ಐಎಫ್‌ಎಸ್‌ ಪರೀಕ್ಷೆಯಲ್ಲಿ ಸಿರಿಗೆರೆಯಕಾವ್ಯಗೆ ರಾಷ್ಟ್ರಮಟ್ಟದಲ್ಲಿ ೭ನೇ ಸ್ಥಾನ

| Published : May 10 2024, 01:34 AM IST

ಐಎಫ್‌ಎಸ್‌ ಪರೀಕ್ಷೆಯಲ್ಲಿ ಸಿರಿಗೆರೆಯಕಾವ್ಯಗೆ ರಾಷ್ಟ್ರಮಟ್ಟದಲ್ಲಿ ೭ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯರದಕೆರೆ ಗ್ರಾಮದ ವೈ.ಎಸ್.‌ಕಾವ್ಯ ಇದೀಗ ರಾಷ್ಟ್ರಮಟ್ಟದ ಐ.ಎಫ್.‌ಎಸ್.‌ ಪರೀಕ್ಷೆಯಲ್ಲಿ ಏಳನೆಯ ಸ್ಥಾನ ಗಳಿಸಿ ಸಾಧನೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಐ.ಎ.ಎಸ್.‌ ಪರೀಕ್ಷೆಗೆ ಓದಲೇಬೇಕೆಂದು ಛಲತೊಟ್ಟಿದ್ದ ಸಿರಿಗೆರೆಯ ವಿದ್ಯಾರ್ಥಿನಿ ವೈ.ಎಸ್.‌ಕಾವ್ಯ ಇದೀಗ ರಾಷ್ಟ್ರಮಟ್ಟದ ಐ.ಎಫ್.‌ಎಸ್.‌ ಪರೀಕ್ಷೆಯಲ್ಲಿ ಏಳನೆಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯು ನಡೆಸುತ್ತಿರುವ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈ.ಎಸ್.‌ಕಾವ್ಯ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯರದಕೆರೆ ಗ್ರಾಮದವರು. ತಂದೆ ಸೋಮಶೇಖರಪ್ಪ ತಾಯಿ ರತ್ನಮ್ಮ ಇವರ ಮಗಳು.ಕಡೂರು ಪಟ್ಟಣದಲ್ಲಿ ತರಳಬಾಳು ಸಂಸ್ಥೆಯು ನಡೆಸುತ್ತಿರುವ ವೇದಾವತಿ ಬಾಲಿಕಾ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ಕಾವ್ಯ ಬಿ.ಎಲ್.ಆರ್.‌ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಕೆಲವೇ ಅಂಕಗಳ ವ್ಯತ್ಯಾಸದಿಂದ ಬಂಗಾರದ ಪದಕ ವಂಚಿತೆಯಾಗಿದ್ದ ಕಾವ್ಯ ಅವರಲ್ಲಿ ಓದುವ ಛಲವಿತ್ತು. ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಕಾವ್ಯ ನಂತರ ಇಂಜಿನಿಯರಿಂಗ್‌ ಪದವಿ ಮುಗಿಸಿ ಕೆಲವು ಕಾಲ ಮೈಂಡ್‌ ಟ್ರೀ ಕಂಪನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿದರೂ ಅವರಲ್ಲಿ ಐಎಎಸ್‌ ಪರೀಕ್ಷೆ ಪಾಸು ಮಾಡುವ ತವಕ ಇದ್ದೇ ಇತ್ತು. ಹುದ್ದೆಯನ್ನು ತ್ಯಜಿಸಿ ದೆಹಲಿಯ ಖಾಸಗಿ ತರಬೇತಿ ಸಂಸ್ಥೆ ಸೇರಿ ಕೊಂಡರು. ಹಣಕಾಸಿನ ಮುಗ್ಗಟ್ಟಿನಿಂದ ವರ್ಷದೊಳಗೆ ಮತ್ತೆ ಬೆಂಗಳೂರಿಗೆ ಹಿಂದಿರುಗಿ ತನ್ನ ಅಪೇಕ್ಷೆಯನ್ನು ಈಡೇರಿಸುವ ಸಲುವಾಗಿ ಹಟಕ್ಕೆ ಬಿದ್ದವರಂತೆ ಓದಲು ಮುಂದಾದರು. ಮೊದಲೇ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕುಟುಂಬವಾದ್ದರಿಂದ, ಎಲ್ಲಿಯೂ ತರಬೇತಿಗೆ ಹೋಗದೆ, ಸಿಕ್ಕ ಪುಸ್ತಕಗಳನ್ನೆಲ್ಲಾ ರಾಶಿ ಹಾಕಿಕೊಂಡು ಒಂಟಿಯಾಗಿ ಓದಿದರು. ಪರಿಣಾಮವಾಗಿ ಇದೀಗ ಅವರು ರಾಷ್ಟ್ರಮಟ್ಟದ ಐ.ಎಫ್.‌ಎಸ್.‌ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ.