ದತ್ತಪೀಠ ಅರ್ಚಕರ ಸಂಭಾವನೆಗೆ ಜೋಳಿಗೆ ಅಭಿಯಾನ

| Published : May 09 2024, 01:03 AM IST / Updated: May 09 2024, 01:04 AM IST

ಸಾರಾಂಶ

ಬಾಳೆಹೊನ್ನೂರು, ರಾಜ್ಯ ಸರ್ಕಾರ ದತ್ತಪೀಠ ವಿಚಾರದಲ್ಲಿ ಕೋರ್ಟ್ ಆದೇಶ ದಿಕ್ಕರಿಸಿರುವುದಲ್ಲದೇ ಹಿಂದೂ ವಿರೋಧಿ ನೀತಿ ಅನುಸರಿಸು ತ್ತಿದೆ. ಹಿಂದೂ ಅರ್ಚಕರ ನೇಮಕಾತಿ ಆದೇಶ ನೀಡಿದ್ದರೂ ಇದುವರೆಗೂ ಜಿಲ್ಲಾಡಳಿತ ಅರ್ಚಕರ ಸಂಭಾವನೆ ನೀಡದೆ ಮುಜಾವರ್‌ಗೆ ಮಾತ್ರ ತಿಂಗಳ ಸಂಬಳ ನೀಡುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಆರೋಪಿಸಿದ್ದಾರೆ.

