ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು: ಎಚ್‌.ಡಿ. ತಮ್ಮಯ್ಯ

| Published : Oct 08 2023, 12:01 AM IST

ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು: ಎಚ್‌.ಡಿ. ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು: ಎಚ್‌.ಡಿ. ತಮ್ಮಯ್ಯ
ಕಳಸಾಪುರ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ತಾಲೂಕು ಮಟ್ಟದ ಜನತಾದರ್ಶನ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಅವರ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕೆಂಬುದು ಜನತಾ ದರ್ಶನದ ಉದ್ದೇಶ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು. ತಾಲೂಕಿನ ಲಕ್ಯಾ ಹೋಬಳಿ ಕಳಸಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನತಾದರ್ಶನ ಉದ್ಘಾಟಿಸಿ ಮಾತಾನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಳಿತದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು. ಮನೆ ಬಾಗಿಲಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಉದ್ಧೇಶದಿಂದ ರಾಜ್ಯ ಸರ್ಕಾರ ಇಂತಹ ಯೋಜನೆ ಜಾರಿಗೆ ತಂದಿದ್ದು, ಅಧಿಕಾರಿಗಳು ತಮ್ಮ ವೃತ್ತಿಯನ್ನು ಶಿಸ್ತು ಮತ್ತು ಪ್ರೀತಿಯಿಂದ ಮಾಡಬೇಕು. ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ ನ್ಯಾಯ ಕೊಡಲು ಸಾಧ್ಯ, ಸಾಮಾನ್ಯ ಜನರಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪಬೇಕು ಎಂಬ ಕಾರಣಕ್ಕೆಕಾಂಗ್ರೆಸ್ ಸರ್ಕಾರ 5 ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. ತಾಲೂಕು ಜನತಾ ದರ್ಶನದಡಿ 60 ವರ್ಷ ಮೇಲ್ಪಟ್ಟ ಪಿಂಚಣಿ, ವಿಧವಾ ವೇತನ ಮತ್ತು ಖಾತೆ ಬದಲಾವಣೆಗೆ ಬಡವರು ಕಚೇರಿಗೆ ಅಲೆಯಬಾರದೆಂದು ಈ ಸಮಸ್ಯೆಗಳಿಗೆ ಬಂದ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ ನ್ಯಾಯ ಕೊಡಿಸಲಾಗುವುದು, ಜನರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಜನತಾದರ್ಶನ ಆಯೋಜಿಸಿದ್ದ ಅಂಬೇಡ್ಕರ್ ಭವನ ಚಿಕ್ಕದಾಗಿದ್ದ ಹಿನ್ನೆಲೆಯಲ್ಲಿ ಜನ ಹೆಚ್ಚಾಗಿ ಹೊರ ನಿಲ್ಲಬೇಕಾಯಿತು. ಇದರಿಂದ ಗರಂ ಆದ ಶಾಸಕರು ಹೊರಗಡೆ ಶಾಮಿಯಾನ ಹಾಕಿ ಆಯೋಜನೆ ಮಾಡಬಾರದೇ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ಯಾವುದೇ ಲೋಪ ಆದಲ್ಲಿ ಕ್ರಮ ಎದುರಿಸ ಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಜನಸ್ನೇಹಿ ಹಾಗೂ ಶಾಂತಿ ನೆಮ್ಮದಿ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಸರಕಾರಿ ಕಚೇರಿಯಲ್ಲಿ ಜನಸಾಮಾನ್ಯರಿಗೆ ಅಧಿಕಾರಿಗಳು ಅಗೌರವ ತೋರಿದರೆ ನನಗೆ ತಿಳಿಸಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಕಳಾಪುರದಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್ ನಿಂದ ಜನಜೀವನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನು 15 ವರ್ಷ ಕಲ್ಲುಗಣಿಗಾರಿಕೆ ಮುಂದುವರಿದರೆ ಇಡೀ ಕಳಸಾಪುರವೇ ಸ್ಮಶಾನವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಕಳಸಾಪುರ ಪಶು ಆಸ್ಪತ್ರೆಯಲ್ಲಿ ಪಶುವೈದ್ಯರನ್ನೇ ನೋಡಿಲ್ಲ. ದನಕರುಗಳು ಈ ಭಾಗದಲ್ಲಿ ಹೆಚ್ಚಿದ್ದು, ಪ್ರತಿ ದಿನ ಇಲ್ಲೇ ಇದ್ದು ಔಷಧಿ, ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಎಂದು ರತ್ನಕುಮಾರ್ ಮನವಿ ಮಾಡಿದರು. ಕೊಬ್ಬರಿ ಬೆಲೆ ಪಾತಾಳ ಕಂಡಿದೆ. ಈ ಸಂದರ್ಭದಲ್ಲಿ ಸರಕಾರದಿಂದ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸ ಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರ ನೆರವಿಗೆ ಬರಬೇಕು ಎಂದು ರೈತ ಗಣೇಶ್ ಹೇಳಿದರು. ಕಂದಾಯ ಭೂಮಿ ಸಮಸ್ಯೆ, ಮನೆ ನಿವೇಶನ ಮತ್ತಿತರೆ ಅನೇಕ ಸಮಸ್ಯೆಗಳು ಜನತಾದರ್ಶನದಲ್ಲಿ ಕೇಳಿ ಬಂದವು. ತಹಸೀಲ್ದಾರ್ ಡಾ. ಸುಮಂತ್ ಮಾತನಾಡಿ, ಜನ ಸಾಮಾನ್ಯರು ತಮ್ಮ ಸಮಸ್ಯೆ ಪರಿಹಾರಕ್ಕೆ ಪ್ರತಿ ಬಾರಿ ಜಿಲ್ಲೆಗೆ ಬರಲು ಸಾಧ್ಯವಾಗದ ಕಾರಣ ಅವರ ಕುಂದು ಕೊರತೆ ತಿಳಿಯಲು ಹೋಬಳಿ ಮತ್ತು ತಾಲೂಕು ಮಟ್ಟದ ಜನತಾದರ್ಶನವನ್ನು ಮುಖ್ಯಮಂತ್ರಿಗಳ ನಿರ್ದೇಶನದಂತೆ ಶಾಸಕರ ಉಪಸ್ಥಿತಿಯಲ್ಲಿ ಆಯೋಜನೆ ಮಾಡಲಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ತಿಳಿಸ ಬಹುದಾಗಿದ್ದು, ಶೀಘ್ರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್‌, ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಗೌಡ, ಬಿಳೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಗೋಪಿ, ಗ್ರಾಮದ ಮುಖಂಡರಾದ ಕೆಂಗೇಗೌಡ, ಅಮೀರ್, ಚಂದ್ರೇಗೌಡ ಉಪಸ್ಥಿತರಿದ್ದರು. 7 ಕೆಸಿಕೆಎಂ 1 ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಶನಿವಾರ ಆಯೋಜನೆ ಮಾಡಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿದರು. ತಹಸೀಲ್ದಾರ್‌ ಡಾ. ಸುಮಂತ್‌, ತಾಪಂ ಇಒ ತಾರಾನಾಥ್‌ ಇದ್ದರು.