಕರೆಸಿ ಶಿಕ್ಷಕರಿಗೂ ಕಾರ್ಯಾಗಾರ ಮಾಡಿಸಿದ್ದೆವು. ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದ್ದಾರೆ.