ವಿಶ್ವಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಮಹೇಂದ್ರ ಎಚ್ಚರಿಕೆ

--

- ರಾಜ್ಯಸರ್ಕಾರದ ಇಬ್ಬಗೆ ನೀತಿ

- 2023ರ ಮಾರ್ಚ್ ನಲ್ಲಿ ಅರ್ಚಕರನ್ನು ನೇಮಿಸಿದೆ

- ಆಗಮ ಪದ್ಧತಿ ಪ್ರಕಾರ ದತ್ತಪೀಠದಲ್ಲಿ ತ್ರಿಕಾಲ ಪೂಜೆ

- ಕಾಣಿಕೆ ಹುಂಡಿಯಿಂದ 5-6 ಲಕ್ಷ ವಿದ್ದ ಆದಾಯ ಈಗ ವಾರ್ಷಿಕ 18-20 ಲಕ್ಷಕ್ಕೆ ಹೆಚ್ಚಿದೆ

- ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಆಚರಣೆಗೆ ಅಡಚಣೆ

- ಆದಾಯ ಸೋರಿಕೆ ತಡೆಯಬೇಕು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಜ್ಯ ಸರ್ಕಾರ ದತ್ತಪೀಠ ವಿಚಾರದಲ್ಲಿ ಕೋರ್ಟ್ ಆದೇಶ ದಿಕ್ಕರಿಸಿರುವುದಲ್ಲದೇ ಹಿಂದೂ ವಿರೋಧಿ ನೀತಿ ಅನುಸರಿಸು ತ್ತಿದೆ. ಹಿಂದೂ ಅರ್ಚಕರ ನೇಮಕಾತಿ ಆದೇಶ ನೀಡಿದ್ದರೂ ಇದುವರೆಗೂ ಜಿಲ್ಲಾಡಳಿತ ಅರ್ಚಕರ ಸಂಭಾವನೆ ನೀಡದೆ ಮುಜಾವರ್‌ಗೆ ಮಾತ್ರ ತಿಂಗಳ ಸಂಬಳ ನೀಡುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಆರೋಪಿಸಿದ್ದಾರೆ.ರಾಜ್ಯ ಸರ್ಕಾರ ತನ್ನ ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದು, ಇದು ಹೀಗೆ ಮುಂದುವರಿದರೆ ವಿಶ್ವ ಹಿಂದೂ ಪರಿಷತ್, ಬಜರಂಗಳ ದಿಂದ ರಾಜ್ಯಾದ್ಯಂತ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಜೋಳಿಗೆ ಅಭಿಯಾನ ಆರಂಭಿಸಲಾಗುವುದು ಎಂದು ಬುಧವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಈ ಹಿಂದೆ ಸರ್ಕಾರ ಕೋರ್ಟ್ ಆದೇಶದಂತೆ ಕ್ಯಾಬಿನೆಟ್ ಉಪಸಮಿತಿ ರಚಿಸಿ ದತ್ತಪೀಠದ ಸತ್ಯಾಸತ್ಯತೆಯನ್ನು ಸಾರ್ವಜನಿಕರ ಅಭಿಪ್ರಾಯ ಪಡೆದು ಮತ್ತು ದತ್ತಪೀಠದ ಸ್ಥಳ ತನಿಖೆ ಮಾಡಿ ಇತಿಹಾಸವನ್ನು ಕೋರ್ಟ್ ಮುಂದಿರಿಸಿ ಇದರ ಅನ್ವಯ 2023ರ ಮಾರ್ಚ್ ತಿಂಗಳಲ್ಲಿ ಅರ್ಚಕರನ್ನು ನೇಮಿಸಿದೆ. ದತ್ತಪೀಠಕ್ಕೆ ಇಬ್ಬರು ಅರ್ಚಕರ ನೇಮಕ ಬಳಿಕ ಅಂದಿ ನಿಂದ ಇಂದಿನವರೆಗೂ ಕೋರ್ಟಿನ ಆದೇಶದಂತೆ ಆಗಮ ಪದ್ಧತಿ ಪ್ರಕಾರ ದತ್ತಪೀಠದಲ್ಲಿ ತ್ರಿಕಾಲ ಪೂಜೆ ನೆರವೇರುತ್ತಿದೆ. ಆದರೆ ಇದುವರೆಗೂ ಅರ್ಚಕರಿಗೆ ಯಾವುದೇ ಸಂಭಾವನೆ ನೀಡಿಲ್ಲ. ಈ ಕುರಿತು ಸರ್ಕಾರ, ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮತ್ತು ದತ್ತಪೀಠ ವ್ಯವಸ್ಥಾಪನಾ ಸಮಿತಿಗೆ ಹಲವು ಬಾರಿ ಮನವಿ ಕೊಟ್ಟಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ.ಮೂಲತಃ ದತ್ತಪೀಠ ಹಿಂದೂಗಳ ಶ್ರದ್ಧಾಕೇಂದ್ರ. ಇಲ್ಲಿ ಆಗಮ ಪದ್ಧತಿ ಪ್ರಕಾರ ನಿತ್ಯ ಪೂಜೆ ನೆರವೇರಿಸಲು ದಿನನಿತ್ಯ ಪೂಜಾ ಸಾಮಾಗ್ರಿಗಳ ಅಗತ್ಯತೆ ಇದ್ದೆ ಇರುತ್ತದೆ. ಆದರೆ ಜಿಲ್ಲಾಧಿಕಾರಿ ಮತ್ತು ವ್ಯವಸ್ಥಾಪನಾ ಸಮಿತಿ ಇದುವರೆಗೂ ಒಂದೂ ಪೂಜಾ ಸಾಮಾಗ್ರಿ ನೀಡಿಲ್ಲ. ಜಿಲ್ಲಾಧಿಕಾರಿ ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಆಚರಣೆಗೆ ಅಡಚಣೆ ತರುವ ಉದ್ದೇಶದಿಂದ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.