ಮನೆಯಿಂದ ಮತ ಚಲಾಯಿಸಿ ಖುಷಿ ಪಟ್ಟ ಹಿರಿಯರು

| Published : Apr 26 2024, 12:48 AM IST

ಸಾರಾಂಶ

ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮನೆಗೆ ಬಂದ ಚುನಾವಣೆಯ ಸಿಬ್ಬಂದಿಯೊಂದಿಗೆ ಮೊದಲನೇ ದಿನದಂದು ಖುಷಿಯಿಂದ ಮತ ಚಲಾಯಿಸಿದರು.

- ಮನೆಯಿಂದಲೇ ಮತ ಚಲಾಯಿಸಿದ 85 ವರ್ಷದ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ತಾಲೂಕಿನಲ್ಲಿ ವಿವಿಧ ಬೂತ್ ಮಟ್ಟದಲ್ಲಿ ನೊಂದಣಿ ಮಾಡಿಕೊಂಡ 85 ವರ್ಷ ಮೇಲ್ಪಟ್ಟದ ಹಿರಿಯ ನಾಗರಿಕರು ಹಾಗು ಅಂಗವಿಕಲರು ಮನೆಗೆ ಬಂದ ಚುನಾವಣೆಯ ಸಿಬ್ಬಂದಿಯೊಂದಿಗೆ ಮೊದಲನೇ ದಿನದಂದು ಖುಷಿಯಿಂದ ಮತ ಚಲಾಯಿಸಿದರು.

ಮನೆಯಿಂದಲೇ ಮತ ಚಲಾಯಿಸಿದ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಹಿರಿಯ ಮತದಾರ ಶಿವಾನಂದಪ್ಪ ಚಂಡೂರು ಮಾತನಾಡಿ, 85 ವರ್ಷದ ಹಿರಿಯ ನಾಗರಿಕರು ಹಾಗು ಅಂಗವಿಕಲರಿಗೆ ಮತಗಟ್ಟೆಗೆ ಹೋಗಿ ಚಲಾಯಿಸಲು ಸಾಧ್ಯವಾಗುವುದಿಲ್ಲ. ಚುನಾವಣೆ ಸಿಬ್ಬಂದಿ ಮನೆ ಬಾಗಲಿಗೆ ಬಂದು ಮತ ಚಲಾಯಿಸಲು ಅವಕಾಶ ನೀಡಿರುವ ಚುನಾವಣೆ ಆಯೋಗದ ಕ್ರಮದ ಕುರಿತು ಖುಷಿಪಟ್ಟರು.

ದೇಶದಲ್ಲಿ ಸುಭದ್ರ ಸರ್ಕಾರ ನಿರ್ಮಾಣದಲ್ಲಿ ಪ್ರತಿ ಮತವು ಕೂಡಾ ಅಮೂಲ್ಯವಾದದ್ದು. ಚುನಾವಣೆ ಆಯೋಗದ ಈ ರೀತಿಯ ಕ್ರಮದಿಂದ ಹಿರಿಯ ನಾಗರಿಕರು ಹಾಗು ಅಂಗವಿಕಲರು ಮತದಾನದಿಂದ ವಂಚಿತರಾಗುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದರು. ನಾನು ಮತದಾನ ಮಾಡಿದ್ದೇನೆ, ತಪ್ಪದೇ ನೀವು ಕೂಡಾ ಮತ ಚಲಾಯಿಸಿರೆಂದು ಕರೆ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಾಲೂಕು ಸ್ವೀಪ್‌ ನೋಡಲ್‌ ಅಧಿಕಾರಿ ಹನಮಂತಪ್ಪ, ಹಲಗೇರಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಶೋಕ ರಾಂಪುರ, ಜಿಲ್ಲಾ ಎಸ್‌ಬಿಎಂ ಐಇಸಿ ಸಂಯೋಜಕ ಮಾರುತಿ ನಾಯಕರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್‌ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

ಮನೆಯಿಂದಲೇ ಮತದಾನಕ್ಕೆ ಅಗತ್ಯ ಕ್ರಮ:

ಲೋಕಸಭಾ ಚುನಾವಣೆ ಹಿನ್ನೆಲೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರ ಪೈಕಿ 12 ಡಿ ಮುಖಾಂತರ ಅರ್ಜಿ ಸಲ್ಲಿಸಿ ಮನೆಯಿಂದಲೇ ಮತದಾನ ಮಾಡಲು ಆಯ್ಕೆ ಮಾಡಿದ ಮತದಾರರಿಗೆ ಗುರುವಾರದಿಂದ (ಏ.25ರಿಂದ ಏ.30 ರವರೆಗೆ) ಅವರ ಮನೆಗೆ ತೆರಳಿ ಮತದಾನ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಜರುಗಿಸುವರು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ರೂಟ್ ಮತ್ತು ತಂಡಗಳ ವಿವರ:

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ರೂಟ್‌ಗಳನ್ನು ಮತ್ತು ತಂಡಗಳನ್ನು ರಚಿಸಲಾಗಿದೆ. ಅದರ ವಿವರ ಇಂತಿದೆ.

58-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ತಲಾ 7 ರೂಟ್ ಹಾಗೂ ತಂಡಗಳು, 59-ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 10 ರೂಟ್ ಹಾಗೂ ತಂಡಗಳು, 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 12 ರೂಟ್ ಹಾಗೂ ತಂಡಗಳು, 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 10 ರೂಟ್ ಹಾಗೂ ತಂಡಗಳು, 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 9 ರೂಟ್ ಹಾಗೂ ತಂಡಗಳು, 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ತಲಾ 9 ರೂಟ್ ಹಾಗೂ ತಂಡಗಳು, 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತಲಾ 22 ರೂಟ್ ಹಾಗೂ ತಂಡಗಳು ಮತ್ತು 92-ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ರೂಟ್ ಹಾಗೂ ತಂಡ ರಚಿಸಲಾಗಿದೆ.

ಮನೆಯಿಂದಲೇ ಮತದಾನಕ್ಕಾಗಿ ಅರ್ಜಿ ಸಲ್ಲಿಸಿದ ಮತದಾರರು ಏ.25 ರಿಂದ ಏ.30ರವರೆಗೆ ತಾವು ನೀಡಿದ ವಿಳಾಸದ ಮನೆಗಳಲ್ಲಿ ಹಾಜರಿದ್ದು, ಮತ ಚಲಾಯಿಸಬೇಕು ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.