ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಜನತಾ ದರ್ಶನ: ಟಿ.ಡಿ.ರಾಜೇಗೌಡ

| Published : Oct 08 2023, 12:01 AM IST

ಸಾರಾಂಶ

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಜನತಾ ದರ್ಶನ: ಟಿ.ಡಿ.ರಾಜೇಗೌಡ
ಸಮಸ್ಯೆಗಳ ತೆರೆದಿಟ್ಟ ಗ್ರಾಮಸ್ಥರು । ಪರಿಹಾರಕ್ಕೆ ಶಾಸಕ ಸೂಚನೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಸರ್ಕಾರ ಕಡ್ಡಾಯವಾಗಿ ಜನತಾ ದರ್ಶನ ನಡೆಸುವಂತೆ ಸೂಚಿಸಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು. ಪಟ್ಟಣದ ಬಿ.ಕಣಬೂರು ಗ್ರಾಪಂ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ 6 ಕಡೆಗಳಲ್ಲಿ ಇಂದು ಜನತಾ ದರ್ಶನವನ್ನು ಏಕಕಾಲಕ್ಕೆ ನಡೆಸುತ್ತಿದ್ದು, ಗ್ರಾಮಗಳ ವಿವಿಧ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಸಮಸ್ಯೆಗಳ ಕುರಿತು ಇಲಾಖಾವಾರು ಚರ್ಚೆ ನಡೆಸಲು ಜನತಾ ದರ್ಶನ ಕಾರ್ಯಕ್ರಮ ಪೂರಕ. ಈ ಹಿಂದೆ ಅಧಿಕಾರಿಗಳಿಗೆ ಗೊಂದಲವಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರವೇ ಬೇರೆ ಕ್ಷೇತ್ರದ ಶಾಸಕರೇ ಬೇರೆ ಪಕ್ಷದವರಾಗಿದ್ದರು. ಆದರೆ ಇದೀಗ ಸರ್ಕಾರ, ಶಾಸಕರು ಎಲ್ಲರೂ ಒಂದೆ. ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳ ಬಗ್ಗೆ ಶಾಸಕರು ನೀಡಿದ ಸೂಚನೆಯಂತೆ ಅಧಿಕಾರಿಗಳು ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ಜನರ ಸೇವೆ ಮಾಡಲೆಂದೇ ಅಧಿಕಾರಿಗಳಿಗೆ ಸರ್ಕಾರ ಸಂಬಳ ನೀಡುತ್ತಿದೆ. ಎಲ್ಲಾ ಭಾಗಗಳಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು. ಈ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು. ಸರ್ಕಾರ ಈ ಬಾರಿ ಉಚಿತ ಭಾಗ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು, ಅಧಿಕಾರಿಗಳು ಸಹ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕೆಲವು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿಲ್ಲ. ಮಳೆ ಕಡಿಮೆಯಾದ ಬಳಿಕ ಕ್ಷೇತ್ರಾದ್ಯಂತ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು. ರಿಪೇರಿ ಮಾಡಲು ಸಾಧ್ಯ ವಾಗದ್ದನ್ನು ಹೊಸದಾಗಿಯೇ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜನತಾ ದರ್ಶನದಲ್ಲಿ ಪ್ರಸ್ತಾಪವಾದ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು. ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆ, ಕ್ರೀಡಾಂಗಣ ನಿರ್ಮಾಣ, ಕೆಪಿಎಸ್ ಶಾಲೆ ಆರಂಭಕ್ಕೆ ಕ್ರಮವಹಿಸಲಾಗುವುದು.ಒಬ್ಬ ಸದಸ್ಯರಿರುವ ಪಡಿತರ ಚೀಟಿದಾರರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುತ್ತಿರುವ ದೂರು ಬಂದಿದ್ದು, ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಬಾಳೆಹೊನ್ನೂರಿನಲ್ಲಿ ಹೆಚ್ಚಿರು ಬಿಡಾಡಿ ದನಗಳನ್ನು ಕೆಲವೇ ದಿನಗಳಲ್ಲಿ ಪೊಲೀಸರ ಸಹಾಯ ಪಡೆದು ಗೋಶಾಲೆಗೆ ಬಿಡಲಾಗುವುದು. ಹೆಚ್ಚಿರುವ ಬೀದಿ ನಾಯಿಗಳ ಹಾವಳಿ ನಿಯಮತ್ರಣಕ್ಕೆ ಪಶು ಇಲಾಖೆ, ಸ್ಥಳೀಯ ಗ್ರಾಪಂ ಒಗ್ಗೂಡಿ ಕ್ರಮವಹಿಸಲಾಗುವುದು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದವರಿಗೆ ಇ-ಸ್ವತ್ತು ಲಭಿಸುವಂತೆ ಮಾಡಲು ಸೂಚಿಸಲಾಗಿದೆ ಎಂದರು. .ಎನ್.ಆರ್.ಪುರ ತಹಸೀಲ್ದಾರ್ ತನುಜಾ ಸವದತ್ತಿ ಮಾತನಾಡಿ, ಮುಖ್ಯಮಂತ್ರಿಗಳ ಆದೇಶದಂತೆ ಜಿಲ್ಲಾಧಿಕಾರಿಗಳು 15 ದಿನಕ್ಕೊಮ್ಮೆ ಪ್ರತೀ ತಾಲೂಕಿನಲ್ಲಿ ಜನತಾ ದರ್ಶನ ನಡೆಸಲಿದ್ದಾರೆ. ಜನತಾ ದರ್ಶನದಲ್ಲಿ ಸಂಧ್ಯಾ ಸುರಕ್ಷಾ, ನಿರ್ಗತಿಕರ ವೇತನ, ಮನಸ್ವಿನಿ, ಅಂಗವಿಕಲ, ಮೈತ್ರಿ ಮಾಶಾಸನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲಾಗುವುದು. ತಾಪಂ ಇಒ ನವೀನ್‌ಕುಮಾರ್, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಉಪಾಧ್ಯಕ್ಷೆ ರಂಜಿತಾ, ತಾಪಂ ಉಪ ನಿರ್ದೇಶಕ ಮನೀಶ್, ಉಪ ತಹಸೀಲ್ದಾರ್ ನಾಗೇಂದ್ರ, ಆರ್‌ಎಫ್‌ ಒ ಸಂದೀಪ್, ಬಿಇಒ ಮಂಜುನಾಥ್, ಸಿಡಿಪಿಒ ದ್ರಾಕ್ಷಾಯಣಮ್ಮ, ವಿಎ ಸಮೀಕ್ಷಾ, ಸರಿತಾ, ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್, ಡಾ.ರಾಕೇಶ್, ಡಾ.ಪ್ರವೀಣ್, ಧನಂಜಯ ಮೇಧೂರ್ ಮತ್ತಿತರರು ಇದ್ದರು. ೦೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂನಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಶಾಸಕ ಟಿ.ಡಿ. ರಾಜೇಗೌಡ ಉದ್ಘಾಟಿಸಿದರು. ತನುಜಾ ಸವದತ್ತಿ, ನವೀನ್‌ಕುಮಾರ್, ಸದಾಶಿವ ಆಚಾರ್ಯ, ರಂಜಿತಾ ಇದ್ದರು.