ಮಾತೆತ್ತಿದರೆ ದತ್ತಪೀಠದ ಆದಾಯದ ಬಗ್ಗೆ ಮಾತನಾಡುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ಹಿಂದೂ ಅರ್ಚಕರ ನೇಮಕ ಆಗುವ ಮೊದಲು ದತ್ತಪೀಠದಲ್ಲಿ ಕಾಣಿಕೆ ಹುಂಡಿಯಿಂದ ಕೇವಲ ರು.5-6 ಲಕ್ಷ ಆದಾಯವಿತ್ತು. ಆದರೆ ಇಂದು ಅರ್ಚಕರ ನೇಮಕವಾದ ನಂತರ ವಾರ್ಷಿಕ ವಾರ್ಷಿಕ ರು.18-20 ಲಕ್ಷಕ್ಕೆ ಹೆಚ್ಚಾಗಿದ್ದು, ಭಕ್ತರು ಶ್ರದ್ಧೆಯಿಂದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ ದತ್ತ ಪೀಠದ ಆವರಣದಲ್ಲಿ ಸಾಕಷ್ಟು ವಾಣಿಜ್ಯ ಮಳಿಗೆಗಳಿದ್ದು, ನೆಲಬಾಡಿಗೆ ಬರುತ್ತಿದೆ. ಇದ್ಯಾವುದನ್ನು ಒಂದು ವರ್ಷದಿಂದ ಹರಾಜು ಕರೆಯದೇ ನೇರವಾಗಿ ಓರ್ವ ವ್ಯಕ್ತಿ ಹೆಸರಿನಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಜಿಲ್ಲಾಧಿಕಾರಿ ದತ್ತಪೀಠದ ಕೋಟ್ಯಂತರ ರು. ಆದಾಯ ಸೋರಿಕೆಯಾಗುತ್ತಿರುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.ಇಷ್ಟೆಲ್ಲ ಆದಾಯವಿರುವ ದೇವಸ್ಥಾನದ ನಿತ್ಯ ಪೂಜೆ ಮಾಡುವ ಅರ್ಚಕರಿಗೆ ಸಂಭಾವನೆ ಕೊಡಲು ಹಣವಿಲ್ಲವೆನ್ನುವ ಜಿಲ್ಲಾಧಿಕಾರಿ ಧೂಪ ಮಾಡುವ ಮುಜಾವರ್‌ಗಳಿಗೆ ಪ್ರತಿ ತಿಂಗಳು ತಪ್ಪದೇ ಸಂಬಳ ನೀಡಲು ಹಣವಿದೆ ಎಂದಾದರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಬೇಕಾಗಿದೆ.ನಿಯಮ ಪ್ರಕಾರ ಪ್ರತಿನಿತ್ಯ ಅರ್ಚಕರ ಪೂಜಾ ಕೈಂಕರ್ಯ ಮುಗಿದ ಮೇಲೆ ಸಂಜೆ ಸಮಯದಲ್ಲಿ ಮುಜಾವರ್ ದತ್ತಪೀಠದ ಒಳಾಂಗಣದಲ್ಲಿ ಧೂಪ ಮಾಡಲು ಒಬ್ಬರೆ ಹೋಗಬೇಕಿದೆ. ಆದರೆ ಹಾಲಿ ಇರುವ ಮುಜಾವರ್ ತನ್ನ ಗುಂಪಿನೊಂದಿಗೆ ಹೋಗಿ ಘೋಷಣೆ ಕೂಗುತ್ತಿರುವುದು ಕಾನೂನು ಬಾಹಿರ. ಪೀಠದ ಒಳಾಂಗಣದಲ್ಲಿ ದತ್ತ ಪಾದುಕೆ, ಸಾಕಷ್ಟು ಪೂಜಾ ಸಾಮಾಗ್ರಿ ಮತ್ತು ಪರಿಕರಗಳು ಇರುತ್ತವೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಹಾನಿಯಾದರೆ ಜಿಲ್ಲಾಡಳಿತ ಮತ್ತು ವ್ಯವಸ್ಥಾಪನಾ ಸಮಿತಿಯೇ ನೇರ ಹೊಣೆ ಎಂದು ಹೇಳಿದರು.ದತ್ತಪೀಠದ ಒಳಾಂಗಣದಲ್ಲಿ ದಿನನಿತ್ಯ ಪೊಲೀಸ್ ಇರಬೇಕೆಂದು ಕೋರ್ಟ್ ಆದೇಶವಿದ್ದರೂ ಸಹ ಒಬ್ಬರೆ ಒಬ್ಬ ಪೊಲೀಸ್ ಸಹ ಇರುವುದಿಲ್ಲ. ಅಲ್ಲದೇ ದಿನನಿತ್ಯ ಬೇರೆ ಬೇರೆ ರಾಜ್ಯಗಳಿಂದ, ರಾಜ್ಯದ ನಾನಾ ಭಾಗಗಳಿಂದ ಅನ್ಯ ಮತದವರು ಬರುತ್ತಿದ್ದು, ಕೆಲವು ಅಪರಿಚಿತರು ಗರ್ಭಗುಡಿಯಲ್ಲಿ ಪೂಜೆ ಮಾಡುವ ಅರ್ಚಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮತ್ತು ಬೆದರಿಸುವಂತ ಪ್ರಕರಣ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಹೆಚ್ಚಿನ ಪೊಲೀಸ್ ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ಚುನಾವಣಾ ನೀತಿ ಸಂಹಿತೆ ಮುಗಿದ ಒಂದು ತಿಂಗಳ ಒಳಗೆ ಅರ್ಚಕರ ಸಂಭಾವನೆ ಹಣ ನೀಡದಿದ್ದರೆ ಸರ್ಕಾರ, ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನಾ ಸಮಿತಿ ವಿರುದ್ಧ ವಿಹಿಂಪ, ಬಜರಂಗದಳ ರಾಜ್ಯವ್ಯಾಪಿ ಅರ್ಚಕರ ಸಂಭಾವನೆಗೆ ಜೋಳಿಗೆ ಅಭಿಯಾನ ಆರಂಭಿಸಿ ಕಾರ್ಯಕರ್ತರು ಪ್ರತಿ ಹಿಂದೂ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಅರ್ಚಕರಿಗೆ ಸಂಭಾವನೆ ನೀಡಲಾಗುವುದು ಎಂದು ಮಹೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.೦೮ಬಿಹೆಚ್‌ಆರ್ ೪: ಆರ್.ಡಿ.ಮಹೇಂದ್ರ