ಸಿದ್ದರಾಮಯ್ಯಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಬಿಡುತ್ತಿಲ್ಲ

| Published : Oct 08 2023, 12:01 AM IST

ಸಿದ್ದರಾಮಯ್ಯಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಬಿಡುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಸರ್ಕಾರ ಅಧಿಕಾರಕ್ಕೆ ಬಂದು ಹಲವಾರು ತಿಂಗಳುಗಳೇ ಕಳೆದಿದ್ದರೂ ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ಏನೇ ಮಾತನಾಡಿದರೂ ಗ್ಯಾರಂಟಿ ಬಗ್ಗೆಯೇ ಮಾತನಾಡುತ್ತಾರೆ.

ಗದಗ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೂತನ ಸರ್ಕಾರದಲ್ಲಿ ಇಂಡಿಪೆಂಡೆಂಟ್ ಆಗಿ ಅಧಿಕಾರ ಮಾಡಲು ಬಿಡುತ್ತಿಲ್ಲ, ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಾಜ್ಯದಲ್ಲಿ ನೂತನವಾಗಿ 1 ಸಾವಿರ ಮದ್ಯದಂಗಡಿಗಳ ಚಾಲನೆ ವಿಷಯದಲ್ಲಿ ಡಿ.ಕೆ. ಶಿವಕುಮಾರ ಪ್ರಾರಂಭಿಸುತ್ತೇವೆ ಎನ್ನುತ್ತಾರೆ. ಸಿಎಂ ಸಿದ್ದರಾಮಯ್ಯ ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ ಎನ್ನುತ್ತಿದ್ದು ಇದು ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಅಲ್ಕೋಡ ಹನಮಂತಪ್ಪ ಹೇಳಿದರು.

ಅವರು ಶನಿವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೂತನ ಸರ್ಕಾರ ಅಧಿಕಾರಕ್ಕೆ ಬಂದು ಹಲವಾರು ತಿಂಗಳುಗಳೇ ಕಳೆದಿದ್ದರೂ ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ಏನೇ ಮಾತನಾಡಿದರೂ ಗ್ಯಾರಂಟಿ ಬಗ್ಗೆಯೇ ಮಾತನಾಡುತ್ತಾರೆ. ರಾಜ್ಯದ ಜನರಿಗೆ ಮೂಲಭೂತ ಸೌಲಭ್ಯ ಕೊಡುವುದನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದ್ದು ಇದೊಂದು ಜನ ವಿರೋಧಿ ಸರ್ಕಾರವಾಗಿದೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ತಮ್ಮ ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ, ಶಕ್ತಿ ಯೋಜನೆಯೊಂದನ್ನು ಬಿಟ್ಟು ಬೇರೆ ಯಾವ ಯೋಜನೆಗಳನ್ನು ಶೇ 100ರಷ್ಟು ಅನುಷ್ಠಾನ ಮಾಡಿದ್ದಾರೆ ಎಂದು ಆರೋಪಿಸಿದರು. ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಈಗ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ತೀವ್ರವಾದ ಬರಗಾಲ ಆವರಿಸಿದೆ, ಇವರು ಇದುವರೆಗೂ ಉದ್ಯೋಗ ಖಾತ್ರಿ ಯೋಜನೆಯೊಂದನ್ನೇ ನೆಚ್ಚಿಕೊಂಡು ಕುಳಿತಿದ್ದು, ಹುಬ್ಬಳ್ಳಿ ಧಾರವಾಡದಂತಾ ದೊಡ್ಡ ನಗರಗಳಲ್ಲಿಯೇ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಗ್ರಾಮೀಣ ಪ್ರದೇಶದ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮುಖ್ಯಮಂತ್ರಿಗಳು, ಸರ್ಕಾರದ ಪ್ರಮುಖರು ಗಮನಿಸಬೇಕು. ಸರ್ಕಾರದ ವೈಫಲ್ಯಗಳನ್ನು ಖಂಡಿಸಿ, ಪ್ರಬಲ ವಿರೋಧ ಪಕ್ಷವಾಗಿ ಜೆಡಿಎಸ್ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಹಿಳಾ ಘಟಕದ ಮಂಜುಳಾ, ಅನೀಲಕುಮಾರ, ಪ್ರಭುರಾಜಗೌಡ ಪಾಟೀಲ, ಸಿ.ಎಸ್. ಪಾಟೀಲ, ಸೋಂಪೂರ, ಸಿ.ಎಸ್. ಹಿರೇಮನಿಪಾಟೀಲ, ಯಲ್ಲಪ್ಪ, ಅಂದಾನಪ್ಪ ಮುಂತಾದವರು ಹಾಜರಿದ್ದರು.

12ರಂದು ಹುಬ್ಬಳ್ಳಿಯಲ್ಲಿ ಜೆಡಿಎಸ್‌ ಪುನಶ್ಚೇತನ ಶಿಬಿರ:ಅಕ್ಟೋಬರ್ 12ರಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ಪುನಶ್ಚೇತನ ಕುರಿತು ಮಹತ್ವದ ಸಭೆ ಪಕ್ಷದ ಹಿರಿಯರಾದ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ ಜಿಲ್ಲೆಗಳಿಂದ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು, ತಾಪಂ, ಜಿಪಂ ಮಾಜಿ ಸದಸ್ಯರು, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಅಲ್ಕೋಡ್ ಹನಮಂತಪ್ಪ ಹೇಳಿದರು.